ಆರೆಸ್ಸೆಸ್ ಗೀತೆ ಹಾಡಿದ್ದಕ್ಕೆ ಡಿಕೆಶಿ ಕ್ಷಮೆ ಯಾಚನೆ

KannadaprabhaNewsNetwork |  
Published : Aug 27, 2025, 01:00 AM ISTUpdated : Aug 27, 2025, 03:56 AM IST
dk shivakumar

ಸಾರಾಂಶ

‘ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಅವರ ಕಾಲೆಳೆಯಲು ಆರ್‌ಎಸ್‌ಎಸ್‌ ಗೀತೆ ಹೇಳಿದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ. ಯಾರ ಮನಸ್ಸನ್ನೂ ನೋಯಿಸುವ ಉದ್ದೇಶ ನನ್ನದಲ್ಲ. ಆದರೂ   ಕ್ಷಮೆ ಕೋರುತ್ತೇನೆ’ ಎಂದು  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

  ಬೆಂಗಳೂರು :  ‘ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಅವರ ಕಾಲೆಳೆಯಲು ಆರ್‌ಎಸ್‌ಎಸ್‌ ಗೀತೆ ಹೇಳಿದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ. ಯಾರ ಮನಸ್ಸನ್ನೂ ನೋಯಿಸುವ ಉದ್ದೇಶ ನನ್ನದಲ್ಲ. ಆದರೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಇಂಡಿಯಾ ಮೈತ್ರಿ ಕೂಟದ ನಾಯಕರಿಗೆ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ’ ಎಂದು ಉಪಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ವಿಧಾನಸಭೆ ಕಲಾಪದ ವೇಳೆ ಶಿವಕುಮಾರ್‌ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್ಎಸ್) ಗೀತೆ ‘ನಮಸ್ತೇ ಸದಾ ವತ್ಸಲೇ’ ಸಾಲುಗಳನ್ನು ಹೇಳಿದ್ದರು. ಇದು ತೀವ್ರ ವಿವಾದ ಸೃಷ್ಟಿಸಿದ್ದು, ಬಿ.ಕೆ.ಹರಿಪ್ರಸಾದ್‌ ಸೇರಿ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಕ್ಷಮೆ ಕೋರುವಂತೆಯೂ ಒತ್ತಾಯಿಸಿದ್ದರು.

ಈ ಹಿನ್ನೆಲೆಯಲ್ಲಿ ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕ್ಷಮೆ ಕೋರುತ್ತೇನೆ ಎಂದು ಹೇಳಿದರೆ ನಾನು ತಪ್ಪು ಮಾಡಿದ್ದೇನೆ ಎಂದಲ್ಲ. ಯಾರಿಗೋ ಹೆದರಿಕೊಂಡೆ, ಯಾರೋ ಹೆದರಿಸಿದ್ದಾರೆ ಎಂಬುದೂ ಅಲ್ಲ. ನನ್ನದು ಅಂತಹ ರಕ್ತವಲ್ಲ. ನಾನು ಯಾರಿಗೂ ಹೆದರಿಲ್ಲ. ನಾನು ಕಾಂಗ್ರೆಸ್ಸಿಗ, ಸಾಯುವುದೂ ಕಾಂಗ್ರೆಸ್ಸಿಗನಾಗಿಯೇ. ನನ್ನ ಪಕ್ಷ ನಿಷ್ಠೆಯನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ. ನನ್ನ ಪಕ್ಷ ನಿಷ್ಠೆ ಪ್ರಶ್ನಿಸುವವರು ಮೂರ್ಖರು ಎಂದು ಕಿಡಿಕಾರಿದರು.

ಆರೆಸ್ಸೆಸ್‌ ಅನ್ನು ಹೊಗಳಿಲ್ಲ:

ಐಪಿಎಲ್‌ ಕಾಲ್ತುಳಿತ ದುರಂತ ಕುರಿತ ಚರ್ಚೆ ವೇಳೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರನ್ನು ಸಮರ್ಥಿಸಿಕೊಳ್ಳುತ್ತಾ, ನಾನು ಅವರ ಗರಡಿಯಲ್ಲಿ ಬೆಳೆದಿದ್ದೇನೆ ಎಂದು ಹೇಳಿದೆ. ಕೆಣಕಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರ ಕಾಲೆಳೆಯಲು ಅವರು ಬೆಳೆದು ಬಂದಿರುವ ಹಿನ್ನೆಲೆಯೂ ನನಗೆ ಗೊತ್ತಿದೆ ಎಂದು ಆರ್‌ಎಸ್‌ಎಸ್‌ ಗೀತೆಯ ಎರಡು ಸಾಲು ಹೇಳಿದೆ. ನಾನೇನೂ ಆರ್‌ಎಸ್‌ಎಸ್‌ ಅನ್ನು ಹೊಗಳಿಲ್ಲ ಎಂದು ಸ್ಪಷ್ಟನೆ ನೀಡಿದರು.

ಎಲ್ಲೆಲ್ಲಿಗೆ ಕ್ಲಿಪ್ಪಿಂಗ್‌ ಕಳುಹಿಸಿದ್ದಾರೆ ಗೊತ್ತು:

ನಮ್ಮದೇ ಪಕ್ಷದ ಕೆಲ ಹಿರಿಯರು ಈ ಹೇಳಿಕೆಯನ್ನು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಅವರಿಗೆ ದೇವರು ಬಾಯಿ ನೀಡಿದ್ದಾರೆ, ಅವಕಾಶ ಬಂದಿದೆ. ಹೀಗಾಗಿ ಸುಖಾ ಸುಮ್ಮನೆ ಮಾತನಾಡಿ ಗೊಂದಲ ಸೃಷ್ಟಿಸಲು ಪ್ರಯತ್ನ ಮಾಡುತ್ತಿದ್ದಾರೆ. ನನ್ನ ಈ ಹೇಳಿಕೆಯಲ್ಲಿ ರಾಜಕಾರಣ ಮಾಡಬಹುದು, ಕೆಸರೆರಚಾಟ ಮಾಡಬಹುದು ಎಂದು ಭಾವಿಸಿದ್ದರೆ ಅದು ಸುಳ್ಳು. ಯಾರ್‍ಯಾರು ಎಲ್ಲೆಲ್ಲಿ ಕಟ್‌ ಆ್ಯಂಡ್‌ ಪೇಸ್ಟ್‌ ಮಾಡಿರೋ ವಿಡಿಯೋ ಕ್ಲಿಪ್ಪಿಂಗ್‌ಗಳನ್ನು ಯಾರ್‍ಯಾರಿಗೆ ಕಳುಹಿಸಿದ್ದಾರೆ ಎಂಬುದೂ ಗೊತ್ತಿದೆ. ಇನ್ನು ಹಿರಿಯ ನಾಯಕರು ಬಹಳ ದೊಡ್ಡ ದೊಡ್ಡ ಸಲಹೆ ನೀಡಿದ್ದಾರೆ. ಯಾರಿಗೆ ಯಾವ ರೀತಿ ಉತ್ತರ ಕೊಡಬೇಕೋ ಗೊತ್ತಿದೆ ಎಂದು ಪರೋಕ್ಷವಾಗಿ ಶಿವಕುಮಾರ್ ಎಚ್ಚರಿಕೆ ನೀಡಿದರು.

ಹೈಕಮಾಂಡ್‌ನವರು ಮಾತನಾಡಿಲ್ಲ:

ಇದೇ ವೇಳೆ ಹೈಕಮಾಂಡ್‌ನಿಂದ ನನಗೆ ಯಾರೂ ಮಾತನಾಡಿಲ್ಲ. ಪಕ್ಷದ ವರಿಷ್ಠರು ಯಾರೂ ವಿವರಣೆ ಕೋರಿಲ್ಲ. ಯಾರನ್ನೋ ಕೇಳಿ ತಿಳಿದುಕೊಂಡಿರಬಹುದು. ಎಲ್ಲವನ್ನೂ ಸಂಶೋಧನೆ ಮಾಡುವುದನ್ನು ಇಲ್ಲ ಎಂದು ಹೇಳಲ್ಲ. ಆದರೆ ನನ್ನನ್ನು ಯಾರೂ ಕೇಳಿಲ್ಲ. ಈ ಹಿಂದೆ ಪಾಂಚಜನ್ಯ ಎಂದು ಹೆಸರಿಟ್ಟಾಗಲೂ ಕೇಂದ್ರ ಸಚಿವರೊಬ್ಬರು ದೂರು ನೀಡಿದ್ದರು. ಹೀಗಾಗಿ ಇದೆಲ್ಲ ಹೊಸದಲ್ಲ ಎಂದು ಸ್ಪಷ್ಟಪಡಿಸಿದರು.

ಬಿ.ಕೆ.ಹರಿಪ್ರಸಾದ್‌ಗೂ ಕ್ಷಮೆ ಕೇಳೋಣ:

ಬಿ.ಕೆ.ಹರಿಪ್ರಸಾದ್‌ ಕ್ಷಮೆ ಕೋರಲು ಹೇಳಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ, ನನ್ನ ಮಾತು ಯಾರಿಗಾದರೂ ನೋವಾಗಿದ್ದಾರೆ ಬೇಕಾದರೆ ಕ್ಷಮೆ ಕೇಳೋಣ. ನಿಮಗೂ ಕೇಳೋಣ, ಬಿ.ಕೆ.ಹರಿಪ್ರಸಾದ್‌ಗೂ ಕೇಳೋಣ ಎಂದು ಶಿವಕುಮಾರ್‌ ಸ್ಪಷ್ಟಪಡಿಸಿದರು.

ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ ಅವರು, ನನ್ನ ಪಕ್ಷದ ಕೆಲ ಹಿರಿಯ ನಾಯಕರು, ಸ್ನೇಹಿತರು ನನಗೆ ಬಹಳ ಸಲಹೆ ನೀಡಿರುವುದಕ್ಕೆ ಸಂತೋಷವಿದೆ. ಈ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡುವುದಲ್ಲ, ಕಾಂಗ್ರೆಸ್ ಪಕ್ಷದ ಕಚೇರಿಗೆ ಬನ್ನಿ ಮಾತನಾಡೋಣ. ಯಾವ ರೀತಿ ಉತ್ತರ ಕೊಡಬೇಕೋ ಕೊಡುತ್ತೇನೆ. ಮಾಧ್ಯಮಗಳ ಮುಂದೆ ಮಾತನಾಡಿದರೆ ನಿಮಗೆ ತೃಪ್ತಿ ಸಿಗಬಹುದು. ಬೇರೆ ಪ್ರಯೋಜನವಿಲ್ಲ ಎಂದು ಹೇಳಿದರು.

ಆರ್‌ಎಸ್‌ಎಸ್‌ ಹೇಗೆ ಬೇರೂರಿದೆ ಎಂಬ ಅರಿವಿದೆ:

ರಾಜಕಾರಣಕ್ಕೆ ಬರುವುದಕ್ಕಿಂತಲೂ ಮೊದಲೇ ಎಲ್ಲಾ ಪಕ್ಷಗಳ ಅಧ್ಯಯನ ಮಾಡಿದ್ದೇನೆ. ಕಮ್ಯುನಿಸಂ, ಬಿಜೆಪಿ, ಆರ್​​ಎಸ್​​ಎಸ್, ದಳ ಎಲ್ಲ ಪಕ್ಷಗಳ ಬಗ್ಗೆ ತಿಳಿದಿದ್ದೇನೆ. ರಾಜ್ಯದಲ್ಲಿ ಆರ್‌ಎಸ್ಎಸ್ ಹೇಗೆ ಬೇರೂರಿದೆ ಎಂಬ ಅರಿವಿದೆ. ಬೆಂಗಳೂರು ನಗರದಲ್ಲಿ ಎಷ್ಟು ಶಾಲೆ ಆರಂಭಿಸಿದ್ದಾರೆ? ಚನ್ನೇನಹಳ್ಳಿಯಲ್ಲಿ ಯಾವ ರೀತಿ ಭವ್ಯ ಕಟ್ಟಡ ನಿರ್ಮಿಸುತ್ತಿದ್ದಾರೆ? ರಾಜ್ಯದಲ್ಲಿ ಹೇಗೆ ಸಂಘಟನೆ ಮಾಡುತ್ತಿದ್ದಾರೆ ಎಂಬುದನ್ನು ಅರಿತಿದ್ದೇನೆ. ಪಕ್ಷದ ಅಧ್ಯಕ್ಷನಾಗಿ ನಮ್ಮ ವಿರೋಧಿಗಳ ಸಂಘಟನೆ ಬಗ್ಗೆ ತಿಳಿಯುವುದು ನಮ್ಮ ಕರ್ತವ್ಯ ಎಂದು ಶಿವಕುಮಾರ್‌ ತಿಳಿಸಿದರು.

ನನ್ನ ಧರ್ಮ ಬಿಡಲು ನಾನು ಸಿದ್ಧನಿಲ್ಲ:

ಮೃದು ಹಿಂದುತ್ವ ಕುರಿತ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್‌ ಅವರು, ನನಗೆ ಕಮ್ಯುನಿಸ್ಟ್ ಸಿದ್ಧಾಂತದ ಬಗ್ಗೆ ಮಾತನಾಡುವ ಶಕ್ತಿ ಇದೆ. ವಂದೇ ಮಾತರಂ ಬಗ್ಗೆಯೂ ಮಾತನಾಡಬಲ್ಲೆ, ‘ಯಧಾ ಯಧಾಯ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ’ ಎಂದು ಭಗವದ್ಗೀತೆ, ಚಾಣಕ್ಯ ನೀತಿ ಬಗ್ಗೆ ಮಾತನಾಡಬಲ್ಲೆ. ನಾನು ಹುಟ್ಟಿರುವುದು ಹಿಂದೂವಾಗಿ, ನನ್ನ ಧರ್ಮವನ್ನು ನಾನು ಬಿಡಲು ತಯಾರಿಲ್ಲ. ಮಾತು ಬಿಡದ ಮಂಜುನಾಥ, ಕಾಸು ಬಿಡದ ತಿಮ್ಮಪ್ಪ, ಬೆಳಗ್ಗೆ ಎದ್ದರೆ ಅಜ್ಜನ ಫೋಟೋ ನೋಡುತ್ತೇನೆ, ಅವರನ್ನು ನಂಬುತ್ತೇನೆ. ಜತೆಗೆ ಕ್ರೈಸ್ತ, ಇಸ್ಲಾಂ, ಜೈನ ಸಿದ್ಧಾಂತದ ಮೇಲೂ ನಂಬಿಕೆ ಹೊಂದಿರುವವನು ನಾನು. ಧರ್ಮ ಯಾವುದಾದರೂ ತತ್ವ ಒಂದೇ ಎಂದು ನಂಬಿದವನು ಎಂದರು.--

ಜೈಲು ಜೀವನ ನೆನೆದ ಡಿಕೆಶಿ

ಕಾಂಗ್ರೆಸ್ ಪಕ್ಷದ ಕೆಲಸ ಮಡಿದ್ದಕ್ಕಾಗಿ ಇ.ಡಿ. ನನ್ನನ್ನು ಬಂಧಿಸಿತ್ತು. ತಿಹಾರ್‌ ಜೈಲಿನಲ್ಲಿ ನಿದ್ದೆ ಇಲ್ಲದ ಜೀವನ ಕಳೆದಿದ್ದೇನೆ. 10/10 ಅಡಿ ಬಾತ್‌ರೂಂ, ಅಲ್ಲಿ ನೀಡಿದ ಊಟ ಸೇವನೆ ಮಾಡಿ, ನೆಲದ ಮೇಲೆ ಮಲಗಿದ್ದೇನೆ. ನಾನು ಎಷ್ಟು ನೋವು ಅನುಭವಿಸಿದ್ದೇನೆ ಎಂಬುದು ನನಗೆ ಗೊತ್ತಿದೆ. ನನ್ನ ಬಂಧನವಾದಾಗ ಅನೇಕರು ಸಂತೋಷ ಪಟ್ಟರು. ನಾನು ಹೊರ ಬಂದ ಬಳಿಕ ಪಕ್ಷ ಕೆಪಿಸಿಸಿ ಅಧ್ಯಕ್ಷಗಿರಿಯ ಜವಾಬ್ದಾರಿ ನೀಡಿದರು. ಅಂದಿನಿಂದ ಇಂದಿನವರೆಗೂ ಒಂದು ದಿನವೂ ಸರಿಯಾಗಿ ನಿದ್ದೆ ಮಾಡಿಲ್ಲ ಎಂದು ಡಿ.ಕೆ.ಶಿವಕುಮಾರ್‌ ನಿದ್ದೆ ಇಲ್ಲದ ರಾತ್ರಿಗಳ ಕುರಿತು ನೆನೆದರು.

ಯಾರ್‍ಯಾರಿಗೆ ವಿಡಿಯೋ ಕಳಿಸಿದ್ದಾರೆಂದು ಗೊತ್ತು

ನನ್ನ ಈ ಹೇಳಿಕೆಯಲ್ಲಿ ರಾಜಕಾರಣ ಮಾಡಬಹುದು, ಕೆಸರೆರಚಾಟ ಮಾಡಬಹುದು ಎಂದು ಭಾವಿಸಿದ್ದರೆ ಅದು ಸುಳ್ಳು. ಕಟ್‌ ಆ್ಯಂಡ್‌ ಪೇಸ್ಟ್‌ ಮಾಡಿರುವ ವಿಡಿಯೋ ಕ್ಲಿಪ್ಪಿಂಗ್‌ಗಳನ್ನು ಯಾರ್‍ಯಾರು ಎಲ್ಲೆಲ್ಲಿ, ಯಾರ್‍ಯಾರಿಗೆ ಕಳುಹಿಸಿದ್ದಾರೆ ಎಂಬುದೂ ಗೊತ್ತಿದೆ .- ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

ಕ್ಷಮೆ ಕೇಳುವ ಬದಲು ರಾಜೀನಾಮೆ ಕೊಡ್ಬೇಕಿತ್ತು

ಡಿ.ಕೆ.ಶಿವಕುಮಾರ್ ಅವರಿಗೆ ಕಿಂಚಿತ್ತಾದರೂ ಸ್ವಾಭಿಮಾನ ಇದ್ದಿದ್ದರೆ, ಕಿಂಚಿತ್ತಾದರೂ ಧೈರ್ಯ ಇದ್ದಿದ್ದರೆ ಕ್ಷಮೆ ಕೇಳಬಾರದಿತ್ತು. ಕೇಳಲೇಬೇಕು ಎನ್ನುವ ಒತ್ತಡ ಇದ್ದಿದ್ದರೆ ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು.

- ಆರ್‌. ಅಶೋಕ್‌, ವಿಪಕ್ಷ ನಾಯಕ

ಕ್ಷಮೆ ಕೇಳಿದ ಮೇಲೆ ಎಲ್ಲವೂ ಮುಗಿಯಿತು

ಡಿಕೆಶಿ ಅವರು ಉಪಮುಖ್ಯಮಂತ್ರಿ ಆಗಿ ಹೇಳಿಕೆ ನೀಡಿದ್ದರೆ ಪರವಾಗಿಲ್ಲ. ಆದರೆ ಕೆಪಿಸಿಸಿ ಅಧ್ಯಕ್ಷರಾಗಿ ಆ ರೀತಿ ಮಾತನಾಡಿದ್ದು ತಪ್ಪು. ಅವರು ಕ್ಷಮೆ ಕೇಳಿದ ಮೇಲೆ ಅಲ್ಲಿಗೆ ಎಲ್ಲವೂ ಮುಗಿಯಿತು.

- ಬಿ.ಕೆ. ಹರಿಪ್ರಸಾದ್‌ ಹಿರಿಯ ನಾಯಕ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ದೆಹಲಿಯಲ್ಲೂ ಸಿದ್ದು ಸಿದ್ದು, ಡಿಕೆ ಡಿಕೆ ಸದ್ದು
ಮತಚೋರಿ ಬಗ್ಗೆ ದಿಲ್ಲೀಲಿ ಕೈ ನಾಯಕರ ರಣಕಹಳೆ