;Resize=(412,232))
ಬೆಂಗಳೂರು : ರಾಜ್ಯದ ಜಲಸಂಪನ್ಮೂಲ ಇಲಾಖೆಯ ಹೊಣೆಯನ್ನೂ ಹೊತ್ತಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದೇಶದ ನೀರಾವರಿ ಯೋಜನೆಗಳು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಜಲ ಒಪ್ಪಂದಗಳು, ನೀರಾವರಿ ಸಮಸ್ಯೆ ಮತ್ತು ಪರಿಹಾರವನ್ನೊಳಗೊಂಡ ‘ನೀರಿನ ಹೆಜ್ಜೆ’ ಪುಸ್ತಕ ಬರೆದಿದ್ದು, ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನ.5ರಂದು ಲೋಕಾರ್ಪಣೆ ಮಾಡಲಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಖುದ್ದು ಈ ವಿಷಯ ತಿಳಿಸಿದ ಡಿ.ಕೆ.ಶಿವಕುಮಾರ್ ಅವರು, ನ.5ರ ಸಂಜೆ 4 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಸಿದ್ದರಾಮಯ್ಯ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ಎನ್.ಎಸ್.ಬೋಸರಾಜು ಹಾಗೂ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಮೋಹನ್ ವಿ.ಕಾತರಕಿ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ರಾಜ್ಯದ ಹಲವು ಜಲ ಸಂಬಂಧಿ ಯೋಜನೆಗಳು ಅನಗತ್ಯವಾಗಿ ಕಗ್ಗಂಟಾಗಿವೆ. ಅದರ ಬಗ್ಗೆ ಇಲ್ಲಿ ಬೆಳಕು ಚೆಲ್ಲಲಾಗಿದೆ. ಈ ಪುಸ್ತಕವನ್ನು ಎಲ್ಲ ಶಾಸಕರಿಗೆ, ತಜ್ಞರಿಗೆ, ಅಧಿಕಾರಿಗಳಿಗೂ ತಲುಪಿಸಲಾಗುವುದು ಎಂದು ಹೇಳಿದರು.
1956, ಆ.28ರಂದು ದೇಶದ ನದಿಗಳ ಮತ್ತು ಕಣಿವೆ ವಿವಾದಗಳ ನ್ಯಾಯ ನಿರ್ಣಯಕ್ಕೆ ಜಾರಿಗೊಳಿಸಲಾದ ಅಂತಾರಾಷ್ಟ್ರೀಯ ಜಲ ಅಧಿನಿಯಮ, ಅಂತಾರಾಷ್ಟ್ರೀಯ ಜಲ ಒಪ್ಪಂದಗಳಾವುವು? ಆ ದೇಶಗಳು ಕೈಗೊಂಡ ನಿರ್ಧಾರಗಳೇನು? ಭಾರತ ತೆಗೆದುಕೊಂಡ ನಿಲುವುಗಳು ಏನು? ದೇಶದ ನದಿಗಳ ಜೋಡಣೆ ಬಿಕ್ಕಟ್ಟು, ಪರಿಹಾರ ಹಾಗೂ ಜೋಡಣೆ ಸಾಧ್ಯವೇ? ಎಂಬ ಬಗ್ಗೆ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
ನರ್ಮದಾ ಮತ್ತು ರಾವಿ ನದಿ, ಗೋದಾವರಿ ವಿವಾದ ಸೇರಿ ರಾಜ್ಯದ ಕಾವೇರಿ, ಕೃಷ್ಣಾ, ತುಂಗಭದ್ರಾ, ಮಹದಾಯಿ ಜಲ ವಿವಾದಗಳ ಬಗ್ಗೆಯೂ ಉಲ್ಲೇಖಿಸಲಾಗಿದೆ. ಪುಸಕ್ತದಲ್ಲಿ ಯಾರ ಬಗ್ಗೆಯೂ ಟೀಕೆಗಳಾಗಲಿ, ರಾಜಕೀಯ ವಿಚಾರಗಳನ್ನಾಗಲಿ ದಾಖಲಿಸಿಲ್ಲ. ಕೆಲ ವಿಚಾರಗಳ ಕುರಿತು ವಾಸ್ತಾಂಶ ದಾಖಲಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಬಾಂಗ್ಲಾದೇಶದೊಂದಿಗೆ ಬೇಸಿಗೆ ಅವಧಿಯಲ್ಲಿ ನೀರಿನ ಹರಿವು ಒಪ್ಪಂದ ಮಾಡಿಕೊಳ್ಳಲಾಗಿತ್ತು, ಮಹಾಕಾಳಿ ನದಿ, ಶಾರದಾ ಒಪ್ಪಂದಕ್ಕೆ ಅಂದಿನ ಪ್ರಧಾನಿ ದೇವೇಗೌಡರು ಸಹಿ ಹಾಕಿ, ಪ್ರಮುಖ 12 ಅಧ್ಯಾಯಗಳನ್ನು ಒಳಗೊಂಡ ನಿಯಮಾವಳಿ ರೂಪಿಸಲಾಗಿತ್ತು. ಬ್ರಿಟಿಷರ ಆಡಳಿತಾವಧಿಯಿಂದ ನೀರಿನ ಹಂಚಿಕೆ ಒಪ್ಪಂದಗಳು ಆಗುತ್ತಿದ್ದವು. 1971ರಲ್ಲಿ ಅಂತಾರಾಷ್ಟ್ರೀಯ ನೀರಾವರಿ ಯೋಜನೆಗಳಿಗೆ ವಿಶ್ವಬ್ಯಾಂಕ್ ನೆರವು ನೀಡಲು ಆರಂಭಿಸಿತ್ತು. ನಂತರದಲ್ಲಿ ದೇಶದ ನದಿ ಜೋಡಣೆ ವಿಚಾರದ ಚರ್ಚೆ ಶುರುವಾಯಿತು. ಕೇಂದ್ರ ಸರ್ಕಾರದ ರಾಷ್ಟ್ರೀಯ ನೀರಾವರಿ ಅಭಿವೃದ್ಧಿ ಸಂಸ್ಥೆ 14 ಹಿಮಾಲಯದ ನದಿ, 16 ದಕ್ಷಿಣ ಭಾರತದ ನದಿ ಜೋಡಣೆ ಹಾಗೂ ರಾಜ್ಯದ ಒಳಗಿನ 37 ನದಿ ಜೋಡಣೆಗೆ ವರದಿ ನೀಡಿತ್ತು. ಆ ಎಲ್ಲವನ್ನೂ ಈ ಪುಸ್ತಕದಲ್ಲಿ ದಾಖಲಿಸಿದ್ದೇವೆ ಎಂದು ಶಿವಕುಮಾರ್ ವಿವರಿಸಿದರು.
ಬೆಂಗಳೂರು: ಕೇಂದ್ರ ಜಲ ಆಯೋಗದ ಮಾದರಿಯಲ್ಲೇ ರಾಜ್ಯದಲ್ಲೂ ಶೀಘ್ರ ಶಾಶ್ವತ ರಾಜ್ಯ ಜಲ ಆಯೋಗವನ್ನು ಜಾರಿಗೊಳಿಸುವುದಕ್ಕೆ ಚಿಂತನೆ ನಡೆಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ರಾಜ್ಯ ಜಲ ಆಯೋಗವು ವಿವಿಧ ಜಲ ವಿವಾದಗಳು ಸೇರಿದಂತೆ ಒಟ್ಟಾರೆ ರಾಜ್ಯದ ಜಲ ಭದ್ರತೆ ಕುರಿತು ಸರ್ಕಾರಕ್ಕೆ ಕಾಲ-ಕಾಲಕ್ಕೆ ಶಿಫಾರಸು ಮಾಡಲಿದೆ ಎಂದಿದ್ದಾರೆ.