ಬ್ರೇಕ್‌ಫಾಸ್ಟ್‌ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವುಕ ವಿದಾಯ

Published : May 29, 2026, 08:06 AM IST
siddaramaiah and dk shivakumar

ಸಾರಾಂಶ

ಅದು ಭಾವನಾತ್ಮಕ ಉಪಾಹಾರ ಕೂಟ. ಮುಖ್ಯಮಂತ್ರಿಯಾಗಿ ಕಟ್ಟಕಡೆಯ ಬಾರಿಗೆ ತಮ್ಮ ಸಂಪುಟದ ಸಹೋದ್ಯೋಗಿಗಳೊಂದಿಗೆ ಕುಳಿತು ಮೌನವಾಗಿ ಉಪಾಹಾರ ಸೇವಿಸಿದ ನಂತರ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿ ಗದ್ಗದಿತರಾದರು.

 ಬೆಂಗಳೂರು : ಅದು ಭಾವನಾತ್ಮಕ ಉಪಾಹಾರ ಕೂಟ. ಮುಖ್ಯಮಂತ್ರಿಯಾಗಿ ಕಟ್ಟಕಡೆಯ ಬಾರಿಗೆ ತಮ್ಮ ಸಂಪುಟದ ಸಹೋದ್ಯೋಗಿಗಳೊಂದಿಗೆ ಕುಳಿತು ಮೌನವಾಗಿ ಉಪಾಹಾರ ಸೇವಿಸಿದ ನಂತರ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿ ಗದ್ಗದಿತರಾದರು. ಈ ಮಾತುಗಳನ್ನು ಆಲಿಸುತ್ತಾ ಹಲವು ಸಚಿವರು ಕಣ್ಣೀರಾದರು. ಇಡೀ ಕೂಟ ಭಾವನೆಗಳ ಸಾಗರದಲ್ಲಿ ಮಿಂದೆದ್ದಿತು.

ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹ ಕಚೇರಿ ಕೃಷ್ಣಾದಲ್ಲಿ ಅವರು ಸಂಪುಟದ ಸಹೋದ್ಯೋಗಿಗಳೊಂದಿಗೆ ನಡೆಸಿದ ಉಪಾಹಾರ ಕೂಟದ ಚಿತ್ರಣ.

ರಾಜೀನಾಮೆ ನಿರ್ಧಾರ ಪ್ರಕಟವಾಗುತ್ತಿದ್ದಂತೆಯೇ ಹಲವು ಸಚಿವರು ಭಾವುಕರಾದರು. ಕೆಲ ಸಚಿವರು ಮುಂದೇನು ಎಂಬ ಗೊಂದಲಕ್ಕೂ ಒಳಗಾದರು. ಮನಸ್ಸಿನ ತುಮುಲತೆ ನಡುವೆಯೇ ಭಾರವಾದ ಹೃದಯದಿಂದಲೇ ಮುಖ್ಯಮಂತ್ರಿ ಅವರ ವಿದಾಯ ಭಾಷಣವನ್ನು ಮುಗುಮ್ಮಾಗಿ ಆಲಿಸಿದರು.

ನಂತರ ಎಚ್‌.ಕೆ.ಪಾಟೀಲ್‌, ಡಾ। ಜಿ.ಪರಮೇಶ್ವರ್‌, ಎಚ್‌.ಸಿ.ಮಹದೇವಪ್ಪ, ಬೈರತಿ ಸುರೇಶ್‌, ಕೆ.ಜೆ.ಜಾರ್ಜ್‌, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿದಂತೆ ಒಂದಷ್ಟು ಹಿರಿಯ ಸಚಿವರು ಒಬ್ಬೊಬ್ಬರೇ ಮಾತನಾಡಿ ಸಿದ್ದರಾಮಯ್ಯ ಅವರ ಜನಪರ, ಅಭಿವೃದ್ಧಿ ಪರವಾದ ಆಡಳಿತ, ಅಪಾರವಾದ ಮಾನವೀಯ ಗುಣ, ಬಡವರ ಪರವಾದ ಕಾಳಜಿ, ಸಮಾನತೆ, ಸ್ವತಂತ್ರವಾಗಿ ತಮ್ಮ ತಮ್ಮ ಇಲಾಖೆ ನಡೆಸಲು ನೀಡಿದ ಸಹಕಾರ, ಯಶಸ್ವಿಯಾಗಿ ತಮ್ಮ ಜವಾಬ್ದಾರಿ ನಿಭಾಯಿಸಲು ತೋರಿದ ಮಾರ್ಗದರ್ಶನದ ಗುಣಗಳನ್ನು ಶ್ಲಾಘಿಸಿ ಕೃತಜ್ಞತೆ ಸಲ್ಲಿಸಿದರು.

ಇನ್ನು ಕೆಲವರು ನೀವು ರಾಜೀನಾಮೆ ನೀಡಿದರೂ ನೀವೇ ನಮ್ಮ ನಾಯಕರು, ನಿಮ್ಮ ಮಾರ್ಗದರ್ಶನದಲ್ಲೇ ನಾವು ಪಕ್ಷದಲ್ಲಿ ಮುಂದುವರೆಯುತ್ತೇವೆ ಎಂದು ಹೇಳಿದರು.

ಇಡ್ಲಿ, ವಡಾ, ಉಪ್ಪಿಟ್ಟು, ಕೇಸರಿಬಾತ್‌:

ನಿರೀಕ್ಷೆಯಂತೆ ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್‌ ಸೇರಿದಂತೆ ಸಂಪುಟದ ಎಲ್ಲ ಸಚಿವರಿಗೂ ಗುರುವಾರ ಬೆಳಗ್ಗೆ ಗೃಹ ಕಚೇರಿ ಕೃಷ್ಣಾಗೆ ಉಪಹಾರ ಸಭೆಗೆ ಬುಧವಾರ ಸಂಜೆಯೇ ಆಹ್ವಾನ ನೀಡಿದ್ದರು. ಅದರಂತೆ ಎಲ್ಲ ಸಚಿವರೂ ನಿಗದಿತ ಸಮಯಕ್ಕೆ ಆಗಮಿಸಿದರು. ಎಲ್ಲರಿಗೂ ಇಡ್ಲಿ, ವಡಾ, ಉಪ್ಪಿಟ್ಟು, ಕೇಸರಿಬಾತ್‌ ಉಪಹಾರ ಬಡಿಸಲಾಗಿತ್ತು. ಸಚಿವರೆಲ್ಲರೂ ಉಪಹಾರ ಸೇವಿಸಿ ಪೂರ್ಣಗೊಳಿಸುತ್ತಿದ್ದಂತೆ ಮುಖ್ಯಮಂತ್ರಿ ಅವರು ಸುಮಾರು ಒಂದೂವರೆ ಗಂಟೆ ಸುದೀರ್ಘವಾಗಿ ಮಾತನಾಡಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಮತ್ತು ಡಿ.ಕೆ.ಶಿವಕುಮಾರ್‌ ಅವರ ನೇತೃತ್ವದಲ್ಲಿ ಪಕ್ಷ 136 ಸೀಟುಗಳ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. ನಮ್ಮ ಸರ್ಕಾರದಲ್ಲಿ ಕಳೆದ ಮೂರು ವರ್ಷಗಳಲ್ಲಿ ಉತ್ತಮ ಜನಪರವಾದ ಆಡಳಿತ ನೀಡಿದ್ದೇವೆ. ಇದಕ್ಕೆ ಕಾರಣ ನನಗೆ ಎರಡು ಬಾರಿ ಮುಖ್ಯಮಂತ್ರಿಯಾಗಲು ಅವಕಾಶ ನೀಡಿದ ಕಾಂಗ್ರೆಸ್‌ ಹೈಕಮಾಂಡ್‌ ಹಾಗೂ ನನ್ನ ಸಚಿವ ಸಂಪುಟದ ಸಹೋದ್ಯೋಗಿಗಳಾದ ನೀವೆಲ್ಲರೂ ನನಗೆ ನೀಡಿದ ಸಂಪೂರ್ಣ ಸಹಕಾರ, ನಿಮ್ಮ ನಿಮ್ಮ ಇಲಾಖೆಗಳ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದು. ನಾನೆಂದೂ ನನ್ನ ತತ್ವ ಸಿದ್ಧಾಂತದಲ್ಲಿ ರಾಜಿಯಾದವನಲ್ಲ ಎಂದರು ಎಂದು ತಿಳಿದುಬಂದಿದೆ.

ಬುದ್ಧ, ಬಸವ, ಅಂಬೇಡ್ಕರ್‌ ಅವರ ತತ್ವ ಆದರ್ಶಗಳೊಂದಿಗೆ ಎಲ್ಲರಿಗೂ ಸಮಾನವಾದ ಅವಕಾಶಗಳು ಸಿಗಬೇಕು, ಸಮಾಜದಲ್ಲಿ ಸಮಾನತೆ ಬರಬೇಕು, ಅಸ್ಪೃಶ್ಯತೆ ಹೋಗಲಾಡಿಸಬೇಕು. ಕಟ್ಟಕಡೆಯ ವ್ಯಕ್ತಿಗೂ ಅನ್ನ, ಬಟ್ಟೆ, ಆಶ್ರಯ ಒದಗಿಸಬೇಕೆಂಬ ಗುರಿ ಇಟ್ಟುಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಕಳೆದ ಕೆಲ ತಿಂಗಳಿಂದ ನಾಯಕತ್ವ ಬದಲಾವಣೆಯ ಗೊಂದಲ ಏರ್ಪಟ್ಟಿತ್ತು. ಹೈಕಮಾಂಡ್‌ ಹೇಳಿದರೆ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳುತ್ತಲೇ ಬಂದಿದ್ದೆ ಎಂದು ತಿಳಿಸಿದರು ಎನ್ನಲಾಗಿದೆ.

ಈಗ ಅದರಂತೆ ಹೈಕಮಾಂಡ್‌ ನಿರ್ದೇಶನ ನೀಡಿದೆ. ಅದನ್ನು ಒಪ್ಪಿ ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡುತ್ತಿದ್ದೇನೆ. ನನಗೆ ಯಾವುದೇ ನೋವಿಲ್ಲ, ಮನಃಪೂರ್ವಕವಾಗಿ ರಾಜೀನಾಮೆ ನೀಡುತ್ತಿದ್ದೇನೆ. ಇದಕ್ಕೆ ಯಾರೂ ವಿಚಲಿತರಾಗುವುದು ಬೇಡ. ರಾಜಕೀಯದಲ್ಲಿ ಬದಲಾವಣೆಗಳು ಸಾಮಾನ್ಯ, ಮುಂದಿನ ಎರಡು ವರ್ಷ ನಾನು ಶಾಸಕನಾಗಿ ನಿಮ್ಮೊಂದಿಗೆ ಇರುತ್ತೇನೆ. ಮುಂದೆಯೂ ಸಕ್ರಿಯ ರಾಜಕೀಯದಲ್ಲಿ ಇರುತ್ತೇನೆ. 2028ಕ್ಕೂ ಎಲ್ಲರೂ ಒಟ್ಟಾಗಿ ಪಕ್ಷವನ್ನು ಸಂಘಟಿಸಿ ಮತ್ತೆ ಅಧಿಕಾರಕ್ಕೆ ತರೋಣ ಎಂದು ಹೇಳಿದರು ಎಂದು ಮಾಹಿತಿ ಲಭ್ಯವಾಗಿದೆ.

ಭಾವುಕರಾದ ಸಚಿವರು:

ರಾಜೀನಾಮೆ ನಿರ್ಧಾರ ಪ್ರಕಟಿಸುತ್ತಿದ್ದಂತೆ ಬಹುತೇಕ ಸಚಿವರ ಮುಖಗಳು ಬಾಡಿದವು, ಕೆಲವರು ಭಾವುಕರಾದರು. ಒಬ್ಬೊಬ್ಬರಾಗಿಯೇ ಮುಖ್ಯಮಂತ್ರಿ ಅವರ ಜನಪರ ಆಡಳಿತ, ಬಡವರ ಪರವಾದ ಕಾಳಜಿ, ಇಲಾಖೆಯಲ್ಲಿ ತಮಗೆ ನೀಡಿದ ಸ್ವಾತಂತ್ರ್ಯ, ಸಹಕಾರ, ಮಾರ್ಗದರ್ಶನ ಹಾಗೂ ಅವರಿಂದ ಕಲಿತ ಪಾಠಗಳ ಬಗ್ಗೆ ಹೇಳುತ್ತಾ ಗುಣಗಾನ ಮಾಡಿದರು. ತಾವು ಇನ್ನೂ ಎರಡು ವರ್ಷ ಮುಖ್ಯಮಂತ್ರಿ ಆಗಿದ್ದುಕೊಂಡು ರಾಜ್ಯವನ್ನು ನಡೆಸಬೇಕೆಂಬುದು ನಮ್ಮ ಅಪೇಕ್ಷೆಯಾಗಿತ್ತು. ಆದರೆ, ನೀವೇ ಹೇಳಿದಂತೆ ಹೈಕಮಾಂಡ್‌ ನಿರ್ಧಾರಕ್ಕೆ ನಾವೆಲ್ಲರೂ ತಲೆಬಾಗಲೇಬೇಕಾಗುತ್ತದೆ. ನೀವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ನೀವೇ ನಮ್ಮ ನಾಯಕರು, ನಿಮ್ಮ ಮಾರ್ಗದರ್ಶನ, ಸಲಹೆ, ಸಹಕಾರದೊಂದಿಗೆ ಮುನ್ನಡೆಯುವುದಾಗಿ ತಿಳಿಸಿ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಸಭೆಯಲ್ಲಿ ಡಿ.ಕೆ ಶಿವಕುಮಾರ್, ಡಾ। ಜಿ.ಪರಮೇಶ್ವರ್‌, ಸತೀಶ್ ಜಾರಕಿಹೋಳಿ, ಮಹದೇವಪ್ಪ, ಕೆ.ಜೆ.ಜಾರ್ಜ್‌, ರಾಮಲಿಂಗಾರೆಡ್ಡಿ, ಶರಣು ಪ್ರಕಾಶ್ ಪಾಟೀಲ್, ಪ್ರಿಯಾಂಕ್ ಖರ್ಗೆ, ಮುನಿಯಪ್ಪ, ಎಚ್.ಕೆ.ಪಾಟೀಲ್, ಜಮೀರ್‌ ಅಹಮದ್‌ ಖಾನ್‌, ಈಶ್ವರ್ ಖಂಡ್ರೆ, ಬೋಸರಾಜು, ಬೈರತಿ ಸುರೇಶ್, ಸಂತೋಷ್ ಲಾಡ್, ಡಾ.ಎಂ.ಸಿ. ಸುಧಾಕರ್, ಎಂ.ಬಿ. ಪಾಟೀಲ್, ಎಸ್‌.ಎಸ್‌ ಮಲ್ಲಿಕಾರ್ಜುನ್‌, ಕೆ.ವೆಂಕಟೇಶ್, ಶಿವರಾಜ್ ತಂಗಡಗಿ, ಚೆಲುವರಾಯಸ್ವಾಮಿ, ಲಕ್ಷ್ಮೀ ಹೆಬ್ಬಾಳ್ಕರ್, ದರ್ಶಾನಪುರ, ಮಧು ಬಂಗಾರಪ್ಪ, ಮಂಕಾಳ್ ವೈದ್ಯ, ತಿಮ್ಮಾಪುರ್ ಸೇರಿದಂತೆ ಬಹುತೇಕ ಎಲ್ಲಾ ಸಚಿವರೂ ಹಾಜರಿದ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಸಿದ್ದು ಮಾರ್ಗದರ್ಶನದಲ್ಲಿ ನಡೆಯುವೆ : ಡಿಕೆಶಿ ವಾಗ್ದಾನ
ಸರ್ಕಾರ ರಚನೆಗಾಗಿ ಸಿದ್ದು, ಡಿಕೆಶಿ ದೆಹಲಿಗೆ