ಕೋಲಾರ : ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಪ್ರಕರಣದಲ್ಲಿ ರಾಜ್ಯ ಸರ್ಕಾರ ತನಿಖಾ ತಂಡ ರಚಿಸಿದ್ದು ಸತ್ಯಾ ಸತ್ಯತೆ ಹೊರಬರುವ ಮೊದಲೇ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ತನಿಖೆಯ ದಿಕ್ಕು ತಪ್ಪಿಸಲು ಹೊರಟಿದ್ದಾರೆ ಎಂದು ಮಾಲೂರು ಶಾಸಕ ಕೆ.ವೈ.ನಂಜೇಗೌಡ ಆರೋಪಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆಯ ನೈಜತೆ ಹೊರಬರುವ ಮೊದಲೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಉದ್ದೇಶ ಪೂರ್ವಕವಾಗಿಯೇ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಮೇಲೆ ವಿನಾಕಾರಣ ಗೂಬೆ ಕೂರಿಸಲು ಹೊರಟಿದ್ದಾರೆ ಎಂದರು.ಎಸ್‌ಐಟಿ ಸ್ವಾಗತಿಸಿ, ಈಗ ತಿರಸ್ಕಾರ
ಈ ಪ್ರಕರಣದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸುವ ಉದ್ದೇಶದಿಂದಲೇ ರಾಜ್ಯ ಸರ್ಕಾರ ಪ್ರಮಾಣಿಕ ಅಧಿಕಾರಿಗಳನ್ನು ನೇಮಿಸಿ ಎಸ್‌ಐಟಿಯ ಮೂಲಕ ತನಿಖೆಗೆ ಒಪ್ಪಿಸಿದೆ. ಇದನ್ನು ಮೊದಲು ಕುಮಾರಸ್ವಾಮಿ ಸೇರಿದಂತೆ ಬಿಜೆಪಿ ನಾಯಕರು ಸಹ ಸ್ವಾಗತಿಸಿದ್ದರು. ಆದರೆ ಈಗ ತನಿಖಾ ತಂಡದ ಮೇಲೆ ನಂಬಿಕೆ ಇಲ್ಲ ಎಂದು ದಿನ್ನಕ್ಕೊಂದು ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದು ತನಿಖಾ ತಂಡದ ತನಿಖೆ ಧಿಕ್ಕು ತಪ್ಪಿಸುವ ಹುನ್ನಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಜನರ ನಂಬಿಕೆ ಉಳಿಕೊಳ್ಳಬೇಕಾದ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದ್ದು, ಆ ನಿಟ್ಟಿನಲ್ಲಿ ತನಿಖಾ ನಡೆಯುತ್ತಿದೆ, ಡಿಸಿಎಂ ಡಿ.ಕೆ.ಶಿವಕುಮಾರ್‌ರಿಗೆ ಪೆನ್ ಡ್ರೈವ್ ವಿಚಾರಕ್ಕೂ ಸಂಬಂಧವೇ ಇಲ್ಲ, ಹೀಗಿದ್ದರೂ ಪೆನ್ ಡ್ರೈವ್ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಹೆಸರನ್ನು ಎಳೆದು ತರವುದು ಜೆಡಿಎಸ್ ಹಾಗೂ ಬಿಜೆಪಿ ನಾಯಕರಿಗೆ ಶೋಭೆ ತರುವಂತದಲ್ಲ, ಅನ್ಯಾಯಕ್ಕೊಳಗಾದ ಹೆಣ್ಣು ಮಕ್ಕಳಿಗೆ ನ್ಯಾಯ ಕೊಡಿಸಬೇಕಾಗಿದೆ, ಆ ನಿಟ್ಟಿನಲ್ಲಿ ಮಾತನಾಡುವುದನ್ನು ಬಿಟ್ಟು ಪೆನ್ ಡ್ರೈವ್ ಮೊದಲು ಹೊರತಂದಿದ್ದು ಯಾರು ಅದಕ್ಕೆ ಕುಮ್ಮಕ್ಕು ನೀಡಿದವರು ಯಾರು ಎಂಬ ವಿಚಾರಗಳು ಇದೀಗ ಮುನ್ನಲೆಗೆ ಬಂದಿದೆ ಎಂದು ಹೇಳಿದರು.ಹಗರಣ ದೇಶಾದ್ಯಂತ ಚರ್ಚೆ
ಎಂಎಲ್‌ಸಿ ಎಂ.ಎಲ್.ಅನಿಲಕುಮಾರ್ ಮಾತನಾಡಿ, ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ ನಡೆಯುತ್ತಿದ್ದ ಸಮಯದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ಹಾಸನಕ್ಕೆ ಮಾತ್ರ ಸೀಮಿತವಾಗಿತ್ತು, ಇವತ್ತು ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ಎಸ್.ಐ.ಟಿ ತಂಡ ರಚಿಸಿದಾಗ ಮಾಜಿ ಸಿಎಂ ಕುಮಾರಸ್ವಾಮಿ ಸ್ವಾಗತಿಸಿದ್ದರು. ಆದರೆ ಈಗ ಮಾತು ತಪ್ಪಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಯವರು ಸಹ ಜೆಡಿಎಸ್ ಪಕ್ಷದ ಸಂಸದ ಮಾಡಿರುವ ಕೃತ್ಯ ಬಿಜೆಪಿ ಪಕ್ಷ ಸಮರ್ಥನೆ ಮಾಡಿಕೊಳ್ಳುವುದಿಲ್ಲ, ಒಂದು ವೇಳೆ ಹಾಸದಲ್ಲಿ ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಗೆಲುವು ಸಾಧಿಸಿದರೆ ಸಂಸದರ ಸ್ಥಾನ ಅನರ್ಹ ಗೊಳಿಸುವುದಾಗಿ ಬಿಜೆಪಿ ನಾಯಕರೇ ಹೇಳಿದರು.ಸಂತ್ರಸ್ತೆಯರಿಗೆ ನ್ಯಾಯ ಕೊಡಿಸಿ
ಒಂದು ವಾರದ ನಂತರ ತನಿಖೆ ದಿಕ್ಕು ತಪ್ಪಿಸುವ ಕೆಲಸ ವ್ಯವಸ್ಥಿತವಾಗಿ ರಾಜ್ಯದಲ್ಲಿ ನಡೆಯುತ್ತಿದೆ ಸತ್ಯಾಂಶ ಹೊರ ಬರಬಾರದಾಗಿರಬೇಕು. ಆದರೆ ಅವರಿಗೆ ಪೆನ್ ಡ್ರೈವ್ ಬಿಡುಗಡೆ ಯಾರು ಮಾಡಿದ್ದರು ಎಂಬುದು ಮುಖ್ಯವಾಗಿದೆಯೇ ಹೊರತು ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ನ್ಯಾಯ ಕೊಡಿಸುವ ಬಗ್ಗೆ ಕಾಳಜಿ ಇಲ್ಲ ಎಂದು ಟೀಕಿಸಿದರು.
ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಕಳೆದ ಒಂದು ವರ್ಷದಿಂದ ನನ್ನ ಬಳಿ ಪೆನ್ ಡ್ರೈವ್ ಇದೆ, ಬಿಡುಗಡೆ ಮಾಡುತ್ತೇನೆ ಎಂದು ಹೇಳುತ್ತಿದ್ದ. ಆದರೆ ಈಗ ಇದರ ಹಿಂದೆ ಡಿಕೆ ಶಿವಕುಮಾರ್ ಅವರ ಕೈವಾಡ ಇದೆ ಎಂದರೆ ಹೇಗೆ. ಹಾಗಾಗಿ ಈ ಪ್ರಕರಣದಲ್ಲಿ ಎಲ್ಲವೂ ತನಿಖೆಯಾಗಬೇಕು ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಸಂದ್ರ ಗೋಪಾಲ್ ಗೌಡ, ನಗರಸಭೆ ಸದಸ್ಯ ಮುರಳಿಗೌಡ, ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಕ್ತಾರ ದಯಾನಂದ್, ಮುಖಂಡರಾದ ರಾಜೇಂದ್ರ, ಆನೇಪುರ ಹನುಮಂತಪ್ಪ, ಮತ್ತಿತರರು ಇದ್ದರು.