ಜೂ.3, ಸಂಜೆ 4.05ಕ್ಕೆ ಡಿಕೆ ಶಪಥ - ರಾಜ್ಯದ 25ನೇ ಸಿಎಂ ಆಗಿ ಗಾಜಿನ ಮನೆಯಲ್ಲಿ ಪ್ರಮಾಣ

Published : May 31, 2026, 08:01 AM IST
DK Shivakumar

ಸಾರಾಂಶ

ನಿರೀಕ್ಷೆಯಂತೆಯೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಶನಿವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರ ಬೆನ್ನಲ್ಲೇ ರಾಜ್ಯಪಾಲರು ಸರ್ಕಾರ ರಚಿಸಲು ಅವರಿಗೆ ಆಹ್ವಾನ

  ಬೆಂಗಳೂರು :  ನಿರೀಕ್ಷೆಯಂತೆಯೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಶನಿವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರ ಬೆನ್ನಲ್ಲೇ ರಾಜ್ಯಪಾಲರು ಸರ್ಕಾರ ರಚಿಸಲು ಅವರಿಗೆ ಆಹ್ವಾನ ನೀಡಿದ್ದು, ಜೂ.3ರ ಸಂಜೆ 4.05ಕ್ಕೆ ಲೋಕಭವನದಲ್ಲಿ ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್‌ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ತನ್ಮೂಲಕ ರಾಜ್ಯದ ಮುಖ್ಯಮಂತ್ರಿ ಗಾದಿ ಅಲಂಕರಿಸಬೇಕೆಂದು ಮೂರು ದಶಕಗಳಿಂದ ಡಿ.ಕೆ.ಶಿವಕುಮಾರ್‌ ಅವರು ನಡೆಸಿದ್ದ ಅವಿರತ ಪ್ರಯತ್ನ, ಶ್ರಮಕ್ಕೆ ಪ್ರತಿಫಲ ದೊರೆಯುವ ಕಾಲ ಸಾಕಾರಗೊಂಡಂತಾಗಿದೆ. ನೂತನ ಮುಖ್ಯಮಂತ್ರಿಯ ಪ್ರಮಾಣ ವಚನದ ಜೊತೆಯಲ್ಲೇ ಅವರ ಹೊಸ ಸಚಿವ ಸಂಪುಟ ಸದಸ್ಯರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ನಾಳೆ ಡಿಕೆಶಿ ದೆಹಲಿಗೆ:

ಎರಡು ಹಂತಗಳಲ್ಲಿ ನಡೆಯಲಿರುವ ನೂತನ ಸಂಪುಟ ರಚನೆ ಪೈಕಿ ಮೊದಲ ಹಂತದಲ್ಲಿ ಎಷ್ಟು ಮಂದಿ ಸಚಿವರಾಗಲಿದ್ದಾರೆ ಮತ್ತು ಯಾರು ಎಂಬ ಬಗ್ಗೆ ಹೈಕಮಾಂಡ್‌ನೊಂದಿಗೆ ಚರ್ಚಿಸಲು ಶಿವಕುಮಾರ್ ಅವರು ಸೋಮವಾರ ದೆಹಲಿಗೆ ತೆರಳುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ, ನೂತನ ಮುಖ್ಯಮಂತ್ರಿಯೂ ಸೇರಿ ಒಂಬತ್ತು ಮಂದಿ ಸಂಪುಟಕ್ಕೆ ಸೇರ್ಪಡೆಯಾಗಬಹುದು ಎನ್ನಲಾಗುತ್ತಿದ್ದರೂ, ಮೊದಲ ಹಂತದಲ್ಲೇ ಸಂಪುಟ ಸೇರಲು ತೀವ್ರ ಲಾಬಿ ನಡೆದಿರುವುದರಿಂದ ಸಂಖ್ಯೆ ಬದಲಾಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

ನೂತನ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ನಿಗದಿಯಂತೆ ನಿರ್ಗಮಿತ ಮುಖ್ಯಮಂತ್ರಿ ಹಾಗೂ ಸಿಎಲ್‌ಪಿ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಶನಿವಾರ ವಿಧಾನಸೌಧದಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಜರುಗಿತು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಮತ್ತು ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರ ಸಮ್ಮುಖದಲ್ಲಿ ಹೈಕಮಾಂಡ್‌ ನಿರ್ದೇಶನದಂತೆ ಡಿ.ಕೆ.ಶಿವಕುಮಾರ್‌ ಅವರನ್ನು ಮುಂದಿನ ಸಿಎಲ್‌ಪಿ ನಾಯಕನನ್ನಾಗಿ ಆಯ್ಕೆ ಮಾಡುವ ಒಂದು ಸಾಲಿನ ನಿರ್ಣಯದ ಪ್ರಸ್ತಾವನೆಯನ್ನು ಸಿದ್ದರಾಮಯ್ಯ ಅವರು ಮಂಡಿಸಿದರು. ನಿರ್ಣಯವನ್ನು ಪರಮೇಶ್ವರ್‌ ಅನುಮೋದಿಸಿದರು. ನಂತರ ಎಲ್ಲ ಶಾಸಕರೂ ಚಪ್ಪಾಳೆ ತಟ್ಟಿ ಕೈ ಎತ್ತುವ ಮೂಲಕ ಸರ್ವಾನುಮತದಿಂದ ತಮ್ಮ ಒಪ್ಪಿಗೆ ಸೂಚಿಸಿದರು.

ಸಭೆ ಬಳಿಕ ಹೊರಬಂದು ಮಾಧ್ಯಮದವರೊಂದಿಗೆ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರು ಡಿ.ಕೆ.ಶಿವಕುಮಾರ್‌ ಅವರನ್ನು ಕರ್ನಾಟಕ ಕಾಂಗ್ರೆಸ್‌ನ ನೂತನ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಿರುವುದಾಗಿ ಅಧಿಕೃತವಾಗಿ ಘೋಷಿಸಿದರು. ಈಗ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಅವಕಾಶ ಕೋರಲಿದ್ದಾರೆ ಎಂದರು.

ಸರ್ಕಾರ ರಚನೆಗೆ ರಾಜ್ಯಪಾಲರಿಂದ ಆಹ್ವಾನ:

ಸಭೆ ಮುಗಿದ ಬೆನ್ನಲ್ಲೇ ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್‌ ಸೇರಿ ವಿವಿಧ ರಾಜ್ಯ ನಾಯಕರು ಹಾಗೂ ಹೈಕಮಾಂಡ್‌ ನಾಯಕರೊಂದಿಗೆ ಲೋಕಭವನಕ್ಕೆ ತೆರಳಿದ ಡಿ.ಕೆ.ಶಿವಕುಮಾರ್‌ ಅವರು ತಾವು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನೂತನ ನಾಯಕನಾಗಿ ಆಯ್ಕೆಯಾಗಿದ್ದು, ಸರ್ಕಾರ ರಚಿಸಲು ಅವಕಾಶ ನೀಡುವಂತೆ ಹಕ್ಕು ಮಂಡಿಸಿದರು. ತಕ್ಷಣ ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ಅವರು ಸರ್ಕಾರ ರಚನೆಗೆ ಅಧಿಕೃತ ಆಹ್ವಾನ ನೀಡಿದರು.

ಬುಧವಾರ ಸಂಜೆ 4.05ಕ್ಕೆ ಪ್ರಮಾಣ ವಚನ:

ಡಿ.ಕೆ.ಶಿವಕುಮಾರ್‌ ಅವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರಕ್ಕೆ ಜೂ.3ರ ಸಂಜೆಯ ಮುಹೂರ್ತ ನಿಗದಿಯಾಗಿದೆ. ಅಂದು ಸಂಜೆ 4.05 ಗಂಟೆಗೆ ಲೋಕಭವನದ ಗಾಜಿನ ಮನೆಯಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ಸರ್ಕಾರದ ಮುಖ್ಯಸ್ಥರಾದ ರಾಜ್ಯಪಾಲರಿಂದ ಡಿ.ಕೆ.ಶಿವಕುಮಾರ್‌ ಅವರು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದೇ ವೇಳೆ ಎಂಟರಿಂದ ಒಂಬತ್ತು ಸಚಿವರೂ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.

6 ಶಾಸಕರ ಗೈರು

ಶಾಸಕಾಂಗ ಪಕ್ಷದ ಸಭೆಗೆ ಅನಾರೋಗ್ಯ, ಪ್ರವಾಸ ಮತ್ತಿತರ ಕಾರಣಗಳಿಂದ ಐವರು ಶಾಸಕರು ಗೈರು ಹಾಜರಾಗಿದ್ದರು ಎಂದು ತಿಳಿದು ಬಂದಿದೆ. ರಾಜು ಕಾಗೆ ಅನಾರೋಗ್ಯದಿಂದ, ವೆಂಕಟೇಶ್‌ ತಂದೆ ನಿಧನದ ಹಿನ್ನೆಲೆ, ಹಜ್‌ ಯಾತ್ರೆಗೆ ತೆರಳಿರುವುದರಿಂದ ರಹೀಂಖಾನ್‌ ಹಾಗೂ ಜಿ.ಟಿ.ಪಾಟೀಲ್‌ ಮತ್ತು ಪ್ರಕಾಶ್‌ ಕೋಳಿವಾಡ ಅನಿವಾರ್ಯ ಕಾರಣಗಳಿಂದ ಸಭೆಗೆ ಹೈರು ಹಾಜರಾಗಿದ್ದರು ಎಂದು ತಿಳಿದು ಬಂದಿದೆ. ಇನ್ನು, ಯು.ಟಿ.ಖಾದರ್‌ ಕಾಂಗ್ರೆಸ್‌ ಶಾಸಕರಾದರೂ ಹಾಲಿ ಸ್ಪೀಕರ್‌ ಆಗಿರುವುದರಿಂದ ಸಿಎಲ್‌ಪಿ ಸಭೆಗೆ ಬರಲಿಲ್ಲ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಸಂಪುಟ ರಚನೆಗೆ ಕಸರತ್ತು-20 ರಿಂದ 25 ಸಚಿವರಿಗೆ ಕೊಕ್
ಇಂದು ಹೊಸ ಸಿಎಂ ಆಯ್ಕೆ