ಪಟ್ಟಿಗೂ ಮುನ್ನವೇ ಮತದಾರರಿಗೆ ಅವಕಾಶ ನೀಡಿದ್ದಕ್ಕೆ ಧನ್ಯವಾದ ಸಲ್ಲಿಸಿದ ಡಿವಿಎಸ್‌

KannadaprabhaNewsNetwork | Updated : Mar 14 2024, 07:04 AM IST

ಸಾರಾಂಶ

ಮುಂಬರುವ ಲೋಕಸಭಾ ಚುನಾವಣೆ ಸಂಬಂಧ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಗೂ ಕೆಲಹೊತ್ತಿನ ಮುಂಚೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಡಿ.ವಿ.ಸದಾನಂದಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಪೋಸ್ಟ್‌ ಮಾಡಿದ್ದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಂಬರುವ ಲೋಕಸಭಾ ಚುನಾವಣೆ ಸಂಬಂಧ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಗೂ ಕೆಲಹೊತ್ತಿನ ಮುಂಚೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಡಿ.ವಿ.ಸದಾನಂದಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಪೋಸ್ಟ್‌ ಮಾಡಿದ್ದರು.

ಈ ಮೂಲಕ ತಮಗೆ ಈ ಬಾರಿ ಪಕ್ಷದ ಟಿಕೆಟ್‌ ಸಿಗುವುದಿಲ್ಲ ಎಂಬುದರ ಬಗ್ಗೆ ಕ್ಷೇತ್ರದ ಮತದಾರರಿಗೆ ಪರೋಕ್ಷವಾಗಿ ಮಾಹಿತಿ ನೀಡಿದ್ದರು.

ಬುಧವಾರ ಮಧ್ಯಾಹ್ನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಯಪ್ರಕಾಶ್‌ ನಡ್ಡಾ ಅವರು ಡಿ.ವಿ.ಸದಾನಂದಗೌಡಗೆ ಕರೆ ಮಾಡಿ, ಈ ಬಾರಿ ಟಿಕೆಟ್‌ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದರು. ಈ ಬೆಳವಣಿಗೆಯ ಬಳಿಕವೇ ಸದಾನಂದಗೌಡರು ಸಾಮಾಜಿಕ ಜಾಲತಾಣದಲ್ಲಿ ತಮಗೆ ಈ ಬಾರಿ ಟಿಕೆಟ್‌ ಸಿಗುವುದಿಲ್ಲ ಎಂಬುದನ್ನು ಕ್ಷೇತ್ರ ಮತದಾರರಿಗೆ ಪರೋಕ್ಷವಾಗಿ ಸೂಚನೆ ನೀಡಿದ್ದರು.ಪೋಸ್ಟ್‌ನಲ್ಲಿ ಏನಿದೆ?

‘ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ನನ್ನೆಲ್ಲಾ ಪ್ರೀತಿಯ ಬಂಧುಗಳೇ, ನನಗೆ ಕಳೆದ ಹತ್ತು ವರ್ಷಗಳ ಕಾಲ ಈ ಕ್ಷೇತ್ರದ ಲೋಕಸಭಾ ಸದಸ್ಯನಾಗಿ ನಿಮ್ಮ ಕೆಲಸ ಮಾಡುವ ಅವಕಾಶವನ್ನು ಮಾಡಿಕೊಟ್ಟು ಆಶೀರ್ವಾದ ಮಾಡಿದ್ದೀರಿ. ನಾನು ನನ್ನ ಶಕ್ತಿಮೀರಿ ನಿಮ್ಮ ಸೇವೆಯನ್ನು ಮಾಡುವ ಪ್ರಯತ್ನ ಮಾಡಿದ್ದೇನೆ. ನಿಮ್ಮ ಆಶೀರ್ವಾದದಿಂದ ಕೇಂದ್ರದಲ್ಲಿ ನಮ್ಮೆಲ್ಲರ ಪ್ರೀತಿಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜತೆಗೆ 7 ವರ್ಷಗಳ ಕಾಲ ಕ್ಯಾಬಿನೆಟ್‌ ಮಂತ್ರಿಯಾಗಿ ಕೆಲಸ ಮಾಡುವ ಅವಕಾಶವನ್ನು ಕೂಡ ಕಲ್ಪಿಸಿದ್ದೀರಿ. ನಾನು ನಿಮ್ಮೆಲ್ಲರಿಗೂ ಚಿರಋಣಿ. ನಿಮ್ಮ ಜೊತೆಗೆ ಇನ್ನು ಮುಂದೆಯೂ ಇರುತ್ತೇನೆ. ಎಲ್ಲರಿಗೂ ನನ್ನ ಅಂತರಾಳದ ಹೃದಯ ತುಂಬಿದ ಧನ್ಯವಾದಗಳು’ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದರು.‘ತಂತ್ರಗಾರಿಕೆ ಕಾರಣಕ್ಕೆ ಟಿಕೆಟ್‌ ಇಲ್ಲ’

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸದಾನಂದಗೌಡರು, ನನಗೆ ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾ ಅವರು ಮಧ್ಯಾಹ್ನ ಫೋನ್‌ ಮಾಡಿದ್ದರು. ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಹೊಸ ಮುಖ ಪರಿಚಯ ಮಾಡುತ್ತಿದ್ದೇವೆ ಎಂದರು. ಅಭ್ಯರ್ಥಿಯ ಆಯ್ಕೆ ಸಂಬಂಧ ಸರ್ವೆ ಮಾಡುವ ಕೆಲಸ ಮಾಡಿ ಇದನ್ನು ತಿಳಿಸುತ್ತಿದ್ದೀರಾ ಎಂದು ನಾನು ಅವರನ್ನು ಕೇಳಿದೆ. ಅದಕ್ಕೆ ಅವರು ‘ಇದರ ಹಿಂದೆ ತಂತ್ರಗಾರಿಕೆ ಇದೆ. ಇದಕ್ಕೆ ನೀವು ಸಹಕಾರ ನೀಡಲೇಬೇಕು’ ಎಂದರು ಎಂದು ವಿವರಿಸಿದರು.

ಹೀಗಾಗಿ ನನ್ನ ಜತೆ ಕ್ಷೇತ್ರದಲ್ಲಿ 10 ವರ್ಷ ಜತೆಗಿದ್ದ ಎಲ್ಲರಿಗೂ ಧನ್ಯವಾದ ತಿಳಿಸಬೇಕು ಎಂದು ಮನಸಿಗೆ ಅನಿಸಿತು. ಹಾಗಾಗಿ ನನ್ನ ಜತೆ ನಿಂತ ಪಕ್ಷದ ಕಾರ್ತಕರ್ತರು, ಮುಖಂಡರಿಗೆ ಫೇಸ್‌ಬುಕ್‌ನಲ್ಲಿ ಧನ್ಯವಾದ ತಿಳಿಸಿದೆ. ಅಂದರೆ, ಸದಾನಂದಗೌಡರಿಗೆ ಟಿಕೆಟ್‌ ಕೈ ತಪ್ಪಿದ್ದು ಅವರಿಗೆ ಗೊತ್ತಿರಲಿ ಎಂದು ನಾನು ಮೊದಲೇ ತಿಳಿಸಿದ್ದೇನೆ. ನನ್ನ ಹಿತೈಷಿಗಳ ಮನಸಿನಲ್ಲಿ ಯಾವುದೇ ಭಾವನೆ ಬಾರದಿರಲಿ ಎಂದು ಮೊದಲೇ ಹಾಕಿದ್ದೇನೆ. ಅಂದರೆ, ನೇರವಾಗಿ ಹೇಳಿದ್ದೇನೆ. ರಾಜಕೀಯ ನಿವೃತ್ತಿ ಘೋಷಣೆ ಮಾಡಿಲ್ಲ ಎಂದರು.

ಚುನಾವಣಾ ರಾಜಕೀಯದಿಂದ ನಿವೃತ್ತಿ ಎಂದು ಎರಡು-ಮೂರು ದಿನದಿಂದ ಬೇರೆ ವಿದ್ಯಮಾನಗಳು ಕಂಡು ಬಂದಿತು. ರಾಷ್ಟ್ರೀಯ ಅಧ್ಯಕ್ಷರು ಕರೆ ಮೂಲಕ ತಿಳಿಸಿದಾಗ ಅವರಿಗೆ ಗೌರವಿಸುವುದು ನಮ್ಮ ಕೆಲಸ. ಯಾರನ್ನು ನಿಲ್ಲಿಸುತ್ತೇವೆ? ಯಾರನ್ನು ನಿಲ್ಲಿಸಬೇಕು ಎಂದು ನಾನು ಕೇಳಿಲ್ಲ ಎಂದು ಹೇಳಿದರು.‘‘ಕರೆದು ಟಿಕೆಟ್‌ ಕೊಡಿಸದ್ದಕ್ಕೆ ಮನಸಿಗೆ ನೋವಾಗಿದೆ’

ಇನ್ನು ಕಾಂಗ್ರೆಸ್‌ ಸೇರುವ ಹಾರಿಕೆ ಸುದ್ದಿ ಹರಿಡುವವರನ್ನು ದೇಶದ್ರೋಹಿಗಳು ಎಂದು ನಾನು ಅದೇ ಉತ್ತರ ಕೊಡುತ್ತೇನೆ. ನನಗೆ ಒಂದು ನೋವಿದೆ. ನನ್ನನ್ನು ಮತ್ತೆ ಕರೆದುಕೊಂಡು ಬಂದು ಅವಮಾನ ಮಾಡಿದ್ದಾರೆ ಎನ್ನುವ ಭಾವನೆ ನನ್ನದು. ನಾನು ಮುಖ್ಯಮಂತ್ರಿ ಸ್ಥಾನದಿಂದ ಇಳಿದಾಗಲೂ ಹಸನ್ಮುಖಿಯಾಗಿದ್ದೆ. ಕೇಂದ್ರ ಮಂತ್ರಿ ಸ್ಥಾನದಿಂದ ಇಳಿದಾಗಲೂ ಹೀಗೇ ಇದ್ದೆ. ನಾನು ಸತ್ಯ ಹರಿಶ್ಚಂದ್ರನ ಮೊಮ್ಮಗ ಅಲ್ಲ. ನನಗೆ ನೋವಾಗಿದೆ. ದೊಡ್ಡ ದೊಡ್ಡವರು ಬಂದು ನನ್ನನ್ನು ಕರೆದುಕೊಂಡು ಬಂದರು. ಟಿಕೆಟ್‌ ಕೊಡಿಸುತ್ತೇನೆ ಎಂದು ಕರೆತಂದವರು ಟಿಕೆಟ್‌ ಕೊಡಿಸಲೇ ಬೇಕಿತ್ತು. ಆದರೆ, ಅವರಿಗೆ ಟಿಕೆಟ್‌ ಕೊಡಿಸಲು ಆಗಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಇನ್ನು ಮುಂದೆ ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ. ಈ ಕ್ಷೇತ್ರ ತಿಳಿದವರಿಗೆ ಅವಕಾಶ ಕೊಟ್ಟಾಗ ಗೆಲುವು ಸುಲಭವಾಗಲಿದೆ. ಒಂದು ವೇಳೆ ಈ ಕ್ಷೇತ್ರದ ಬಗ್ಗೆ ಗೊತ್ತಿಲ್ಲದವರಿಗೆ ಟಿಕೆಟ್‌ ಕೊಟ್ಟರೆ ನಾವು ಹಗಲು-ರಾತ್ರಿ ಕೆಲಸ ಮಾಡಬೇಕಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Share this article