ನಾಗಮಂಗಲದಲ್ಲಿ 15ನೇ ನಾಗರಂಗ ನಾಟಕೋತ್ಸವ ಸಮಾರೋಪ । ಸಚಿವ ಚಲುವನಾರಾಯಸ್ವಾಮಿ ಬೇಸರ
ಸುಸಜ್ಜಿತ ಕಲಾಮಂದಿರ ನಿರ್ಮಿಸಲು ಈ ಹಿಂದೆ ಶಾಸಕರಾಗಿದ್ದ ಅವಧಿಯಲ್ಲಿ ಸರ್ಕಾರದಿಂದ ಬಿಡುಗಡೆ ಮಾಡಿಸಿದ್ದ ಅನುದಾನ ವಾಪಸ್ ಹೋಗಲು ತಾಲೂಕಿನ ಜನರೇ ಕಾರಣ ಹೊರತು ನಾನು ಹೊಣೆಯಲ್ಲ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಕನ್ನಡ ಸಂಘವು ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕಳೆದ 7 ದಿನಗಳಿಂದ ನಡೆಸುತ್ತಿರುವ 15ನೇ ನಾಗರಂಗ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ರಂಗಭೂಮಿ, ಜಾನಪದ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ತಾಲೂಕಿನ ಅನೇಕ ಮಹನೀಯರ ಕೊಡುಗೆ ಅಪಾರ. ಅಲ್ಲದೆ ಕಳೆದ 5 ದಶಕಗಳ ಹಿಂದೆ ಪಟ್ಟಣದಲ್ಲಿ ಸ್ಥಾಪಿತಗೊಂಡಿರುವ ಕನ್ನಡ ಸಂಘವು ಸಾಹಿತ್ಯಿಕವಾಗಿ ಅಭಿರುಚಿ ಮೂಡಿಸುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಹಲವು ಸಂಘ,ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು.
ಪಟ್ಟಣದಲ್ಲಿ ಕಲಾ ಮಂದಿರ ನಿರ್ಮಾಣವಾಗಿಲ್ಲವೆಂದರೆ ಅದಕ್ಕೆ ತಾಲೂಕಿನ ಜನರು ಉತ್ತರಿಸಬೇಕೇ ಹೊರತು ಈ ಚಲುವರಾಯಸ್ವಾಮಿ ಉತ್ತರಿಸುವ ಅಗತ್ಯವಿಲ್ಲ. ನಾನು ಮಂಜೂರು ಮಾಡಿಸಿದ್ದ ಕಲಾ ಮಂದಿರಕ್ಕೆ ಐದು ವರ್ಷದಲ್ಲಿ ಜಾಗ ಗುರುತಿಸಲು ಸಾಧ್ಯವಾಗಿಲ್ಲ ಎಂದರೆ ಅದು ನನ್ನ ತಪ್ಪಲ್ಲ ಎಂದು ಪರೋಕ್ಷವಾಗಿ ಮಾಜಿ ಶಾಸಕ ಸುರೇಶ್‌ಗೌಡರನ್ನು ಜರಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಸ್ಥಾಪನೆಯಾಗಿ 50 ವರ್ಷ ಕಳೆದಿದೆ. ಈ ಕಟ್ಟಡವನ್ನು ಅತ್ಯಾಧುನಿಕ ರೀತಿಯಲ್ಲಿ ನವೀಕರಿಸಲು ಈಗಾಗಲೇ ರೂಪುರೇಷೆ ಸಿದ್ದಪಡಿಸಿ ಅಂದಾಜು ಪಟ್ಟಿ ತಯಾರಿಸಲಾಗಿದೆ. ಪಟ್ಟಣದಲ್ಲಿ ಸುಸಜ್ಜಿತ ಕಲಾ ಮಂದಿರ ನಿರ್ಮಾಣಗೊಳ್ಳುವವರೆಗೂ ರಂಗ ಚಟುವಟಿಕೆಗಳ ಅನುಕೂಲಕ್ಕಾಗಿ ಇದೇ ರಂಗಮಂದಿರವನ್ನು ದೊಡ್ಡದಾಗಿ ವಿಸ್ತರಿಸಲು ಕ್ರಮವಹಿಸಲಾಗುವುದು ಎಂದರು.
ಬಳಿಕ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಗೌರವಾರ್ಪಣೆ ಸಲ್ಲಿಸಿದ ಸಂಘದ ಪದಾಧಿಕಾರಿಗಳು ಶೀಘ್ರದಲ್ಲಿ ಕಲಾ ಮಂದಿರ ನಿರ್ಮಾಣಕ್ಕೆ ಕ್ರಮವಹಿಸುವಂತೆ ಮನವಿ ಪತ್ರ ಸಲ್ಲಿಸಿದರು.