- ಸಿಎಂ ಬದಲಿಲ್ಲ ಅಂತ ಡಿಕೆಶಿಯೇ ಹೇಳಿದ್ದಾರೆ- ನವೆಂಬರ್‌ಗೆ ಯಾವ ಕ್ರಾಂತಿಯೂ ಆಗೋಲ್ಲ
---- ಸಿಎಂ ಬದಲಾವಣೆ ಕುರಿತು ಹೇಳಿಕೆ ನೀಡಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದ ಸುರ್ಜೇವಾಲಾ- ಆದರೂ ಕಾಂಗ್ರೆಸ್‌ನಲ್ಲಿ ಆ ಬಗ್ಗೆ ನಿಲ್ಲುತ್ತಿಲ್ಲ ಚರ್ಚೆ. ಸಿಎಂ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ ಜಮೀರ್- ಡಿಕೆಶಿಗೆ ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇದೆ. ಅದನ್ನು ನಾನು ಬಯಸುತ್ತೇನೆ ಎಂದು ವಸತಿ ಸಚಿವ ಹೇಳಿಕೆ
--ಕನ್ನಡಪ್ರಭ ವಾರ್ತೆ ಮಂಡ್ಯ
‘ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ತಾವು ಸಿಎಂ ಆಗಬೇಕು ಎಂಬ ಆಸೆ ಇದೆ. ಅವರು ಕೂಡ ಮುಖ್ಯಮಂತ್ರಿ ಆಗಬೇಕು ಎಂದು ಬಯಸುವವನು ನಾನು. ಆದರೆ, ಈ ಐದು ವರ್ಷ ಮಾತ್ರ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ’ ಎಂದು ವಸತಿ ಸಚಿವ ಜಮೀರ್ ಅಹಮದ್ ಹೇಳಿದ್ದಾರೆ. ಆ ಮೂಲಕ ಇದೇ ಮೊದಲ ಬಾರಿಗೆ ಜಮೀರ್ ಅವರು ಡಿಕೆಶಿ ಪರ ಬ್ಯಾಟಿಂಗ್ ಬೀಸಿದ್ದಾರೆ.ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಮುಖ್ಯಮಂತ್ರಿ ಬದಲಾವಣೆ ಕುರಿತು ಪ್ರತಿಕ್ರಿಯಿಸಿ, ಈಗ ಸಿಎಂ ಕುರ್ಚಿಯಲ್ಲಿ ಸಿದ್ದರಾಮಯ್ಯ ಕುಳಿತಿದ್ದಾರೆ. ಸಿದ್ದರಾಮಯ್ಯ ಅವರೇ ಪೂರ್ಣಾವಧಿಯವರೆಗೆ ಸಿಎಂ ಆಗಿರುತ್ತಾರೆ. ಇದರಲ್ಲಿ ಯಾವ ಬದಲಾವಣೆಯೂ ಇಲ್ಲ. ಈ ವಿಷಯವನ್ನು ಸ್ವತಃ ಡಿ.ಕೆ.ಶಿವಕುಮಾರ್ ಕೂಡ ಹೇಳಿದ್ದಾರೆ. ಇನ್ನು, ಐದು ವರ್ಷ ನಾನೇ ಸಿಎಂ ಅಂತ ಮೈಸೂರಿನಲ್ಲಿ ಸಿದ್ದರಾಮಯ್ಯ ಕೂಡ ಹೇಳಿದ್ದಾರೆ. ಆದರೂ, ನಾವೆಲ್ಲಾ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದರು.
ಮುಖ್ಯಮಂತ್ರಿ ಬದಲಾವಣೆ ಕುರಿತು ಹೇಳಿಕೆ ನೀಡಿದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಎಚ್ಚರಿಕೆಯ ಮರುದಿನವೇ ಸಚಿವರು ಈ ಹೇಳಿಕೆ ನೀಡಿರುವುದು ಗಮನಾರ್ಹ.‘ಡಿಕೆಶಿ, ಸಿಎಂ’ ಕೂಗಿಗೆ ಪ್ರತಿಕ್ರಿಯಿಸಿ, ಡಿಕೆಶಿಗೆ ತಾವು ಸಿಎಂ ಆಗಬೇಕು ಎಂಬ ಆಸೆ ಇದೆ. ಅವರು ಕೂಡ ಸಿಎಂ ಆಗಬೇಕು ಎಂದು ಬಯಸುವವನು ನಾನು. ಇನ್ನು, ಅವರವರ ಬೆಂಬಲಿಗರಿಗೆ ಅವರವರ ನಾಯಕರು ಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆ ಇರುತ್ತೆ, ಅದು ತಪ್ಪಲ್ಲ ಎಂದು ಜಾರಿಕೆಯ ಉತ್ತರ ನೀಡಿದರು.
ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರು, ಯಾರ ಬಗ್ಗೆಯೂ ಮಾತನಾಡಬಾರದು ಎಂದು ಸೂಚನೆ ಕೊಟ್ಟಿದ್ದಾರೆ. ಯಾರಾದರೂ ಮಾತನಾಡಿದರೆ ಕ್ರಮಕ್ಕೆ ಸೂಚನೆ ಕೊಟ್ಟಿದ್ದಾರೆ. ಈಗಾಗಲೇ ಹಲವರಿಗೆ ಈ ಸಂಬಂಧ ನೋಟಿಸ್ ಕೂಡ ಕೊಡಲಾಗಿದೆ ಎಂದು ಇದೇ ವೇಳೆ ಅವರು ಸ್ಪಷ್ಟನೆ ನೀಡಿದರು.ನವೆಂಬರ್ ಕ್ರಾಂತಿ ಇಲ್ಲ:ನವೆಂಬರ್‌ನಲ್ಲಿ ಯಾವ ಕ್ರಾಂತಿಯೂ ಆಗುವುದಿಲ್ಲ. ಆದರೆ, ನವೆಂಬರ್ ಬಳಿಕ ಸಂಪುಟ ಪುನಾರಚನೆಯಾಗಬಹುದು. ನವೆಂಬರ್‌ಗೆ ಸಂಪುಟ ಪುನಾರಚನೆಯಾಗಬೇಕು ಎಂಬ ಆಸೆ ಎಲ್ಲರಿಗೂ ಇದೆ. ಪಕ್ಷದ ಕೆಲವು ಹಿರಿಯರಿಗೆ ಮಂತ್ರಿಯಾಗುವ ಆಸೆ ಇದೆ. ಅವರಿಗೂ ಅವಕಾಶ ಸಿಗಬೇಕು ಎನ್ನುವುದು ತಪ್ಪಲ್ಲ. ಆದರೆ, ಇದರ ತೀರ್ಮಾನ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದರು.