;Resize=(412,232))
ಬೆಂಗಳೂರು : ಕಬ್ಬು ಬೆಳೆಗಾರರ ಸಮಸ್ಯೆ ಆಲಿಸಲು ಇದೇ ತಿಂಗಳ 26ರಂದು ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 26ರಂದು ಬೆಳಗಾವಿಯಲ್ಲಿ ಸಭೆ ನಡೆಸಲಾಗುತ್ತಿದೆ. ಸಭೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಾರಣಾಂತರಗಳಿಂದ ಭಾಗವಹಿಸುತ್ತಿಲ್ಲ. ಮೊದಲು ನೀವು ಸಭೆ ಮಾಡಿ, ನಂತರ ತಾವು ಸಭೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಕಬ್ಬು ಬೆಳೆಗಾರರ ಸಮಸ್ಯೆ ಕೇವಲ ಕರ್ನಾಟಕದ ಸಮಸ್ಯೆಯಲ್ಲ. ಅದು ಇಡೀ ದೇಶಕ್ಕೆ ಸಂಬಂಧಿಸಿದ ವಿಚಾರ. ಈ ಕುರಿತು ಕೇಂದ್ರ ಸರ್ಕಾರದ ಮಟ್ಟದಲ್ಲಿ ಅಧಿಕಾರಿಗಳ ಜತೆಗೆ ಪ್ರತ್ಯೇಕ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದರು.
ರಾಜ್ಯದ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. ಗೋವಾದಲ್ಲಿ ಚುನಾವಣೆ ಇರುವ ಕಾರಣ ಮಹದಾಯಿ ಯೋಜನೆ ಕುರಿತು ಮುಂದಿನ ನಿರ್ಧಾರ ಕೈಗೊಳ್ಳಲು ಕಷ್ಟವಾಗಬಹುದು. ಇನ್ನು, ತುಂಗಭದ್ರಾ ನೀರಿನ ವಿಚಾರವಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಚರ್ಚಿಸಲು ಮನವಿ ಮಾಡಲಾಗಿದೆ.
ಆಂಧ್ರ ಅಥವಾ ದೆಹಲಿಯಲ್ಲಿ ಈ ಕುರಿತು ಭೇಟಿ ಮಾಡಲಾಗುವುದು. ಸದ್ಯ ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆ ತೀವ್ರವಾಗಿದ್ದು, ರೈತರಿಂದ ನೀರಿನ ಬೇಡಿಕೆ ಹೆಚ್ಚಿದೆ. ಮಳೆಯಿಲ್ಲದ ಕಾರಣ ಮುಂದೆ ಏನು ಮಾಡಬೇಕು ಎಂದು ಕಾರ್ಯತಂತ್ರ ರೂಪಿಸಬೇಕಿದೆ. ರಾಜ್ಯದ ಬರಗಾಲದ ಬೇಡಿಕೆ ಕುರಿತು ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದರು.