ಮುಡಾ ರೇಡ್‌ : ವೈಟ್ನರ್‌ ಹಾಕಿ ತಿದ್ದಿದ ಸಿಎಂ ಪತ್ನಿ ಪತ್ರದ ಮೂಲ ಪ್ರತಿ ಇ.ಡಿ. ವಶಕ್ಕೆ!

Published : Oct 20, 2024, 05:44 AM IST
Parvathi Siddaramaiah

ಸಾರಾಂಶ

ಸೈಟ್‌ ಹಂಚಿಕೆಯಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಮೇಲೆ ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯ(ಇ.ಡಿ.) ಅಧಿಕಾರಿಗಳು, ಎರಡನೇ ದಿನವಾದ ಶನಿವಾರ ರಾತ್ರಿವರೆಗೂ ದಾಖಲೆಗಳ ಪರಿಶೀಲನೆ ನಡೆಸಿದರು.

ಮೈಸೂರು : ಸೈಟ್‌ ಹಂಚಿಕೆಯಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಮೇಲೆ ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯ(ಇ.ಡಿ.) ಅಧಿಕಾರಿಗಳು, ಎರಡನೇ ದಿನವಾದ ಶನಿವಾರ ರಾತ್ರಿವರೆಗೂ ದಾಖಲೆಗಳ ಪರಿಶೀಲನೆ ನಡೆಸಿದರು. ಈ ವೇಳೆ ಎರಡು ಹಾರ್ಡ್‌ ಡಿಸ್ಕ್‌ನಲ್ಲಿ ದಾಖಲೆಗಳನ್ನು ಸಂಗ್ರಹಿಸಿ ಕೊಂಡೊಯ್ದಿರುವ ಅಧಿಕಾರಿಗಳು, ವೈಟ್ನರ್‌ ಹಾಕಿ ತಿದ್ದಲಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಪತ್ರದ ಮೂಲ ಪ್ರತಿಯನ್ನೂ ಮುಡಾದಿಂದ ವಶಪಡಿಸಿಕೊಂಡಿದ್ದಾರೆ.

ಈ ಹಿಂದೆ ನೋಟಿಸ್‌ ನೀಡಿದರೂ ಮುಡಾ ಅಧಿಕಾರಿಗಳು ವೈಟ್ನರ್‌ ಹಾಕಿ ತಿದ್ದಲಾಗಿರುವ ದಾಖಲೆಗಳ ಮೂಲ ಪ್ರತಿಯನ್ನು ಇ.ಡಿ.ಗೆ ನೀಡಲು ಹಿಂದೇಟು ಹಾಕಿದ್ದರು. ಶುಕ್ರವಾರ ಇಡೀ ದಿನದ ವಿಚಾರಣೆ ಬಳಿಕ ಕೊನೆಗೂ ಆ ದಾಖಲೆಗಳನ್ನು ಮುಡಾ ಅಧಿಕಾರಿಗಳು ನೀಡಿದ್ದಾರೆ. ಈ ವೇಳೆ ಆ ಮೂಲ ದಾಖಲೆಯ ಅಸಲಿಯತ್ತು ಪತ್ತೆಗಾಗಿ ಎಫ್ಎಸ್ಎಲ್ ಅಧಿಕಾರಿಯನ್ನೂ ಇ.ಡಿ. ಅಧಿಕಾರಿಗಳು ಕರೆಸಿಕೊಂಡು ಪರಿಶೀಲಿಸಿದ್ದಾರೆ.

ಮುಡಾ ಮೇಲೆ ದಾಳಿ ನಡೆಸಿರುವ ಇ.ಡಿ. ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಸಂಬಂಧಿಸಿದ ಪ್ರಕರಣವನ್ನೇ ಗುರಿಯಾಗಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಕೇವಲ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಸಂಬಂಧಿಸಿದ 14 ನಿವೇಶನಗಳ ಬಗೆಗಿನ ದಾಖಲೆಗಳಿಗಾಗಿಯಷ್ಟೇ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ಶುಕ್ರವಾರ ನಡೆದ ನಿರಂತರ 12 ಗಂಟೆಗಳ ವಿಚಾರಣೆಯಲ್ಲಿ ಇ.ಡಿ. ಅಧಿಕಾರಿಗಳು, ಮುಖ್ಯಮಂತ್ರಿ ಪತ್ನಿ ಹಿಂದಿರುಗಿಸಿರುವ 14 ನಿವೇಶನಗಳ ಕುರಿತಷ್ಟೇ ಮಾಹಿತಿಯನ್ನು ಕೇಳಿದ್ದರು. ಕೆಸೆರೆ ಗ್ರಾಮದ ಸರ್ವೇ ನಂ. 464ರ ಪ್ರಕರಣ ಹೊರತು ಮತ್ಯಾವ ವಿಚಾರದ ಕುರಿತೂ ಗಮನ ನೀಡದ ಅಧಿಕಾರಿಗಳು, ಪ್ರಕರಣಕ್ಕೆ ಸಂಬಂಧಿಸಿ ಎಫ್‌ಡಿಎ, ಎಸ್‌ಡಿಎ, ತಹಸೀಲ್ದಾರ್ ಹಾಗೂ ಇತರರನ್ನೂ ವಿಚಾರಣೆಗೊಳಪಡಿಸಿದ್ದಾರೆ.

100 ಪುಟಗಳ ದಾಖಲೆ:

ಮೈಸೂರು ತಾಲೂಕು ಕಚೇರಿಯಲ್ಲೂ ತಪಾಸಣೆ ನಡೆಸಿದ್ದ ಇ.ಡಿ. ಅಧಿಕಾರಿಗಳು, ತಹಸೀಲ್ದಾರ್ ಮಹೇಶ್ ಕುಮಾರ್ ಬಳಿ ಕೆಸರೆ ಸರ್ವೇ ನಂ.464ಕ್ಕೆ ಭೂಮಿಗೆ ಸಂಬಂಧಿಸಿದ 1935 ಇಸವಿಯ ಎಂ.ಆರ್. ಕಾಪಿಯನ್ನು ಕೇಳಿ ತರಿಸಿಕೊಂಡಿದ್ದಾರೆ. ತಾಲೂಕು ಕಚೇರಿಯಿಂದ 1935ರಿಂದ ಭೂಮಿಯನ್ನು ಮುಡಾ ವಶಪಡಿಸಿಕೊಂಡಿರುವವರೆಗಿನ ಸುಮಾರು 100 ಪುಟಗಳ ದಾಖಲೆ ಜೆರಾಕ್ಸ್ ಪ್ರತಿಗಳಿಗೆ ತಹಸೀಲ್ದಾರ್ ಮಹೇಶ್ ಕುಮಾರ್ ಅವರಿಂದ ಸಹಿ ಹಾಕಿಸಿಕೊಂಡಿದ್ದಾರೆ.

ಜತೆಗೆ ನಾವು ಕೇಳಿದಾಗ ಮೂಲ ದಾಖಲೆಗಳನ್ನು ನೀಡಬೇಕು. ವಿಚಾರಣೆಗೆ ಕರೆದಾಗ ಬರಬೇಕು ಎಂದು ತಹಸೀಲ್ದಾರ್ ಮಹೇಶ್ ಕುಮಾರ್ ಅವರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ಶಿಫಾರಸ್ಸು ಪತ್ರಗಳೂ ವಶಕ್ಕೆ

ವೈಟ್ನರ್‌ ಹಾಕಿ ತಿದ್ದಿರುವ ಮುಖ್ಯಮಂತ್ರಿ ಪತ್ನಿ ಅವರ ಪತ್ರದ ಮೂಲ ಪ್ರತಿ, ಜನಪ್ರತಿನಿಧಿಗಳ ಶಿಫಾರಸು ಪತ್ರಗಳನ್ನು ನೀಡುವಂತೆ 10 ದಿನದ ಹಿಂದೆ ಮುಡಾಗೆ ನೀಡಿದ್ದ ನೋಟಿಸ್‌ನಲ್ಲಿ ಇ.ಡಿ. ಸೂಚಿಸಿತ್ತು. ಆದರೆ ವೈಟ್ನರ್ ಹಾಕಿದ್ದ ದಾಖಲೆಯ ಮೂಲ ಪ್ರತಿ ಹಾಗೂ ಶಿಫಾರಸು ಪತ್ರ ಕೊಡಲು ಮುಡಾ ಅಧಿಕಾರಿಗಳು ಮೀನಮೇಷ ಎಣಿಸುತ್ತಾ ಸುಮ್ಮನೆ ಕೂತಿದ್ದರು. ಹೀಗಾಗಿ ಇದೀಗ ಇ.ಡಿ. ಅಧಿಕಾರಿಗಳು ದಾಳಿ ನಡೆಸಿ ತನಿಖೆಗೆ ಅಗತ್ಯವಾದ ಆ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಮುಡಾದಲ್ಲಿ ಯಾರು ಯಾರಿಗೆ 50:50 ಅನುಪಾತದ ನಿವೇಶನ ಹಂಚಿಕೆಗೆ ಶಿಫಾರಸು ಮಾಡಿದ್ದರು? ಯಾರು ಯಾರಿಗೆ ಬದಲಿ ನಿವೇಶನ ಕೊಡಿಸಿದ್ದರು ಎಂಬ ಶಿಫಾರಸು ಪತ್ರಗಳು ಇದೀಗ ಇ.ಡಿ. ಕೈ ಸೇರಿವೆ. ಮುಡಾದಲ್ಲಿ ಸದಸ್ಯರಾಗಿದ್ದ ಬಹುತೇಕ ಜನಪ್ರತಿನಿಧಿಗಳ ಅಸಲಿ ಜಾತಕ ಈಗ ಇ.ಡಿ. ಕೈಯಲ್ಲಿದ್ದು, ಮುಡಾದ ಪ್ರತಿ ಸಭೆಯ ವರದಿ, ಎಲ್ಲಾ ಸೈಟ್‌ಗಳ ದಾಖಲೆಗಳ ಅಧ್ಯಯನ, ಶಿಫಾರಸು ಪತ್ರಗಳ ಜಾಡು ಹಿಡಿದು ತನಿಖೆ ಮುಂದುವರೆಸಿದ್ದಾರೆ.

ಸಿಎಂ ಪತ್ನಿ ಕೇಸ್‌ ಮಾತ್ರ ತನಿಖೆ

ಮುಡಾದಲ್ಲಿ 5000 ಕೋಟಿ ರು.ಗಳಷ್ಟು ವ್ಯಾಪಕ ಭ್ರಷ್ಟಾಚಾರ ನಡೆದಿದೆ, ಸೈಟುಗಳ ಹಂಚಿಕೆಯಲ್ಲಿ ಭಾರೀ ಅವ್ಯವಹಾರ ನಡೆಸಲಾಗಿದೆ ಎಂಬ ಆರೋಪಗಳಿದ್ದರೂ, ಇ.ಡಿ. ಅಧಿಕಾರಿಗಳು ಮುಡಾ ಕಚೇರಿಯಿಂದ ಪಾರ್ವತಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ದಾಖಲೆಗಳನ್ನು ಮಾತ್ರ ಪಡೆಯುತ್ತಿದ್ದಾರೆ. ಈ ಪ್ರಕರಣದ ಬಗ್ಗೆ ಮಾತ್ರ ಇ.ಡಿ.ಯಲ್ಲಿ ಕೇಸ್‌ ದಾಖಲಾಗಿದ್ದು, ಈ ಹಿಂದೆ ಮುಡಾಗೆ ನೀಡಿದ ನೋಟಿಸ್‌ನಲ್ಲೂ ಈ ಪ್ರಕರಣ ಕುರಿತ ಮಾಹಿತಿಯನ್ನಷ್ಟೇ ಇ.ಡಿ. ಕೇಳಿತ್ತು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಸಂಕ್ರಾಂತಿ ಬಳಿಕ ರಾಜ್ಯ ಸಚಿವ ಸಂಪುಟ ಪುನಾರಚನೆ: ಸಲೀಂ
ಜಿ ರಾಮ್‌ ಜಿ, ಅನುದಾನ ಕಡಿತ ವಿರುದ್ಧ ಇಂದು ರಾಜ್ಯ ಸಂಪುಟದಲ್ಲಿ ನಿರ್ಣಯ?