ನಿಷೇಧಿತ ಪ್ರದೇಶದಲ್ಲಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ ಶುರು । ಸ್ಥಳೀಯ ನಿವಾಸಿಗಳಿಂದ ತೀವ್ರ ಪ್ರತಿರೋಧ
ಜನರ ಪರ ಬೀದಿಗಿಳಿದ ಏಳೆಂಟು ಜನ ಪೊಲೀಸ್ ವಶಕ್ಕೆಕನ್ನಡಪ್ರಭ ವಾರ್ತೆ ದಾವಣಗೆರೆ
ವರ್ತುಲ ರಸ್ತೆ ನಿರ್ಮಾಣಕ್ಕಾಗಿ ಇಲ್ಲಿನ ಹೆಗ್ಡೆ ನಗರದ ಸುಮಾರು 419ಕ್ಕೂ ಹೆಚ್ಚು ಮನೆಗಳ ತೆರವು ಕಾರ್ಯವನ್ನು ಶನಿವಾರ ಬೆಳಿಗ್ಗೆಯಿಂದಲೇ ನಿಷೇಧಿತ ಪ್ರದೇಶದಲ್ಲಿ ಪೊಲೀಸ್ ಇಲಾಖೆ ವ್ಯಾಪಕ ಭದ್ರತೆಯೊಂದಿಗೆ ಜನರ ತೀವ್ರ ವಿರೋಧದ ಮಧ್ಯೆಯೂ ಜಿಲ್ಲಾಡಳಿತ, ನಗರ ಪಾಲಿಕೆ ಕೈಗೊಂಡಿದ್ದು, ಕಾರ್ಯಾಚರಣೆಗೆ ಅಡ್ಡಿಪಡಿಸಿದ ಮಹಿಳೆಯರು ಸೇರಿದಂತೆ ಏಳೆಂಟು ಜನರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದ ಘಟನೆ ನಡೆಯಿತು.ನಗರದ ವರ್ತುಲ ರಸ್ತೆಯನ್ನು ಇಲ್ಲಿನ ಪಿಬಿ ರಸ್ತೆಯಿಂದ ಆರ್‌ಟಿಓ ಕಚೇರಿ ಮಾರ್ಗವಾಗಿ ಮಾಗಾನಹಳ್ಳಿ ರಸ್ತೆವರೆಗೆ ವಿಸ್ತರಿಸಬೇಕಿದ್ದು, ಹೆಗಡೆ ನಗರವನ್ನು ಹಾದು ಹೋಗಿರುವ ರಸ್ತೆಯಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದರಿಂದ ಅಲ್ಲಿನ ಜನರಿಗೆ ಬೇರೆ ಕಡೆ ಜಾಗದ ವ್ಯವಸ್ಥೆ ಮಾಡಿದ್ದು, ಬಹುತೇಕರಿಗೆ ಹಕ್ಕುಪತ್ರ ನೀಡಲಾಗಿದೆ. ಉಳಿದಂತೆ ಶನಿವಾರ ರಾತ್ರಿ ಉಪ ವಿಭಾಗಾಧಿಕಾರಿ ಎನ್.ದುರ್ಗಾಶ್ರೀ ಇಲ್ಲಿನ ಹೆಗಡೆ ನಗರ ಭಾಗದಲ್ಲಿ ವರ್ತುಲ ರಸ್ತೆ ಒತ್ತುವರಿ ತೆರವು ಕಾರ್ಯ ಕೈಗೊಳ್ಳುವ ಪ್ರದೇಶದಲ್ಲಿ ನಿಷೇಧಿತ ಪ್ರದೇಶವೆಂದು ಘೋಷಿಸಿ, ಆದೇಶ ಹೊರಡಿಸಿದ್ದರು.
ಬೆಳ್ಳಂ ಬೆಳಿಗ್ಗೆಯೇ ಪಾಲಿಕೆಯ ಜೆಸಿಬಿ ಯಂತ್ರಗಳು, ಹಿಟಾಚಿಗಳು, ಟಿಪ್ಪರ್, ಲಾರಿಗಳು ಹೆಗಡೆ ನಗರಕ್ಕೆ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಸಮೇತ ದೌಡಾಸಿದವು. ಅಲ್ಪಸಂಖ್ಯಾತರೆ ಹೆಚ್ಚಾಗಿ ವಾಸಿಸುತ್ತಿರುವ ಹೆಗ್ಡೆ ನಗರದಲ್ಲಿ ಸುಮಾರು 419 ಮನೆಗಳ ತೆರವು ಕಾರ್ಯಕ್ಕೆ ಬೆಳಿಗ್ಗೆಯೇ ಜಿಲ್ಲಾಡಳಿ, ಪಾಲಿಕೆ ಅಧಿಕಾರಿಗಳು ಮುಂದಾದರು. ಆಗ ಸ್ಥಳೀಯರಿಂದ ತೆರವು ಕಾರ್ಯಕ್ಕೆ ತೀವ್ರ ವಿರೋಧ ವ್ಯಕ್ತವಾಯಿತಲ್ಲದೇ ಅಧಿಕಾರಿಗಳು, ಸ್ಥಳೀಯ ನಿವಾಸಿಗಳ ಮಧ್ಯೆ ತೀವ್ರ ಮಾತಿನ ಚಕಮಕಿ ಏರ್ಪಟ್ಟಿದ್ದರಿಂದ ಬಿಗುವಿನ ಪರಿಸ್ಥಿತಿ ನಿರ್ಮಾಣವಾಯಿತು.ಸಾಮಾನುಗಳನ್ನು ತೆಗೆದುಕೊಳ್ಳುವುದಕ್ಕೂ ಬಿಡದಂತೆ ಮನೆಗಳನ್ನು ಏಕಾಏಕಿ ಬಂದು ಕೆಡವುತ್ತಿದ್ದಾರೆ. ಬೆಳಿಗ್ಗೆಯಿಂದಲೇ ಮನೆಗಳ ತೆರವು ಕಾರ್ಯಾಚರಣೆ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ, ಜೆಸಿಬಿ ಯಂತ್ರಗಳ ಸಮೇತ ಪೊಲೀಸರ ಭದ್ರತೆಯಲ್ಲಿ ಬಂದು, ಮನೆಗಳನ್ನು ಕೆಡವುತ್ತಿದ್ದಾರೆ. ಆಡಳಿತ ಯಂತ್ರಕ್ಕೆ ಕನಿಷ್ಠ ಮಾನವೀಯತೆಯೂ ಇಲ್ಲವೇ? ಏಕಾಏಕಿ ಬಂದು ಮನೆ ಕೆಡವಿದರೆ ನಾವು ಎಲ್ಲಿಗೆ ಹೋಗಬೇಕು ಎಂಬುದಾಗಿ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿಗಳಿಗೆ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿ, ಹಿಡಿಶಾಪ ಹಾಕ ತೊಡಗಿದರು.
ಹೆಗ್ಡೆ ನಗರದ ಸುಮಾರು 419 ಮನೆಗಳ ತೆರವಿಗೆ ಆಡಳಿತ ಯಂತ್ರ ನಿರ್ಧರಿಸಿದೆ. ಜಾಗ ತೆರವು ಮಾಡುವ ಕುಟುಂಬಗಳಿಗೆ ಬಾತಿ ಸಮೀಪ ನಿವೇಶನ ನೀಡಿ, ಹಕ್ಕುಪತ್ರ ವಿತರಿಸಲಾಗಿದೆ. ಆದರೆ, ಬಹುತೇಕರಿಗೆ ಬಕ್ಕುಪತ್ರ ಸಿಕ್ಕಿದ್ದರೂ, ಇನ್ನೂ ನೂರಾರು ಜನರಿಗೆ ಹಕ್ಕುಪತ್ರ ಸಿಕ್ಕಿಲ್ಲವೆಂಬ ಆರೋಪ ಕೇಳಿ ಬಂದಿತು. ಆಗ ಅಧಿಕಾರಿಗಳು, ತಾಂತ್ರಿಕ ಸಮಸ್ಯೆಯಿಂದಾಗಿ ಕೆಲವರಿಗೆ ಹಕ್ಕುಪತ್ರ ಸಿಕ್ಕಿಲ್ಲ. ಅಂತಹವರಿಗೆ ಸೂಕ್ತ ದಾಖಲಾತಿ ಸಮೇತ ಬರಲು ಅನುವಾಗುವಂತೆ ಟೋಕನ್ ನೀಡಲಾಗಿದೆ. ಅಂತಹವರಿಗೂ ನಿವೇಶನದ ಹಕ್ಕುಪತ್ರ ನೀಡಲಾಗುವುದು. ಹೆಗ್ಡೆ ನಗರದಿಂದ ಜಾಗ ತೆರವು ಮಾಡಿದವರಿಗೆ ನಿವೇಶನ ನೀಡಲು ಆಡಳಿತ ಯಂತ್ರ ಬದ್ಧವಾಗಿದೆ ಎಂದು ಅಧಿಕಾರಿಗಳು ಸ್ಪಷ್ಪಪಡಿಸಿದರೂ ಜನರಿಗೆ ಅದ್ಯಾವುದೂ ಕಿವಿಗೆ ಹೋಗುವ ಸ್ಥಿತಿ ಅಲ್ಲಿರಲಿಲ್ಲ. ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಸಂತೋಷ್, ಉಪ ವಿಭಾಗಾಧಿಕಾರಿ ಎನ್.ದುರ್ಗಾಶ್ರೀ, ಪಾಲಿಕೆ ಆಯುಕ್ತೆ ರೇಣುಕಾ ಸೇರಿದಂತೆ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದು, ಜನರಿಗೆ ಸಮಾಧಾನಪಡಿಸುವ ಕೆಲಸಕ್ಕೆ ಮುಂದಾಗಿದ್ದರು. ಶನಿವಾರ ರಾತ್ರಿಯೂ ಸ್ಥಳದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಪೊಲೀಸ್ ಭದ್ರತೆ ಮುಂದುವರಿದಿತ್ತು. ಭಾನುವಾರ ಬೆಳಗಿನ ಜಾವ 5.30ರವರೆಗೂ ಹೆಗಡೆ ನಗರ ಪ್ರದೇಶ ನಿಷೇಧಿತ ಪ್ರದೇಶಾಗಿದ್ದು, ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಮಾಡಿದ್ದಾರೆ.ಬಾಕ್ಸ್....
ನೀವು ಹಠ ಸಾಧಿಸುತ್ತಿದ್ಧೀರಿ: ಆಯುಕ್ತರಿಗೆ ಸ್ಥಳೀಯರ ಪ್ರಶ್ನೆದಾವಣಗೆರೆ; ನೀವು ಜೆಸಿಬಿ ಯಂತ್ರಗಳನ್ನು ತರಿಸಿ, ಪೊಲೀಸ್ ಜೀಪುಗಳನ್ನು ತರಿಸಿ, ಮನೆಗಳನ್ನು ಕೆಡವುದಕ್ಕೆ ನಮ್ಮನ್ನೆಲ್ಲಾ ಹೆದರಿಸಿದರೆ, ನಾವ್ಯಾರು ಇಲ್ಲಿ ಹೆದರುವುದಿಲ್ಲ. ಇಲ್ಲಿಂದ ನಮ್ಮನ್ನು ತೆರವು ಮಾಡಿಸುವುದಕ್ಕಾಗಿ ನೀವು ಹಠ ಸಾಧಿಸುತ್ತಿದ್ದೀರಿ. ನೀವು ಹೀಗೆ ಹಠವನ್ನು ಸಾಧಿಸಿ ಏನು ಮಾಡುತ್ತೀರಿ ಎಂಬುದಾಗಿ ಸ್ಥಳೀಯ ಮುಖಂಡ ಖಾದರ್ ಸಾಬ್ ದಾವಣಗೆರೆ ಮಹಾ ನಗರ ಪಾಲಿಕೆ ಆಯುಕ್ತೆ ರೇಣುಕಾ ಅವರನ್ನು ತರಾಟೆಗೆ ತೆಗೆದುಕೊಂಡರು. ಬೆಳಿಗ್ಗೆ ಬೆಳಿಗ್ಗೆಯೇ ಜೆಸಿಬಿ ತಂದು, ಪೊಲೀಸರನ್ನು ಕರೆ ತಂದು, ಮನೆಗಳನ್ನು ಕೆಡವಿದರೆ ಮಕ್ಕಳು, ಮರಿಗಳು, ವಯೋವೃದ್ಧರು ಎಲ್ಲಿಗೆ ಹೋಗಬೇಕು? ಮನೆಯ ವಸ್ತುಗಳು, ಬಟ್ಟೆ, ಬರೆ ಕಟ್ಟಿಕೊಂಡು ಹೆಗ್ಡೆ ನಗರ ನಿವಾಸಿಗಳು ಎಲ್ಲಿಗೆ ಹೋಗಬೇಕು? ಏನು ಮಾಡಬೇಕು? ಮನೆಯಲ್ಲಿರುವ ವಸ್ತುಗಳನ್ನು ಹೊರಗೆ ತೆಗೆದುಕೊಳ್ಳಲು ಅವಕಾಶ ನೀಡುವುದಿಲ್ಲವೆಂದರೆ ಏನರ್ಥ? ಇದಾ ನಿಮ್ಮ ಜನ ಸೇವೆ ಎಂಬುದಾಗಿ ಖಾದರ್ ಸಾಬ್ ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಸ್ಥಳದಲ್ಲಿ ಮಹಿಳೆಯರು, ಹಿರಿಯರು ಸಹ ಧ್ವನಿಗೂಡಿಸಿದರು.
----