ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸೋಮವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಇಂದಿರಾ ಭವನದಲ್ಲಿ ಭೇಟಿಯಾಗಿ ಅರ್ಧಗಂಟೆಗೂ ಹೆಚ್ಚು ಕಾಲ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತು ಮಾತುಕತೆ ನಡೆಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ದೆಹಲಿಯಲ್ಲಿ ನಾನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿಲ್ಲ. ಕೆಲವರಿಗೆ ನನ್ನನ್ನು ನೆನಪಿಸಿಕೊಳ್ಳದಿದ್ದರೆ ನಿದ್ದೆ ಬರುವುದಿಲ್ಲ ಎಂದು ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದರು.
ಮೇಕೆದಾಟು ಕೇಸ್ ನಾಳೆ (ಮಂಗಳವಾರ) ಇತ್ತು. ಆದರೆ, ಸಾಂವಿಧಾನಿಕ ಪೀಠ ವಿಚಾರಣೆ ಕೂರುವ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿದೆ ಎಂದರು.
ಆಲಮಟ್ಟಿ ಎತ್ತರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಿಎಂ ದೇವೆಂದ್ರ ಫಡ್ನವಿಸ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಆ ಕುರಿತು ಕೇಂದ್ರ ಸಚಿವರು, ಬಿಜೆಪಿ ಸಂಸದರು ಉತ್ತರ ಕೊಡಬೇಕು. ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ಶೋಭಾ ಕರಂದ್ಲಾಜೆ ಅವರು ಆಲಮಟ್ಟಿ ಬಗ್ಗೆ ಮಾತನಾಡಬೇಕು ಎಂದರು.