ಹುಬ್ಬಳ್ಳಿ : ಧರ್ಮಸ್ಥಳ ಗ್ರಾಮದಲ್ಲಿ ಹೆಣಗಳನ್ನು ಹೂತಿರುವ ಆರೋಪದ ವಿಷಯದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳ ಮೇಲೆ ವ್ಯವಸ್ಥಿತವಾಗಿ ದಾಳಿ ಮಾಡುವ ಸಂಚು ಅಡಗಿದೆ. ಇದರಲ್ಲಿ ಎಡಪಂಥೀಯರ ಷಡ್ಯಂತ್ರವಿದ್ದು, ರಾಜ್ಯ ಸರ್ಕಾರ ತಕ್ಷಣ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ನಾವು ತೀವ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಎಚ್ಚರಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಶಿ ವಿಶ್ವನಾಥನೇ ಧರ್ಮಸ್ಥಳದಲ್ಲಿ ಮಂಜುನಾಥನ ರೂಪದಲ್ಲಿ ನೆಲೆಸಿದ್ದಾನೆ ಎಂಬ ನಂಬಿಕೆ ಭಕ್ತರಲ್ಲಿದೆ. ದಕ್ಷಿಣ ಭಾರತದ ಅತಿದೊಡ್ಡ ಶ್ರದ್ಧಾ ಕೇಂದ್ರವಾಗಿ ಧರ್ಮಸ್ಥಳ ಹೊರಹೊಮ್ಮಿದೆ. ಆದರೆ, ಈಗ ತನಿಖೆಯ ಹೆಸರಲ್ಲಿ ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆ ತರುವ ಮತ್ತು ಹಿಂದೂಗಳ ಮೇಲೆ ಮಾನಸಿಕವಾಗಿ ದಾಳಿ ನಡೆಸುವ ಕೆಲಸವಾಗುತ್ತಿದೆ. ಎಡಪಂಥೀಯರು ಭಾರತೀಯರ, ಹಿಂದೂಗಳ ನಂಬಿಕೆ ಮೇಲೆ ಘಾಸಿ ಮಾಡುತ್ತಿದ್ದಾರೆ, ಇದು ಒಪ್ಪುವಂತಹದ್ದಲ್ಲ. ಇದು ಎಡಪಂಥೀಯರ ಟೂಲ್‌ಕಿಟ್‌ನ ಒಂದು ಭಾಗ ಎಂದು ಕಿಡಿಕಾರಿದರು.
ಅನಾಮಿಕನನ್ನು ರಾತ್ರಿ ಹೊತ್ತು ಯಾಕೆ ಕಸ್ಟಡಿಯಲ್ಲಿಟ್ಟುಕೊಳ್ಳುತ್ತಿಲ್ಲ? ಆತ ರಾತ್ರಿ ಎಲ್ಲಿಗೋ ಹೋಗುತ್ತಾನೆ. ಬೆಳಗ್ಗೆ ಬಂದು ಒಂದೊಂದು ಜಾಗ ತೋರಿಸುತ್ತಾನೆ. ಮೊದಲು ಆತ 13 ಜಾಗ ತೋರಿಸಿದ್ದ, ಈಗ 17 ಜಾಗ ಗುರುತಿಸಿ, ತನಿಖೆ ನಡೆಸಲಾಗುತ್ತಿದೆ. ಆತನ ಹೇಳಿಕೆ ಆಧರಿಸಿ ಬಾಹುಬಲಿ ಮೂರ್ತಿಯ ಪಕ್ಕದ ಜಾಗದಲ್ಲೂ ಅಗೆದಿರುವುದಾಗಿ ಮಾಹಿತಿ ಬಂದಿದೆ. ಆತ ಹೇಳಿದಂತೆ ಎಸ್‌ಐಟಿ ಎಲ್ಲ ಸ್ಥಳಗಳಲ್ಲಿ ಅಗೆಯುವ ಕೆಲಸ ಮಾಡುತ್ತಿದೆ. ಸರ್ಕಾರವು ಇದಕ್ಕೆ ಸ್ಪಂದನೆ ನೀಡುತ್ತಿರುವುದು ವಿಪರ್ಯಾಸ. ಈ ಹಿಂದೆ ಅಗೆದ ಸ್ಥಳಗಳಲ್ಲಿ ಇಲ್ಲಿವರೆಗೂ ಏನೂ ಸಿಕ್ಕಿಲ್ಲ. ಸಿಕ್ಕಿದ್ದರೆ ಜನರಿಗೆ ಈ ಕುರಿತು ಮಾಹಿತಿ ನೀಡಿ ಎಂದರು.
ಈ ಹಿಂದೆ ಶಬರಿಮಲೆ, ತಿರುಪತಿಯಲ್ಲೂ ಹೀಗೆಯೇ ಆರೋಪ ಮಾಡಿ, ಹಿಂದೂಗಳ ಭಾವನೆಗೆ ಘಾಸಿ ಮಾಡಲಾಗಿತ್ತು. ಕೇವಲ ಹಿಂದೂ ಧರ್ಮದ ವಿಚಾರದಲ್ಲಿ ಈ ರೀತಿ ನಡೆದುಕೊಳ್ಳುವ ಸರ್ಕಾರಕ್ಕೆ ಅನ್ಯ ಧರ್ಮದವರ ಧಾರ್ಮಿಕ ಕೇಂದ್ರದಲ್ಲೂ ಶವ ಹೂತಿದ್ದೇವೆ ಎಂದು ಯಾರಾದರೂ ಆರೋಪಿಸಿದರೆ, ಅಲ್ಲಿ ಉತ್ಖನನ ಮಾಡುವ ತಾಕತ್ತು ಇದೆಯೇ? ಎಂದು ಅವರು ಪ್ರಶ್ನಿಸಿದರು.
ಜನಸಾಮಾನ್ಯರು ಜಾನುವಾರು ಮೇಯಿಸಲು ಅರಣ್ಯ ಪ್ರದೇಶಕ್ಕೆ ಹೋದರೆ ಅರಣ್ಯ ಇಲಾಖೆ ಪ್ರಕರಣ ದಾಖಲಿಸುತ್ತದೆ. ಈಗ ಅರಣ್ಯ ಪ್ರದೇಶದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಅಗೆಯುತ್ತಿದ್ದಾರೆ. ಇದಕ್ಕೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆದಿದ್ದಾರಾ? ಎಂದು ಅವರು ಪ್ರಶ್ನಿಸಿದರು.