ಅಧಿಕಾರ ಹಂಚಿಕೆ ತಡೆಗೆ ಡಿನ್ನರ್‌ ಮೀಟಿಂಗ್‌ ಅಸ್ತ್ರ?

KannadaprabhaNewsNetwork | Published : Jan 10, 2025 1:48 AM

ಸಾರಾಂಶ

ಹೈಕಮಾಂಡ್‌ ಮಟ್ಟದಲ್ಲಿ ಏರ್ಪಟ್ಟಿದೆ ಎನ್ನಲಾದ ಅಧಿಕಾರ ಹಂಚಿಕೆ ಒಪ್ಪಂದ ವಿಚಾರ ಮುಂದು ಮಾಡಿ ಹಾಲಿ ನಾಯಕತ್ವ ಬದಲಾವಣೆ ಪ್ರಶ್ನೆ ಹುಟ್ಟುಹಾಕಿದರೆ ಹಿರಿಯ ಸಚಿವರೇ ತಿರುಗಿ ಬೀಳುತ್ತಾರೆ. ಹೀಗಾಗಿ ಹಾಲಿ ವ್ಯವಸ್ಥೆಯೇ ಮುಂದುವರಿಯಲು ಬಿಡಿ. ಇಲ್ಲವೇ ಬಣ ವಿಪ್ಲವ ಎದುರಿಸಿ...

- ನಾಯಕತ್ವ ಬದಲಾವಣೆಯಾದರೆ ಸಚಿವರೇ ಬಂಡೇಳುವ ಸಂದೇಶ- ದಲಿತ ಮುಖ್ಯಮಂತ್ರಿ ಬೇಡಿಕೆಯನ್ನೂ ಮುಂದಕ್ಕೆ ತರುವ ಎಚ್ಚರಿಕೆ- ಹಾಲಿ ವ್ಯವಸ್ಥೆ ಮುಂದುವರಿಸಿ, ಇಲ್ಲಾ ವಿಪ್ಲವ ಎದುರಿಸಿ ಎಂಬ ಮೆಸೇಜ್‌

ಕನ್ನಡಪ್ರಭ ವಾರ್ತೆ ಬೆಂಗಳೂರು

ಹೈಕಮಾಂಡ್‌ ಮಟ್ಟದಲ್ಲಿ ಏರ್ಪಟ್ಟಿದೆ ಎನ್ನಲಾದ ಅಧಿಕಾರ ಹಂಚಿಕೆ ಒಪ್ಪಂದ ವಿಚಾರ ಮುಂದು ಮಾಡಿ ಹಾಲಿ ನಾಯಕತ್ವ ಬದಲಾವಣೆ ಪ್ರಶ್ನೆ ಹುಟ್ಟುಹಾಕಿದರೆ ಹಿರಿಯ ಸಚಿವರೇ ತಿರುಗಿ ಬೀಳುತ್ತಾರೆ. ಹೀಗಾಗಿ ಹಾಲಿ ವ್ಯವಸ್ಥೆಯೇ ಮುಂದುವರಿಯಲು ಬಿಡಿ. ಇಲ್ಲವೇ ಬಣ ವಿಪ್ಲವ ಎದುರಿಸಿ...

ಇದು ಔತಣ ರಾಜಕಾರಣ, ದಲಿತರ ಸಭೆಯಂಥ ಬೆಳವಣಿಗೆಗಳ ಮೂಲಕ ಹಾಲಿ ನಾಯಕತ್ವ ಮುಂದುವರೆಯಬೇಕು ಎಂದು ಪಟ್ಟು ಹಿಡಿದಿರುವ ಕಾಂಗ್ರೆಸ್‌ನ ಬಣ (ಸಿದ್ದರಾಮಯ್ಯ ಬಣ)ವು ಹೈಕಮಾಂಡ್‌ ಮುಂದೆ ನಡೆದಿರುವ ಒಪ್ಪಂದದ ಪ್ರಕಾರ ಅಕ್ಟೋಬರ್‌ನಲ್ಲಿ ನಾಯಕತ್ವ ಬದಲಾವಣೆ ಖಚಿತ ಎಂದು ಬಿಂಬಿಸುತ್ತಿರುವ (ಡಿ.ಕೆ.ಶಿವಕುಮಾರ್‌ ಬಣ) ಬಣಕ್ಕೆ ನೀಡುತ್ತಿರುವ ಸ್ಪಷ್ಟ ಸಂದೇಶ.

ದಲಿತ ನಾಯಕರ ಪ್ರತ್ಯೇಕ ಸಭೆಗಳು ಹಾಗೂ ಬಹಿರಂಗ ಹೇಳಿಕೆಗಳು ಇದಕ್ಕೆ ಪುಷ್ಟಿ ನೀಡುತ್ತಿವೆ.

ರಾಜ್ಯದಲ್ಲಿ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರೇ ಇರಬೇಕು. ಒಂದೊಮ್ಮೆ ದೆಹಲಿಯ ಹೈಕಮಾಂಡ್ ಮುಂದೆ ನಡೆದಿದೆ ಎನ್ನಲಾದ ಒಪ್ಪಂದದ ಪ್ರಕಾರ ಸಿದ್ದರಾಮಯ್ಯ ಅವರನ್ನು ಬದಲಿಸುವ ಪ್ರಯತ್ನ ನಡೆದರೆ ಅದಕ್ಕೆ ಹಿರಿಯ ಸಚಿವರೇ ಅಡ್ಡಿಯಾಗುತ್ತಾರೆ. ದಲಿತ ಮುಖ್ಯಮಂತ್ರಿ ಕಾರ್ಡ್ ಕೂಡ ಮುನ್ನೆಲೆಗೆ ಬರಲಿದೆ ಎಂಬ ಸಂದೇಶ ರವಾನಿಸುವ ಪ್ರಯತ್ನ ಆರಂಭಗೊಂಡಿದೆ.

ಇದರ ಭಾಗವಾಗಿಯೇ ಇತ್ತೀಚೆಗೆ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಒಳಗೊಂಡಂತೆ ದಲಿತ ಶಾಸಕರು, ಸಚಿವರ ಡಿನ್ನರ್ ಸಭೆ ನಡೆಸಲಾಗಿದೆ. ಡಿ.ಕೆ.ಶಿವಕುಮಾರ್‌ ವಿದೇಶ ಪ್ರವಾಸದಲ್ಲಿದ್ದಾಗಲೇ ನಡೆದ ಸಭೆ ತೀವ್ರ ಸಂಚಲನ ಮೂಡಿಸಿತ್ತು.

ಇದರ ಬೆನ್ನಲ್ಲೇ ಡಾ.ಜಿ.ಪರಮೇಶ್ವರ್‌ ನೇತೃತ್ವದಲ್ಲಿ ದಲಿತ ಶಾಸಕರು, ಸಚಿವರ ಔತಣ ಕೂಟ ಸಭೆ ಆಯೋಜಿಸಲಾಗಿತ್ತು. ಇದರಿಂದ ಎಚ್ಚೆತ್ತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೈಕಮಾಂಡ್‌ ಮೂಲಕ ಸೂಚನೆ ನೀಡಿಸಿ ಸಭೆಗೆ ಬ್ರೇಕ್‌ ಹಾಕಿಸಿದ್ದಾರೆ.

ಆದರೂ, ಡಾ.ಜಿ.ಪರಮೇಶ್ವರ್‌ ಅವರು ಔತಣಕೂಟದ ಸಭೆ ರದ್ದಾಗಿಲ್ಲ. ಬದಲಿಗೆ ಮುಂದೂಡಿದ್ದೇವೆ ಅಷ್ಟೇ. ಸುರ್ಜೇವಾಲಾ ಅವರನ್ನೂ ಸೇರಿಸಿಕೊಂಡು ಸಭೆ ನಡೆಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಜತೆಗೆ ಸತೀಶ್‌ ಜಾರಕಿಹೊಳಿ, ಡಾ.ಎಚ್.ಸಿ.ಮಹದೇವಪ್ಪ, ಕೆ.ಎನ್‌.ರಾಜಣ್ಣ ಸೇರಿ ಹಲವರು ಈ ಬಗ್ಗೆ ಪದೇಪದೇ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಷ್ಟೇ ಅಲ್ಲ, ದಲಿತರ ಸಭೆ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೈಕಮಾಂಡ್‌ಗೆ ದೂರು ನೀಡಿದ್ದಾರೆ ಎಂಬ ವಿಚಾರಕ್ಕೂ ಈ ನಾಯಕರು ನೇರಾನೇರ ತಿರುಗೇಟು ನೀಡತೊಡಗಿದ್ದಾರೆ.

ಹಿರಿಯ ಸಚಿವರಾದ ಡಾ.ಜಿ.ಪರಮೇಶ್ವರ್‌, ಸತೀಶ್ ಜಾರಕಿಹೊಳಿ, ಮಹದೇವಪ್ಪ, ರಾಜಣ್ಣರಂಥವರು ನಾವು ಸಭೆ ನಡೆಸಿದರೆ ಯಾರಿಗೆ ಏಕೆ ಬೇಸರ? ಬೇಸರ ಪಟ್ಟುಕೊಂಡರೂ ನಾವು ಕ್ಯಾರೇ ಎನ್ನುವುದಿಲ್ಲ. ಸಭೆ ಮುಂದೂಡಿಕೆಯಾಗಿದೆ. ಮುಂದೆ ನಡೆದೇ ನಡೆಯುತ್ತದೆ ಎಂದು ತಿರುಗೇಟು ನೀಡಿದ್ದಾರೆ.

ಪ್ರತಿಕ್ರಿಯಿಸದ ಡಿಕೆಶಿ ಬಣ:

ಈ ಹೇಳಿಕೆಗಳಿಗೆ ಡಿ.ಕೆ.ಶಿವಕುಮಾರ್‌ ಬಣದಿಂದ ಯಾವ ಪ್ರತಿಕ್ರಿಯೆಯೂ ಬರುತ್ತಿಲ್ಲ. ಖುದ್ದು ಡಿ.ಕೆ.ಶಿವಕುಮಾರ್‌ ಅವರು ಟೆಂಪಲ್‌ ರನ್‌ ನಡೆಸಿದ್ದರೆ, ಸಾಮಾನ್ಯವಾಗಿ ಇಂಥ ಹೇಳಿಕೆಗಳಿಗೆ ಕಠಿಣ ಪ್ರತಿಕ್ರಿಯೆ ನೀಡುವ ಮಾಜಿ ಸಂಸದ ಡಿ.ಕೆ.ಸುರೇಶ್ ಅವರೂ ಸಂಯಮದ ಹೇಳಿಕೆಗಳನ್ನು ಮಾತ್ರ ನೀಡುತ್ತಿದ್ದಾರೆ.

Share this article