ತಿಪಟೂರು: ಜಿಲ್ಲೆಯಲ್ಲಿ ಮಳೆ ಕೈಕೊಟ್ಟ ಪರಿಣಾಮ ಬರ ತಾಂಡವವಾಡುತ್ತಿದ್ದು, ಸರ್ಕಾರ ಎಲ್ಲಾ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಜನ, ಜಾನುವಾರುಗಳಿಗೆ ಕುಡಿವ ನೀರು ಮತ್ತು ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಗೊರೂರು ಹೇಮಾವತಿ ಜಲಸಂಗ್ರಹಾಗಾರದಿಂದ ಕೂಡಲೇ ನೀರು ಬಿಡಲು, ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಕೆ.ಎನ್ ರಾಜಣ್ಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ. ಪರಮೇಶ್ವರ್ ಅವರಿಗೆ ಜಿಲ್ಲಾ ಕೃಷಿಕ ಸಮಾಜದ ಪ್ರತಿನಿಧಿ ಹಾಗೂ ಬಿಜೆಪಿ ಮುಖಂಡ ಕೆ.ಎಸ್. ಸದಾಶಿವಯ್ಯ ಒತ್ತಾಯಿಸಿದ್ದಾರೆ. ಜಿಲ್ಲೆಗೆ ಕುಡಿವ ನೀರಿಗಾಗಿ ಮೀಸಲಿಟ್ಟಿರುವ ಎಲ್ಲಾ ವಿಧಾನಸಭಾ ಕ್ಷೇತ್ರದ ಕೆರೆಗಳಿಗೆ ಆದ್ಯತೆಯ ಮೇರೆಗೆ ಜಲಾಶಯದಲ್ಲಿ 14 ಟಿ.ಎಂ.ಸಿ ನೀರು ಹಂಚಿಕೆ ಪ್ರಮಾಣದಲ್ಲಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ನೀರು ಹರಿಸಲು ಸರ್ಕಾರ ಮುಂದಾಗಬೇಕು. ಸದ್ಯ ಕಾವೇರಿ ನೀರಿನ ಸಮಸ್ಯೆ ಉದ್ಭವಿಸಿರುವುದರಿಂದ ಹೇಮಾವತಿ ನೀರನ್ನು ತಮಿಳುನಾಡಿಗೆ ಹರಿಸಲಾಗುತ್ತಿದೆ. ಆದರೆ, ಜಿಲ್ಲೆಯಲ್ಲಿ ಬರ ತಾಂಡವವಾಡುತ್ತಿರುವುದರಿಂದ ಗೊರೂರು ಹೇಮಾವತಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುವುದರ ಬದಲು ತುಮಕೂರು ಜಿಲ್ಲೆಗೆ ಹರಿಸಬೇಕೆಂದು ಸದಾಶಿವಯ್ಯ ಒತ್ತಾಯಿಸಿದ್ದಾರೆ. ಫೋಟೋ 11-ಟಿಪಿಟಿ5 ಸದಾಶಿವಯ್ಯ