ನವದೆಹಲಿ: ರಾಜಸ್ಥಾನದ 200 ವಿಧಾನಸಭಾ ಸ್ಥಾನಗಳಿಗೆ ನ.23ರಂದು ನಿಗದಿಯಾಗಿದ್ದ ಚುನಾವಣೆಯ ದಿನಾಂಕವನ್ನು ನ.25ಕ್ಕೆ ಮುಂದೂಡಲಾಗಿದೆ. ನ.23ರಂದು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮದುವೆಗಳು ಮತ್ತು ಸಾಮಾಜಿಕ ಕಾರ್ಯಕ್ರಮಗಳು ಇರುವುದರಿಂದ ಇದು ಚುನಾವಣೆ ಮೇಲೆ ನಕರಾತ್ಮಕ ಪರಿಣಾಮ ಬೀರಬಹುದು. ಹೆಚ್ಚಿನ ಸಂಖ್ಯೆಯ ಜನ ಚುನಾವಣೆಯಲ್ಲಿ ಭಾಗವಹಿಸದೇ ಇರಬಹುದು ಎಂದು ರಾಜಕೀಯ ಪಕ್ಷಗಳು ಮನವಿ ಮಾಡಿದ ಕಾರಣ ದಿನಾಂಕವನ್ನು ಬದಲಾವಣೆ ಮಾಡಲಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಆದರೆ ಈ ಮೊದಲು ನಿಗದಿಯಾಗಿದ್ದಂತೆ ಡಿ.3ರಂದು ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಘೋಷಿಸಲಾಗುವುದು ಎಂದು ಆಯೋಗ ಸ್ಪಷ್ಟಪಡಿಸಿದೆ. ನ.23ರಂದು ರಾಜ್ಯದಲ್ಲಿ 1 ಲಕ್ಷಕ್ಕೂ ಹೆಚ್ಚು ಮದುವೆ ನಿಗದಿಯಾಗಿವೆ. ಹೀಗಾಗಿ ಚುನಾವಣೆ ದಿನಾಂಕ ಮುಂದೂಡಬೇಕೆಂದು ವಿವಿಧ ರಾಜಕೀಯ ಪಕ್ಷಗಳು ಒತ್ತಾಯಿಸಿದ್ದವು.