;Resize=(412,232))
ಕುಶಾಲನಗರ(ಕೊಡಗು) : ಈ ಬಾರಿ ಮೈಸೂರು ದಸರಾ ಮಹೋತ್ಸವದಲ್ಲಿ ಅಂಬಾರಿ ಹೊರುವ ಅವಕಾಶವನ್ನು ದುಬಾರೆ ಶಿಬಿರದ ಧನಂಜಯ (46) ಅಥವಾ ಪ್ರಶಾಂತ್ (54)ಗೆ ನೀಡುವ ಸಾಧ್ಯತೆ ಅಧಿಕವಾಗಿದೆ.
ಸುಪ್ರೀಂಕೋರ್ಟ್ ನಿರ್ದೇಶನದಂತೆ 60 ವರ್ಷ ಮೀರಿದ ಆನೆಗಳನ್ನು ಕಠಿಣ ಕೆಲಸಗಳಿಗೆ ಬಳಕೆ ಮಾಡುವಂತಿಲ್ಲ, ಭಾರ ಹೊರಿಸುವಂತಿಲ್ಲ. ಹೀಗಾಗಿ ಕಳೆದ 6 ವರ್ಷಗಳಿಂದ ದಸರಾ ಉತ್ಸವದಲ್ಲಿ ಅಂಬಾರಿ ಹೊತ್ತು ಗಜಪಡೆ ಮುನ್ನಡೆಸಿದ್ದ ಕ್ಯಾಪ್ಟನ್ ಅಭಿಮನ್ಯು (61) ಈ ಬಾರಿ ದಸರಾದಲ್ಲಿ ಪಾಲ್ಗೊಳ್ಳುವಂತಿಲ್ಲ. ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಅಭಿಮನ್ಯುವನ್ನು ದಸರಾ ಆನೆಗಳ ಪಟ್ಟಿಯಿಂದ ಕೈಬಿಟ್ಟಿದ್ದಾರೆ. ಈ ಬಾರಿಯ ಅಂಬಾರಿ ಆನೆಯಾಗಿ ಧನಂಜಯ ಅಥವಾ ಪ್ರಶಾಂತ ಆನೆಗಳ ಹೆಸರು ಚಾಲ್ತಿಯಲ್ಲಿದೆ.
ಜೊತೆಗೆ ಬಳ್ಳೆ ನಾಗರಹೊಳೆಯ ಆನೆ ಶಿಬಿರದ ಮಹೇಂದ್ರ (42) ಹೆಸರು ಕೂಡ ಪಟ್ಟಿಯಲ್ಲಿದೆ. ಇವುಗಳಲ್ಲಿ ಒಂದಕ್ಕೆ ಅಂಬಾರಿ ಆನೆ ಪಟ್ಟ ಕಟ್ಟುವ ಬಗ್ಗೆ ಚರ್ಚೆ ನಡೆಯುತ್ತಿದೆ. ಧನಂಜಯ ಹಾಸನ ಎಸಳೂರು ಅರಣ್ಯದಿಂದ ಸೆರೆಹಿಡಿದು ದುಬಾರೆ ಶಿಬಿರಕ್ಕೆ ಸೇರ್ಪಡೆಗೊಂಡಿದ್ದು, ಇದುವರೆಗೆ 7 ಬಾರಿ ದಸರಾದಲ್ಲಿ ಪಾಲ್ಗೊಂಡ ಹೆಗ್ಗಳಿಕೆ ಇದೆ.
ಮಾವುತ ಜೆ.ಸಿ ಭಾಸ್ಕರ, ಕಾವಾಡಿಗ ಜೆ.ಎಸ್. ರಾಜಣ್ಣ ಧನಂಜಯ ಆನೆಯನ್ನು ಆರೈಕೆ ಮಾಡುತ್ತಿದ್ದಾರೆ. ಪ್ರಶಾಂತ್ 1993ರಲ್ಲಿ ಕಾರೆಕೊಪ್ಪ ಅರಣ್ಯದಿಂದ ಸೆರೆಹಿಡಿದು ದುಬಾರೆ ಶಿಬಿರ ಸೇರ್ಪಡೆಗೊಂಡಿದ್ದು, ದಸರಾದಲ್ಲಿ 16 ಬಾರಿ ಪಾಲ್ಗೊಂಡ ಅನುಭವ ಇದೆ. ಮಾವುತ ಜೆ.ಚಿನ್ನಪ್ಪ ಕಾವಡಿಗ ಚಂದ್ರ ಅವರು ಪ್ರಶಾಂತ್ ಆನೆ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.