;Resize=(412,232))
ಅಯೋಧ್ಯಾ : ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದ ಹಣ ದುರುಪಯೋಗದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ), ಟ್ರಸ್ಟ್‌ನ ಪದಾಧಿಕಾರಿಗಳು ಮತ್ತು ದೇವಾಲಯದ ಸಿಬ್ಬಂದಿಗೆ ಅಯೋಧ್ಯೆಯನ್ನು ಬಿಟ್ಟು ಎಲ್ಲೂ ಹೋಗದಂತೆ ಭಾನುವಾರ ಸೂಚನೆ ನೀಡಿದೆ.
ಎಸ್‌ಐಟಿ ಪ್ರತಿದಿನ ತನ್ನ ತನಿಖೆಯ ಮಾಹಿತಿಯನ್ನು ಮುಖ್ಯಮಂತ್ರಿ ಕಚೇರಿಗೆ ಕಳುಹಿಸುತ್ತಿದೆ. ತನಿಖೆಯ ದೈನಂದಿನ ವರದಿಗಳನ್ನು ಡಿಜಿಟಲ್ ರೂಪದಲ್ಲಿ ಉಳಿಸಿಡಲಾಗುತ್ತಿದೆ. ಅಂತಿಮ ವರದಿಯನ್ನು ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಸಲ್ಲಿಸಲಾಗುತ್ತದೆ. ಈ ನಡುವೆ, ಟ್ರಸ್ಟ್ ಮಾರುಕಟ್ಟೆ ಬೆಲೆಗಿಂತ ಹೆಚ್ಚು ಬೆಲೆಗೆ ಭೂಮಿ ಖರೀದಿಸಿದೆ ಎಂಬ ಆರೋಪವೂ ಕೇಳಿಬಂದಿದೆ.
2025ರ ಜನವರಿ-ಫೆಬ್ರವರಿಯಲ್ಲಿ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ನಡೆದಾಗ ರಾಮ ಮಂದಿರಕ್ಕೆ ಭಕ್ತರು ಅಪಾರ ಸಂಖ್ಯೆಯಲ್ಲಿ ಬಂದಿದ್ದರು. ಮಂದಿರಕ್ಕೆ ಪ್ರತಿದಿನ ಸುಮಾರು 10 ಲಕ್ಷ ಭಕ್ತರು ಭೇಟಿ ನೀಡುತ್ತಿದ್ದರು. ಕಾಣಿಕೆ ಡಬ್ಬಿಗಳು ಕೆಲವೇ ಗಂಟೆಗಳಲ್ಲಿ ನೋಟುಗಳಿಂದ ತುಂಬಿ ಹೋಗುತ್ತಿದ್ದವು. ಇಷ್ಟು ದೊಡ್ಡ ಪ್ರಮಾಣದಲ್ಲಿ ದಾನ ಬರುತ್ತಿದ್ದುದರಿಂದ, ದಾನದ ಹಣವನ್ನು ಸರಿಯಾಗಿ ಎಣಿಸುವುದು ಮತ್ತು ಲೆಕ್ಕ ಇಡುವುದು ಕಷ್ಟಕರವಾಗಿತ್ತು. ಆಗ ಭಾರಿ ಅಕ್ರಮ ನಡೆದಿರುವ ಸಾಧ್ಯತೆಯಿದೆ ಎಂದು ಎಸ್‌ಐಟಿ ಶಂಕಿಸಿದೆ.
ಮಂದಿರದಲ್ಲಿ ಅಳವಡಿಸಿರುವ ಸಿಸಿಟೀವಿ ಕ್ಯಾಮೆರಾಗಳ ವಿಡಿಯೋ ಕೇವಲ 45 ದಿನಗಳವರೆಗೆ ಮಾತ್ರ ಇರುತ್ತದೆ. ನಂತರ ಅದು ಸ್ವಯಂಚಾಲಿತವಾಗಿ ಅಳಿಸಿಹೋಗುತ್ತದೆ. ಇದು ತನಿಖೆಗೆ ದೊಡ್ಡ ತೊಂದರೆಯಾಗಿದೆ.
ಕೆಲವು ವಿಡಿಯೋಗಳಲ್ಲಿ ಕೃತ್ರಿಮ ಬದಲಾವಣೆ (ಟ್ಯಾಂಪರಿಂಗ್) ಮಾಡಿರುವ ಸಾಧ್ಯತೆ ಕಂಡುಬಂದಿದೆ. ಹಳೆಯ ಅಳಿಸಿದ ಫುಟೇಜ್‌ಗಳನ್ನು ವಿಧಿವಿಜ್ಞಾನ ವಿಧಾನದಿಂದ ಮತ್ತೆ ಪಡೆಯುವ ಪ್ರಯತ್ನ ನಡೆಯುತ್ತಿದೆ.