ಮೋದಿ ಅವರ 10 ವರ್ಷದ ಆಡಳಿತದಲ್ಲಿ ಕ್ರಾಂತಿಕಾರಿ ಯೋಜನೆ ಅನುಷ್ಠಾನ: ತೇಜಸ್ವಿ ಸೂರ್ಯ

KannadaprabhaNewsNetwork |  
Published : Apr 21, 2024, 02:15 AM ISTUpdated : Apr 21, 2024, 06:47 AM IST
Modi Palace Ground 3 | Kannada Prabha

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ವಿವಿಧ ವಲಯಗಳಲ್ಲಿ ಅನುಷ್ಠಾನಗೊಂಡ ಕ್ರಾಂತಿಕಾರಿ ಯೋಜನೆಗಳಿಂದ ದೇಶದ ಚಿತ್ರಣವೇ ಬದಲಾಗಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವೀ ಸೂರ್ಯ ಹೇಳಿದ್ದಾರೆ.

 ಬೆಂಗಳೂರು :  ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ವಿವಿಧ ವಲಯಗಳಲ್ಲಿ ಅನುಷ್ಠಾನಗೊಂಡ ಕ್ರಾಂತಿಕಾರಿ ಯೋಜನೆಗಳಿಂದ ದೇಶದ ಚಿತ್ರಣವೇ ಬದಲಾಗಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವೀ ಸೂರ್ಯ ಹೇಳಿದ್ದಾರೆ.

ಶನಿವಾರ ಅರಮನೆ ಮೈದಾನದಲ್ಲಿ ನಡೆದ ವಿಜಯ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹತ್ತು ವರ್ಷಗಳ ಹಿಂದೆ ಎಲ್ಲೆಡೆ ತುಂಬಿ ತುಳುಕುತ್ತಿದ್ದ ಭ್ರಷ್ಟಾಚಾರ ತೊಲಗಿ, ಪಾರದರ್ಶಕ, ಸ್ವಚ್ಚ, ಅಭಿವೃದ್ಧಿಯ ಆಡಳಿತಕ್ಕೆ ಮೋದಿ ಅವರು ಮುನ್ನುಡಿ ಬರೆದಿದ್ದಾರೆ ಎಂದರು.

ಸ್ವಚ್ಛತೆ ಸರ್ಕಾರಿ ಕೆಲಸದ ಭಾಗವಲ್ಲ ಎಂಬ ಧೋರಣೆಯಿದ್ದ ಕಾಲವೊಂದಿತ್ತು. ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡ ಕೂಡಲೇ ಸ್ವಚ್ಛತೆಯೇ ದೇವರು ಎಂದು ಭಾವಿಸಿ ಸ್ವಚ್ಛ ಭಾರತ್‌ ಮಿಷನ್‌ ಆರಂಭಿಸಿದರು. ಈ ಯೋಜನೆಯಡಿ ದೇಶದಲ್ಲಿ 12 ಕೋಟಿ ಶೌಚಾಲಯಗಳು ನಿರ್ಮಾಣಗೊಂಡಿವೆ. 4,650 ನಗರಗಳು ಬಯಲು ಶೌಚ್ಛ ಮುಕ್ತಗೊಂಡಿವೆ. ಶೌಚಾಲಯಗಳಿಂದ ನೆರೆಹೊರೆಯಲ್ಲಿ ಸ್ವಚ್ಛ ಪರಿಸರ ಸಾಧ್ಯವಾಗಿದ್ದು, ಮಹಿಳೆಯರು ಗೌರವ ಮತ್ತು ಘನತೆ ಕಾಪಾಡಿಕೊಳ್ಳಲು ಸಾಧ್ಯವಾಗಿದೆ. ಈ ಯೋಜನೆಯಡಿ ಸಾರ್ವಜನಿಕ ಸ್ಥಳಗಳು, ಸರ್ಕಾರಿ ಕಚೇರಿಗಳಲ್ಲೂ ಸ್ಚಚ್ಛತಾ ಕಾರ್ಯಗಳು ಯಶಸ್ವಿಯಾಗಿ ಮುಂದುವರೆದಿವೆ ಎಂದು ವಿವರಿಸಿದರು.

ಸರ್ವರಿಗೂ ಆರೋಗ್ಯ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಹತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಐದು ಲಕ್ಷ ರೂ.ವರೆಗೆ ಉಚಿತ ಆರೋಗ್ಯ ಚಿಕಿತ್ಸೆ ವೆಚ್ಚ ಭರಿಸುವ ಆಯುಷ್ಮಾನ್‌ ಭಾರತ್‌ ಯೋಜನೆಯನ್ನು ಇದೀಗ 70 ವರ್ಷ ಮೇಲ್ಪಟ್ಟವರಿಗೂ ವಿಸ್ತರಿಸಲಾಗಿದೆ. ಆರೋಗ್ಯ ರಕ್ಷಣೆ ವ್ಯವಸ್ಥೆಯಲ್ಲಿ ಅರ್ಹ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಲು ಜಾರಿಗೆ ತಂದಿರುವ ಆಯುಷ್ಮಾನ್‌ ಭಾರತ್‌ ಯೋಜನೆಯಡಿ 58 ಕೋಟಿ ಖಾತೆಗಳು ನೋಂದಣಿಯಾಗಿವೆ. ಇ-ಸಂಜೀವಿನಿ ಯೋಜನೆ ಮೂಲಕ 22 ಕೋಟಿಗೂ ಅಧಿಕ ರೋಗಿಗಳಿಗೆ ಚಿಕಿತ್ಸೆ ಒದಗಿಸಲಾಗಿದೆ ಎಂದು ತಿಳಿಸಿದರು.

ಇಡೀ ವಿಶ್ವದಲ್ಲೇ ಅತಿದೊಡ್ಡ ರೈಲ್ವೆ ಜಾಲವನ್ನು ಹೊಂದಿರುವ ಭಾರತೀಯ ರೈಲ್ವೆಯಲ್ಲಿ ಮಹತ್ವದ ಸುಧಾರಣೆಗಳನ್ನು ಮಾಡಲಾಗಿದೆ. ಗಂಟೆಗಟ್ಟಲೆ, ದಿನಗಟ್ಟಲೆ ರೈಲುಗಳಿಗೆ ಕಾಯಬೇಕಾದ ಕಾಲವಿತ್ತು. ರೈಲು ನಿಲ್ದಾಣಗಳಲ್ಲಿ ಮೂಗು ಮುಚ್ಚಿಕೊಳ್ಳಬೇಕಾದ ಪರಿಸ್ಥಿತಿ ಇತ್ತು. ಆದರೆ ಈಗ ಆ ಪರಿಸ್ಥಿತಿಯಿಲ್ಲ. ಹೆಚ್ಚಿನ ಸಂಖ್ಯೆ ಹೊಸ ರೈಲುಗಳು, ಹೊಸ ರೈಲು ಮಾರ್ಗಗಳು ಆರಂಭಗೊಂಡಿವೆ. ಇದುವರೆಗೂ ರೈಲು ಸೌಲಭ್ಯವನ್ನೇ ಕಾಣದ, ದುರ್ಗಮ ಪ್ರದೇಶಗಳಲ್ಲಿಯೂ ಕೂಡ ರೈಲು ಮಾರ್ಗಗಳನ್ನು ಆರಂಭಿಸಲಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋ ವಿಜ್ಞಾನಿಗಳನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದರಿಂದ, ಕಳೆದ ಹತ್ತು ವರ್ಷಗಳಲ್ಲಿ ಬಾಹ್ಯಾಕಾಶ ವಲಯದಲ್ಲಿ ಅನೇಕ ಯೋಜನೆಗಳು ಯಶಸ್ವಿಯಾಗಿ ನಡೆದಿವೆ. ಚಂದ್ರಯಾನ 3 ನೌಕೆಯನ್ನು ಇಸ್ರೋ, ಯಶಸ್ವಿಯಾಗಿ ಚಂದ್ರನ ದಕ್ಷಿಣ ತುದಿಗೆ ಇಳಿಸುವುದರ ಮೂಲಕ ಭಾರತ ಈ ಸಾಧನೆ ಮಾಡಿದ ಮೊದಲ ರಾಷ್ಟ್ರವೆನಿಸಿತು. ಒಂದೇ ಬಾರಿ 104 ಉಪಗ್ರಹಗಳನ್ನು ಉಡಾವಣೆ ಮಾಡಿದ ಸಾಧನೆಯ ಕೀರ್ತಿಯೂ ಭಾರತಕ್ಕಿದೆ. ವಿದೇಶಗಳು ಇಂದು ತಮ್ಮ ಉಪಗ್ರಹಗಳನ್ನು ಇಸ್ರೋ ಮೂಲಕ ಉಡಾಯಿಸಲು ಸಾಲುಗಟ್ಟಿ ನಿಂತಿವೆ ಎಂದು ತೇಜಸ್ವೀ ಸೂರ್ಯ ಹೇಳಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಜೆಡಿಯು ನಾಯಕ ನಿತೀಶ್‌ ರಾಜ್ಯಸಭೆಗೆ - ಸಿಎಂ ಸ್ಥಾನಕ್ಕೆ ರಾಜೀನಾಮೆ
ರಾಜ್ಯದಲ್ಲಿ ಇ-ವಾಹನ ಕ್ಷೇತ್ರ ಅಭಿವೃದ್ಧಿಗೆ ಒತ್ತು : ಎಚ್‌.ಡಿ. ಕುಮಾರಸ್ವಾಮಿ