ಶಾಸಕ ಎಸ್. ಎನ್. ನಾರಾಯಣಸ್ವಾಮಿ ಮತ್ತು ತಹಸೀಲ್ದಾರ್ ವೆಂಕಟೇಶಪ್ಪ ನಡುವೆ ಶೀತಲ ಸಮರ

KannadaprabhaNewsNetwork | Updated : Nov 30 2024, 04:28 AM IST

ಸಾರಾಂಶ

ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮತ್ತು ತಹಸೀಲ್ದಾರ್ ವೆಂಕಟೇಶಪ್ಪ ನಡುವೆ ಹೊಂದಾಣಿಕೆ ಇಲ್ಲದೆ ಇಬ್ಬರ ನಡುವೆ ಶೀತಲ ಸಮರ ನಡೆಯುತ್ತಿದ್ದು, ತಹಸೀಲ್ದಾರ್‌ರನ್ನು ಇಲ್ಲಿಂದ ಎತ್ತಂಗಡಿ ಮಾಡಿಸಲು ಕಾಣದ ಕೈಗಳು ತೆರೆಮರೆಯಲ್ಲಿ ಪ್ರಯತ್ನ ಮಾಡುತ್ತಿರುವುದಾಗಿ ತಿಳಿದು ಬಂದಿದೆ.

 ಬಂಗಾರಪೇಟೆ : ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮತ್ತು ತಹಸೀಲ್ದಾರ್ ವೆಂಕಟೇಶಪ್ಪ ನಡುವೆ ಹೊಂದಾಣಿಕೆ ಇಲ್ಲದೆ ಇಬ್ಬರ ನಡುವೆ ಶೀತಲ ಸಮರ ನಡೆಯುತ್ತಿದ್ದು, ತಹಸೀಲ್ದಾರ್‌ರನ್ನು ಇಲ್ಲಿಂದ ಎತ್ತಂಗಡಿ ಮಾಡಿಸಲು ಕಾಣದ ಕೈಗಳು ತೆರೆಮರೆಯಲ್ಲಿ ಪ್ರಯತ್ನ ಮಾಡುತ್ತಿರುವುದಾಗಿ ತಿಳಿದು ಬಂದಿದೆ.

ತಹಸೀಲ್ದಾರ್ ಆಗಿ ತಾಲೂಕಿಗೆ ವರ್ಗಾವಣೆಯಾಗಿ ಬಂದು ವೆಂಕಟೇಶಪ್ಪ ಕೇವಲ ನಾಲ್ಕು ತಿಂಗಳು ಮಾತ್ರ ಕಳೆದಿದ್ದು ಅಷ್ಟರಲ್ಲೆ ಇವರನ್ನು ವರ್ಗಾವಣೆ ಮಾಡಿಸಲು ಮುಂದಾಗಿರುವುದು ಎಲ್ಲರ ಚರ್ಚೆ ಗ್ರಾಸವಾಗಿದೆ.

ಇಬ್ಬರ ನಡುವ ಶೀತಲ ಸಮರ

ಶಾಸಕ ನಾರಾಯಣಸ್ವಾಮಿ ಮತ್ತು ತಹಸೀಲ್ದಾರ್ ಇಬ್ಬರ ನಡುವೆ ಯಾವುದೇ ವಿಷಯದಲ್ಲಿ ಹೊಂದಾಣಿಕೆಯಾಗದೆ ನಾದೊಂದು ತೀರ ನೀನೊಂದು ತೀರ ಎಂಬಂತಿದ್ದಾರೆ. ಶಾಸಕರೇ ತಹಸೀಲ್ದಾರ್ ವೆಂಕಟೇಶಪ್ಪರನ್ನು ತಾಲೂಕಿಗೆ ವರ್ಗಾವಣೆ ಮಾಡಿಸಿಕೊಂಡು ಬಂದಿದ್ದು, ಈಗ ಇಬ್ಬರ ನಡುವೆ ನಿತ್ಯಶೀತಲ ಸಮರ ನಡೆಯುತ್ತಿರುವುದು ಆಶ್ಚರ್ಯ ಮೂಡಿಸಿದೆ.ಈ ಹಿಂದೆ ಇದ್ದ ತಹಸೀಲ್ದಾರ್ ದಯಾನಂದ್ ಹಾಗೂ ಶಾಸಕರಿಗೂ ಸಹ ಹೊಂದಾಣಿಕೆಯಾಗದೆ ನಿತ್ಯ ಸಮಯ ಸಿಕ್ಕಾಗಲೆಲ್ಲಾ ಬಹಿರಂಗವಾಗಿ ವೇದಿಕೆಗಳಲ್ಲಿ ಶಾಸಕರು ದಯಾನಂದ್‌ರನ್ನು ಟೀಕೆಯ ಸುರಿಮಳೆ ಮಾಡುತ್ತಿದ್ದರು. ಅಲ್ಲದೆ ಅವರನ್ನು ತಾಲೂಕಿನಿಂದ ಎತ್ತಂಗಡಿಗೂ ಯತ್ನಿಸಿದ್ದರು. ಆದರೆ ಎತ್ತಂಗಡಿಯಾದ ಮರುದಿನವೇ ಅವರು ಮತ್ತೆ ಇಲ್ಲಿಗೇ ವರ್ಗಾಯಿಸಿಕೊಂಡು ಬಂದು ಶಾಸಕರಿಗೆ ಟಾಂಗ್ ನೀಡಿದ್ದರು.

ಹಿಂದಿನ ತಹಸೀಲ್ದಾರ್‌ ಎತ್ತಂಗಡಿ

ಕೊನೆಗೆ ಬಿಜೆಪಿ ಸರ್ಕಾರ ಬದಲಾದ ನಂತರ ದಯಾನಂದ್ ಇಲ್ಲಿಂದ ಎತ್ತಂಗಡಿಯಾದರು. ಈಗ ಮತ್ತೆ ತಹಸೀಲ್ದಾರ್ ವೆಂಕಟೇಶಪ್ಪರೊಂದಿಗೆ ಶಾಸಕರ ಸಂಬಂಧ ಹಳಸಿರುವುದನ್ನು ನೋಡಿದರೆ ಎತ್ತು ಏರಿಗಿಳಿದರೆ ಕೋಣ ನೀರಿಗಿಳಿದಂತಾಗಿದೆ. ಇವರನ್ನೂ ಎತ್ತಂಗಡಿ ಮಾಡಿಸಲು ಕಾಣದ ರಾಜಕೀಯ ಶಕ್ತಿಗಳು ಮುಂದಾಗಿದ್ದಾರೆ ಎನ್ನಲಾಗಿದೆ.

ಕಾನೂನು ಪ್ರಕಾರ ಕೆಲಸ

ಅಲ್ಲದೆ ಗುರುವಾರ ನಡೆದ ದರಖಾಸ್ತು ಸಭೆಯಲ್ಲಿ ಶಾಸಕರು ಸೂಚಿಸಿದ ಕಡತವೊಂದಕ್ಕೆ ತಹಸೀಲ್ದಾರ್ ವೆಂಕಟೇಶಪ್ಪ ಸಹಿ ಹಾಕಲು ಸಮ್ಮತಿಸದೆ ವಿರೋಧವ್ಯಕ್ತಪಡಿಸಿದ ಹಿನ್ನೆಲೆ ಶಾಸಕರು ತಹಸೀಲ್ದಾರ್ ವಿರುದ್ದ ಮತ್ತಷ್ಟು ಕೆಂಡಾಮಂಡಲರಾದರು ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಇದು ಮತ್ತಷ್ಟು ತಹಸೀಲ್ದಾರ್ ವರ್ಗಾವಣೆಯಾಗುವರು ಎಂಬುದಕ್ಕೆ ಪುಷ್ಟಿ ನೀಡಿದೆ. ಕಳೆದ ತಿಂಗಳಿಂದಲೂ ತಹಸೀಲ್ದಾರ್ ವೆಂಕಟೇಶಪ್ಪ ಯಾವುದೇ ಕಾನೂನು ಬಾಹಿರ ಕಡತಗಳಿಗೆ ಸಹಮತ ನೀಡದೆ ಸಾರ್ವಜನಿಕರ ಹಿತ ದೃಷ್ಟಿಯಿಂದ ಮಾತ್ರ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.

ರಾಜಕೀಯ ಒತ್ತಡಕ್ಕೆ ಮಣಿದು ಕೆಲಸ ಮಾಡಲು ತಹಸೀಲ್ದಾರ್ ಒಪ್ಪದ ಹಿನ್ನೆಲೆಯಲ್ಲಿ ಅವರನ್ನು ಇಲ್ಲಿಂದ ಎತ್ತಂಗಡಿ ಮಾಡಲು ಈಗಾಗಲೇ ವೇದಿಕೆ ಸಿದ್ದವಾಗಿದೆ ಎಂದು ತಿಳದು ಬಂದಿದೆ.

Share this article