;Resize=(412,232))
ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈಗ ಲೋಕಾಯುಕ್ತಕ್ಕೆ ನೀಡಿರುವ ಕಾರ್ಟಿಯರ್ ವಾಚ್ ಮಾಹಿತಿಯನ್ನು ಹಿಂದೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಯಾಕೆ ನೀಡಿಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ.
ಅಲ್ಲದೆ, ಅಫಿಡವಿಟ್‌ನಲ್ಲಿರುವ ಹೂಬ್ಲೋಟ್ ವಾಚ್ ಲೋಕಾಯುಕ್ತರಿಗೆ ನೀಡಿರುವ ಮಾಹಿತಿಯಲ್ಲಿ ಯಾಕೆ ಕಾಣುತ್ತಿಲ್ಲ? ಅದು ಕೂಡ ಅಪರಾಧವೇ ಎಂದೂ ಹೇಳಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಶಿವಕುಮಾರ್ ಅವರು ವಾಚುಗಳ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಿರುವ ಕುರಿತು ಹೇಳಿದಾಗ ನನ್ನ ಹೇಳಿಕೆಯಿಂದ ಶಿವಕುಮಾರ್ ಅವರಿಗೆ ಬೇಸರವಾದರೆ ನಾನೇನೂ ಮಾಡಲಾಗದು. ರಾಜಕೀಯದಲ್ಲಿ ಎಷ್ಟೇ ಪ್ರೀತಿ-ವಿಶ್ವಾಸಗಳಿದ್ದರೂ ಹೊಂದಾಣಿಕೆಯ ನಾಟಕ ನನ್ನ ಬಳಿ ಇಲ್ಲ. ಇದನ್ನು ಬಹಳ ಬೆಳೆಸಬೇಕೆಂಬುದು ನನ್ನ ಉದ್ದೇಶವಲ್ಲ. ಸಂದರ್ಭಕ್ಕೆ ತಕ್ಕಂತೆ ವಿಷಯವನ್ನು ಜನರ ಗಮನಕ್ಕೆ ತರುವ ಕೆಲಸ ಮಾಡಿದ್ದೇನೆ ಎಂದರು.
ಮುಖ್ಯಮಂತ್ರಿಗಳಿಗೆ ಉಡುಗೊರೆಯಾಗಿ ಕೊಟ್ಟ ಹೂಬ್ಲೋಟ್ ವಾಚ್ ಹಿಂದೆ ವಿವಾದಕ್ಕೆ ಗುರಿಯಾಗಿತ್ತು. ಕೊನೆಯಲ್ಲಿ ಅದನ್ನು ಸರ್ಕಾರದ ವಶಕ್ಕೆ ಒಪ್ಪಿಸಿ ವಿಧಾನಸೌಧದ ವಸ್ತು ಸಂಗ್ರಹಾಲಯದಲ್ಲಿ ಇಡಲಾಯಿತು. ಹಾಗಾಗಿ ಈಗ ಡಿ.ಕೆ.ಶಿವಕುಮಾರ್ ಅವರು ಅಫಿಡವಿಟ್‍ನಲ್ಲಿ ತಿಳಿಸಿದ್ದಾಗಿ ಹೇಳಿರುವ ಕಾರ್ಟಿಯರ್ ವಾಚ್ ಮಾಹಿತಿ 2018, 2023ರ ಅಫಿಡವಿಟ್ ಎರಡೂ ಕಡೆ ಇಲ್ಲ ಎಂಬುದಷ್ಟೇ ನನ್ನ ಪ್ರಶ್ನೆ. ಲೋಕಾಯುಕ್ತಕ್ಕೆ ಕೊಟ್ಟ ಮಾಹಿತಿಯಡಿ ರೋಲೆಕ್ಸ್ ವಾಚ್- 9 ಲಕ್ಷ, ಕಾರ್ಟಿಯರ್ ವಾಚ್- 23.90 ಲಕ್ಷ, ಇನ್ನೊಂದು ಕಾರ್ಟಿಯರ್ ವಾಚ್- 12.06 ಲಕ್ಷ ಎಂದಿದ್ದಾರೆ. ಆದರೆ, ಈಗ ಅವರ ಹೂಬ್ಲೋಟ್ ವಾಚ್ ಕಾಣುತ್ತಿಲ್ಲ. ಎಲ್ಲಿ ಹೋಗಿದೆ? ಎಂದು ಕೇಳಿದರು.
ಇದೇ ವೇಳೆ, ನಾನು ಅವರು ಯಾವುದೇ ವಾಚು ಕದ್ದುಕೊಂಡು ಬಂದಿರುವುದು ಎಂದು ಹೇಳಿಲ್ಲ. ಶಿವಕುಮಾರ್ ಅವರನ್ನು ಇಂದಿನಿಂದ ನೋಡುತ್ತಿಲ್ಲ, ಕಾಲೇಜಿನಿಂದ ನೋಡುತ್ತಾ ಬಂದಿದ್ದೇನೆ. ಅವರ ಕಾಲೇಜು ಸ್ನೇಹಿತರಲ್ಲಿ ನಾನೂ ಒಬ್ಬ. ಅವರು ನೂರು ವಾಚ್ ಕಟ್ಟಿದರೂ ಸ್ನೇಹಿತನಾಗಿ ಸಂತೋಷಪಡುತ್ತೇನೆ. ಆದರೆ ಅವರು ಸರ್ಕಾರ, ಸಾರ್ವಜನಿಕರಿಗೆ ಕೊಟ್ಟಿರುವ ಮಾಹಿತಿ ಸರಿಯಾಗಿರಬೇಕಲ್ಲ ಎಂದರು.