ಚುನಾವಣಾ ಬಾಂಡ್ ಉನ್ನತ ಮಟ್ಟದ ತನಿಖೆ ಆಗಲಿ: ಪ್ರಶಾಂತ ಭೂಷಣ

KannadaprabhaNewsNetwork |  
Published : Apr 21, 2024, 02:15 AM ISTUpdated : Apr 21, 2024, 06:44 AM IST
ಕರ್ನಾಟಕ ರಾಜ್ಯ ಎಸ್‌.ಸಿ, ಎಸ್‌.ಟಿ ಗುತ್ತಿಗೆದಾರರ ಸಂಘದಿಂದ ಆಯೋಜಿಸಿದ್ದ ‘ಚುನಾವಣಾ ಬಾಂಡ್ ಮತ್ತು ಮುಂದಿನ ಕ್ರಮಗಳು’ ಕುರಿತು ರಾಷ್ಟ್ರೀಯ ವಿಚಾರಗೋಷ್ಠಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ನಮನ ಸಲ್ಲಿಸಿದ ಪ್ರಶಾಂತ್ ಭೂಷಣ್ ಹಾಗೂ ಇತರ ಗಣ್ಯರು. | Kannada Prabha

ಸಾರಾಂಶ

ಬಿಜೆಪಿಗೆ ಗರಿಷ್ಠ ಪ್ರಮಾಣದಲ್ಲಿ ನೀಡಲಾಗಿರುವ ಚುನಾವಣಾ ಬಾಂಡ್ ಬಗ್ಗೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ, ಸಿಬಿಐನ ನಿವೃತ್ತ ಮುಖ್ಯಸ್ಥರ ನೇತೃತ್ವದಲ್ಲಿ ಸುಪ್ರೀಂಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ಸಮಗ್ರ ತನಿಖೆಯಾಗಬೇಕು ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಹೇಳಿದರು.

 ಬೆಂಗಳೂರು :   ಬಿಜೆಪಿಗೆ ಗರಿಷ್ಠ ಪ್ರಮಾಣದಲ್ಲಿ ನೀಡಲಾಗಿರುವ ಚುನಾವಣಾ ಬಾಂಡ್ ಬಗ್ಗೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ, ಸಿಬಿಐನ ನಿವೃತ್ತ ಮುಖ್ಯಸ್ಥರ ನೇತೃತ್ವದಲ್ಲಿ ಸುಪ್ರೀಂಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ಸಮಗ್ರ ತನಿಖೆಯಾಗಬೇಕು ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಹೇಳಿದರು.

ಕರ್ನಾಟಕ ರಾಜ್ಯ ಎಸ್‌.ಸಿ, ಎಸ್‌.ಟಿ ಗುತ್ತಿಗೆದಾರರ ಸಂಘದಿಂದ ಶನಿವಾರ ನಗರದ ಯುವಿಸಿಇ ಅಲೂಮ್ನಿ ಅಸೋಸಿಯೇಷನ್‌ನಲ್ಲಿ ಆಯೋಜಿಸಿದ್ದ ‘ಚುನಾವಣಾ ಬಾಂಡ್ ಮತ್ತು ಮುಂದಿನ ಕ್ರಮಗಳು’ ಕುರಿತು ರಾಷ್ಟ್ರೀಯ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಬಾಂಡ್ ಅಸಂವಿಧಾನಿಕ ಎಂದು ಸುಪ್ರೀಂಕೋರ್ಟ್ ಹೇಳಿದೆ. ಸುಪ್ರೀಂಕೋರ್ಟ್ ಖಡಕ್ ಆದೇಶದ ಬಳಿಕ ಯಾವ ವ್ಯಕ್ತಿಗಳು, ಕಂಪನಿಗಳು, ಯಾವ ಯಾವ ರಾಜಕೀಯ ಪಕ್ಷಗಳಿಗೆ ಹಣ ನೀಡಿವೆ ಎಂಬ ಮಾಹಿತಿಯನ್ನು ಎಸ್‌ಬಿಐ ನೀಡಿದೆ. ಸಾವಿರಾರು ಕೋಟಿ ರುಪಾಯಿಯಲ್ಲಿ ಅರ್ಧದಷ್ಟು ಹಣ ಬಿಜೆಪಿಗೆ ಹೋಗಿದೆ ಎಂದರು.

ಬಾಂಡ್ ರೂಪದಲ್ಲಿ ಬಿಜೆಪಿಗೆ ಹಣ ನೀಡಿರುವ ಕಂಪನಿಗಳಿಗೆ ಸರ್ಕಾರದಿಂದ ಕಾಮಗಾರಿ, ಗುತ್ತಿಗೆ ಕೆಲಸಗಳನ್ನು ನೀಡಲಾಗಿದೆ. ಹಲವು ಅನುಕೂಲ ಮಾಡಿಕೊಡಲಾಗಿದೆ. ಕೆಲಸಕ್ಕಾಗಿ ಕಿಕ್‌ಬ್ಯಾಕ್ ಮಾದರಿಯಲ್ಲಿ ಚುನಾವಣಾ ಬಾಂಡ್ ಅಕ್ರಮ ನಡೆಸಲಾಗಿದೆ. ಹೀಗಾಗಿ, ರಾಜಕೀಯ ಪಕ್ಷಗಳು, ಬಾಂಡ್ ಪಡೆದಿರುವ ಕಂಪನಿಗಳು, ವ್ಯಕ್ತಿಗಳು ಹಾಗೂ ಸಿಬಿಐ, ಐಟಿ ಮತ್ತು ಇ.ಡಿ ಅಧಿಕಾರಗಳ ಪಾತ್ರದ ಬಗ್ಗೆಯು ತನಿಖೆಯಾಗಬೇಕು ಎಂದು ಪ್ರಶಾಂತ್ ಭೂಷಣ್ ಹೇಳಿದರು.

ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆಯಾಗಬೇಕು. ಚುನಾವಣೆಗೆ ಸ್ಪರ್ಧಿಸುವರಿಂದ ನಗದು ಖರ್ಚು ಮಾಡುವುದಕ್ಕೆ ಕಡಿವಾಣ ಹಾಕಬೇಕು. ಪ್ರತಿ ಅಭ್ಯರ್ಥಿಯು ಚುನಾವಣೆಗೆ ₹75 ಲಕ್ಷ ಖರ್ಚು ಮಾಡಬಹುದು ಎಂದು ಆಯೋಗ ವೆಚ್ಚ ನಿಗದಿಪಡಿಸಿದೆ. ಆದರೆ, ಅಭ್ಯರ್ಥಿಗಳು ₹75 ಕೋಟಿವರೆಗೆ ಖರ್ಚು ಮಾಡುತ್ತಾರೆ ಎಂದು ಹೇಳಿದರು.ವಕೀಲ ಹರೀಶ್ ನರಸಪ್ಪ ಉಪಸ್ಥಿತರಿದ್ದರು.

ಚುನಾವಣಾ ಬಾಂಡ್ ಎಂದರೆ ಭ್ರಷ್ಟಾಚಾರ: ಪ್ರೊ.ತ್ರಿಲೋಚನ್‌

ಪ್ರೊ. ತ್ರಿಲೋಚನ್ ಶಾಸ್ತ್ರಿ ಮಾತನಾಡಿ, ಚುನಾವಣಾ ಬಾಂಡ್ ಎಂದರೆ ಭ್ರಷ್ಟಾಚಾರ. ಈ ಭ್ರಷ್ಟಾಚಾರವನ್ನು ಪರೋಕ್ಷವಾಗಿ ಅಧಿಕೃತಗೊಳಿಸಲು ಬಾಂಡ್ ವ್ಯವಸ್ಥೆಯನ್ನು ತರಲಾಗಿದೆ. ಇದರ ವಿರುದ್ಧ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಹೇಳಿದರು.

ಸಾಮಾಜಿಕ ಕಾರ್ಯಕರ್ತೆ ಅಂಜಲಿ ಭಾರಧ್ವಾಜ್ ಮಾತನಾಡಿ, ರಾಜಕೀಯ ಪಕ್ಷಗಳಿಗೆ ಯಾರು ಎಷ್ಟು ಹಣ ನೀಡುತ್ತಾರೆ ಎಂಬ ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ರಾಜಕೀಯ ಪಕ್ಷಗಳನ್ನು ಕೂಡ ಆರ್‌ಟಿಐ ವ್ಯಾಪ್ತಿಗೆ ತರಬೇಕು ಎಂದು ಒತ್ತಾಯಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಮತಚೋರಿ ಹೆಸರಲ್ಲಿ ಸುಳ್ಳು ಪ್ರಚಾರ ತಪ್ಪು: ದೇವೇಗೌಡ
ದೆಹಲಿಯಲ್ಲೂ ಸಿದ್ದು ಸಿದ್ದು, ಡಿಕೆ ಡಿಕೆ ಸದ್ದು