ಚುನಾವಣೆ ಸಂಹಿತೆ: ಕೆಎಸ್ಸಾರ್ಟಿಸಿ ಬಸ್‌ ಮೇಲೆ ನಿಗಾ

KannadaprabhaNewsNetwork | Updated : Mar 20 2024, 09:10 AM IST

ಸಾರಾಂಶ

ಲೋಕಸಭೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಸಾಗಿಸುವ ಸರಕುಗಳ ಮೇಲೆ ನಿಗಾವಹಿಸಲಾಗುತ್ತಿದ್ದು, ಬಸ್‌ಗಳಲ್ಲಿ ಸೂಕ್ತ ದಾಖಲೆಗಳಿಲ್ಲದ ಹಾಗೂ ನೀತಿ ಸಂಹಿತೆಗೆ ಧಕ್ಕೆ ಬರುವ ವಸ್ತುಗಳ ಸಾಗಾಟ ಮಾಡದಂತೆ ನಿರ್ವಾಹಕರು ಹಾಗೂ ಚಾಲಕರಿಗೆ ಸೂಚನೆ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಲೋಕಸಭೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಸಾಗಿಸುವ ಸರಕುಗಳ ಮೇಲೆ ನಿಗಾವಹಿಸಲಾಗುತ್ತಿದ್ದು, ಬಸ್‌ಗಳಲ್ಲಿ ಸೂಕ್ತ ದಾಖಲೆಗಳಿಲ್ಲದ ಹಾಗೂ ನೀತಿ ಸಂಹಿತೆಗೆ ಧಕ್ಕೆ ಬರುವ ವಸ್ತುಗಳ ಸಾಗಾಟ ಮಾಡದಂತೆ ನಿರ್ವಾಹಕರು ಹಾಗೂ ಚಾಲಕರಿಗೆ ಸೂಚನೆ ನೀಡಲಾಗಿದೆ.

ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮತದಾರರಿಗೆ ಆಮಿಷವೊಡ್ಡುವಂತಹ ವಸ್ತುಗಳು ಸೇರಿದಂತೆ ದಾಖಲೆಗಳಿಲ್ಲದೆ ಸರಕು ಸಾಗಣೆ ಮಾಡಲು ನಿಷೇಧವಿದೆ. 

ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿಗೆ ಸಂಬಂಧಪಟ್ಟ ಕರಪತ್ರ, ಬ್ಯಾನರ್‌ ಸೇರಿದಂತೆ ಇನ್ನಿತರ ವಸ್ತುಗಳನ್ನು ಬಸ್‌ನಲ್ಲಿ ಸಾಗಿಸುತ್ತಿದ್ದರೆ ಮುದ್ರಕರ ವಿವರ, ರಸೀದಿ ಸೇರಿದಂತೆ ಇನ್ನಿತರ ದಾಖಲೆಗಳನ್ನು ಪರಿಶೀಲಿಸಬೇಕು. 

ದಾಖಲೆ ಇಲ್ಲದ ವಸ್ತುಗಳನ್ನು ಬಸ್‌ಗಳಲ್ಲಿ ಸಾಗಿಸಲು ಅನುಮತಿಸಬಾರದು. ಬಸ್‌ಗಳಲ್ಲಿ ರಾಜಕೀಯ ಪ್ರಚಾರದ ವಸ್ತುಗಳನ್ನು ಪ್ರದರ್ಶಿಸಬಾರದು ಹಾಗೂ ಪ್ರಯಾಣಿಕರಿಗೆ ಆ ಕುರಿತ ವಸ್ತುಗಳನ್ನು ಹಂಚಬಾರದು ಎಂದು ಕೆಎಸ್ಸಾರ್ಟಿಸಿ ಭದ್ರತೆ ಮತ್ತು ಜಾಗೃತ ವಿಭಾಗದ ನಿರ್ದೇಶಕರು ಆದೇಶಿಸಿದ್ದಾರೆ.

ಪ್ರಯಾಣಿಕ ರಹಿತ ಲಗೇಜ್‌ ಸಾಗಿಸುವಾಗ ಲಗೇಜ್‌ ನೀಡಿದವರ ಮತ್ತು ಅದನ್ನು ಸ್ವೀಕರಿಸುವವರ ಸಂಪೂರ್ಣ ವಿವರ ಪಡೆಯಬೇಕು ಹಾಗೂ ಹೀಗೆ ಸಾಗಿಸುವ ಲಗೇಜ್‌ನಲ್ಲಿ ನಗದು, ಚಿನ್ನ, ಬೆಳ್ಳಿ ಸೇರಿದಂತೆ ಮತದಾರರನ್ನು ಸೆಳೆಯಬಹುದಾದ ವಸ್ತುಗಳು ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. 

ಪ್ರಯಾಣಿಕರ ಲಗೇಜ್‌ಗಳಲ್ಲಿ ಅನುಮಾನಾಸ್ಪದ ವಸ್ತುಗಳನ್ನು ಕಂಡು ಬಂದರೆ ಕೂಡಲೆ ಪರಿಶೀಲಿಸಬೇಕು, ಒಂದು ವೇಳೆ ನಿಷೇಧಿತ ವಸ್ತುಗಳನ್ನು ಸಾಗಿಸುವ ಸಂಬಂಧ ಪ್ರಯಾಣಿಕರು ತಕರಾರು ಮಾಡಿದರೆ ಅಂತಹ ಸರಕುಗಳನ್ನು ಸಮೀಪದ ಪೊಲೀಸರಿಗೆ ಒಪ್ಪಿಸಬೇಕು ಎಂದು ಆದೇಶಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

Share this article