- ಬಿಜೆಪಿ-ಜೆಡಿಎಸ್ ಬರ ಅಧ್ಯಯನ ಮಾಡಿ ಯಾರಿಗೆ ವರದಿ ಕೊಡ್ತಾರೆ?
ಬಿಜೆಪಿ-ಜೆಡಿಎಸ್ ನಡೆಸುತ್ತಿರುವ ಬರ ಅಧ್ಯಯನ ಕೇವಲ ರಾಜಕೀಯ ಮತ್ತು ನಾಟಕೀಯ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯವಾಡಿದರು.
ಪಟ್ಟಣದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿಯಿಂದ ಇನ್ನೂ ವಿರೋಧ ಪಕ್ಷದ ನಾಯಕನನ್ನೇ ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಕಷ್ಟಪಟ್ಟು ನಿನ್ನೆಯಷ್ಟೇ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಿದ್ದಾರೆ. ಮೊದಲು ವಿರೋಧ ಪಕ್ಷದ ನಾಯಕನನ್ನು ಮಾಡಿ ಆ ಮೇಲೆ ನಾವು ಕೊಟ್ಟ ಕಾರ್ಯಕ್ರಮ ರೈತರಿಗೆ ತಲುಪಿದೆಯೋ, ಇಲ್ಲವೋ ಎಂಬ ಬಗ್ಗೆ ಅಧ್ಯಯನ ಮಾಡಲಿ ಎಂದು ಸಲಹೆ ನೀಡಿದರು.ಕಾವೇರಿ ಸಮಸ್ಯೆ, ಬರ ವಿಚಾರದಲ್ಲಿ ಮಾತನಾಡಲು ಕೇಂದ್ರ ಅವಕಾಶವನ್ನೇ ಕೊಡಲಿಲ್ಲ. ಇವರಿಗೆ ಜನರ ಬಳಿ ಹೋಗಿ ಅಳಲು ಕೇಳಲು ಯೋಗ್ಯತೆ ಇದೆಯಾ?. ಇವರಿಗೆ ನರೇಗಾ ಯೋಜನೆಯ ಕೂಲಿ ಹಣವನ್ನೇ ಕೊಡಲಾಗಿರಲಿಲ್ಲ. ಯಾವ ಯೋಗ್ಯತೆ ಇಟ್ಟುಕೊಂಟು ಬರ ಅಧ್ಯಯನ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಕೇವಲ ರಾಜಕೀಯ ತೀಟೆಗಾಗಿ ಬಿಜೆಪಿ- ಜೆಡಿಎಸ್ ಬರ ಅಧ್ಯಯನ ನಡೆಸುತ್ತಿವೆ. ಅಧ್ಯಯನ ಮಾಡಿ ಯಾರಿಗೆ ವರದಿ ಸಲ್ಲಿಸುತ್ತಾರೋ ಗೊತ್ತಿಲ್ಲ. ಜನರಿಂದ ಆಯ್ಕೆಯಾದ ಸರ್ಕಾರ ನಾವು ವರದಿ ಕೊಟ್ಟಿದ್ದೇವೆ. ಅವರು ಕೇಂದ್ರಕ್ಕೆ ಒತ್ತಡ ತರಬಹುದಿತ್ತು. ನಮ್ಮ ರಾಜ್ಯದ ಬೇಡಿಕೆಗೆ ಸ್ಪಂದಿಸಿ ಎಂದು ಕೇಳಬಹುದಿತ್ತು.
ಅವರನ್ನೇನಾದರೂ ಕೇಂದ್ರ ಸರ್ಕಾರ ಬರ ಅಧ್ಯಯನಕ್ಕೆ ನೇಮಕ ಮಾಡಿದೆಯಾ?, ನೀವೂ ಒಂದು ವರದಿ ಕೊಡಿ ಎಂದು ಹೇಳಿದೆಯಾ?. ಮತ್ತೆ ಇವರು ಬರ ಅಧ್ಯಯನ ಮಾಡಿ ಏನು ಪ್ರಯೋಜನ ಎಂದು ಕುಟುಕಿದರು.