ಬೆಂಗಳೂರು : ರಸ್ತೆ ಗುಂಡಿಗಳನ್ನು ಮುಚ್ಚಲು ವಿಫಲರಾಗುವ ಗುತ್ತಿಗೆದಾರರ ಟೆಂಡರ್ ರದ್ದು ಮಾಡಲಾಗುತ್ತದೆ ಅಲ್ಲದೇ, ಗುಂಡಿ ಮುಚ್ಚುವ ಕಾರ್ಯದಲ್ಲಿ ವಿಫಲವಾಗುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ತಿಳಿಸಿದ್ದಾರೆ.
ಸೋಮವಾರ ತಮ್ಮ ಕಚೇರಿಯಲ್ಲಿ ಅಧಿಕಾರಿಗಳು, ಎಂಜಿನಿಯರ್‌ಗಳ ಸಭೆ ನಡೆಸಿದ ಅವರು, ರಸ್ತೆ ಗುಂಡಿ ಮುಚ್ಚಲು ಉಪಮುಖ್ಯಮಂತ್ರಿಯವರು ನಿರಂತರವಾಗಿ ನಿರ್ದೇಶನ ನೀಡುತ್ತಿದ್ದಾರೆ. ಅದರಂತೆ ಗುತ್ತಿಗೆದಾರರು ತುರ್ತಾಗಿ ಕಾಮಗಾರಿಗಳನ್ನು ನಿರ್ವಹಣೆ ಮಾಡಲು ಸೂಚಿಸಲಾಗುತ್ತಿದೆ. ಕಳೆದೆರೆಡು ದಿನಗಳಲ್ಲಿ 3,182 ಚ.ಮೀ. ವಿಸ್ತೀರ್ಣದ ಪ್ಯಾಚ್ ವರ್ಕ್ ಹಾಗೂ 228 ಗುಂಡಿಗಳನ್ನು ಮುಚ್ಚಲಾಗಿದೆ ಎಂದರು.
ಬಿ-ಸ್ಮೈಲ್‌ನಿಂದ ರೇಸ್ ಕೋರ್ಸ್ ರಸ್ತೆ, ಕಬ್ಬನ್ ರಸ್ತೆ ಹಾಗೂ ಇತರೆ ಪ್ರಮುಖ ರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಟೆಂಡರ್ ಪಡೆದಿರುವ ಗುತ್ತಿಗೆದಾರರಿಗೆ ತುರ್ತಾಗಿ ಗುಂಡಿ ಮುಚ್ಚಲು ಅನೇಕ ಬಾರಿ ಸೂಚಿಸಲಾಗಿದೆ. ಆದರೂ, ಗುಂಡಿ ಮುಚ್ಚದ ಕಾರಣ ಕಡೆಯದಾಗಿ 3 ದಿನಗಳ ಗಡುವು ನೀಡಲಾಗಿದೆ. ಆಗಲೂ ನಿರ್ಲಕ್ಷ ತೋರಿದರೆ ಗುತ್ತಿಗೆದಾರರ ಟೆಂಡರ್ ರದ್ದುಗೊಳಿಸಲು ಕ್ರಮ ಕೈಗೊಳ್ಳುತ್ತೇವೆ. ಅಲ್ಲದೇ, ಪಾಲಿಕೆಯಿಂದಲೇ ರಸ್ತೆ ಗುಂಡಿಗಳನ್ನು ಮುಚ್ಚಿ, ತಗುಲುವ ವೆಚ್ಚವನ್ನು ಗುತ್ತಿಗೆದಾರರಿಂದಲೇ ವಸೂಲಿ ಮಾಡಲು ಕ್ರಮ ವಹಿಸಲಾಗುತ್ತದೆ ಎಂದು ಚೋಳನ್ ಹೇಳಿದರು.
ನಿರ್ದಾಕ್ಷಿಣ್ಯ ಕ್ರಮ:
ಎಂಜಿನಿಯರ್‌ಗಳು ತಮ್ಮ ವ್ಯಾಪ್ತಿಯಲ್ಲಿ ವಾರ್ಡ್‌ವಾರು ಗುಂಡಿಗಳ ಪಟ್ಟಿ ಮಾಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ಗುಂಡಿ ಮುಚ್ಚಲು ವಿಫಲರಾಗುವ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಚೋಳನ್ ಎಚ್ಚರಿಗೆ ನೀಡಿದರು.
ದಂಡ ವಿಧಿಸಿ:
ಜಲಮಂಡಳಿಯಿಂದ ರಸ್ತೆ ಅಗೆದು ಕಾಮಗಾರಿ ನಡೆಸಿ, ಪುನರ್ ನಿರ್ಮಿಸದಿದ್ದಲ್ಲಿ ಅಂತಹ ಗುತ್ತಿಗೆದಾರರಿಗೆ ದಂಡ ವಿಧಿಸಬೇಕು. ಕಾಮಗಾರಿ ತ್ಯಾಜ್ಯ ತೆರವುಗೊಳಿಸದಿದ್ದರೆ ಅದಕ್ಕೂ ದಂಡ ವಿಧಿಸಿ, ಅವರ ಸಾಮಗ್ರಿಗಳನ್ನು ವಶಕ್ಕೆ ಪಡೆಯಲು ಅವರು ಸೂಚಿಸಿದರು.