ಬಿಜೆಪಿಯಿಂದ ಹೊರ ಬಂದಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅಧಿಕೃತವಾಗಿ ಕಾಂಗ್ರೆಸ್‌ ಸೇರ್ಪಡೆ

Published : Oct 24, 2024, 05:25 AM IST
 CP Yogeshwar

ಸಾರಾಂಶ

ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಬುಧವಾರ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದಾರೆ. ಅವರು ಗುರುವಾರ ಬೆಳಗ್ಗೆ ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ.

ಬೆಂಗಳೂರು : ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಬುಧವಾರ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದಾರೆ. ಅವರು ಗುರುವಾರ ಬೆಳಗ್ಗೆ ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಇದರೊಂದಿಗೆ ಯೋಗೇಶ್ವರ್ ಮುಂದಿನ ನಡೆ ಕುರಿತ ಕುತೂಹಲಕ್ಕೆ ತೆರೆ ಬಿದ್ದಿದೆ. ಅವರ ವಿರುದ್ಧ ಜೆಡಿಎಸ್‌ನಿಂದ ಯಾರು ಸ್ಪರ್ಧಿಸುತ್ತಾರೆಂಬುದು ಈಗ ಸಸ್ಪೆನ್ಸ್.

ಬಿಜೆಪಿಯಿಂದ ಹೊರ ಬಂದಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅಧಿಕೃತವಾಗಿ ಕಾಂಗ್ರೆಸ್ ಬಾವುಟ ಹಿಡಿದಿದ್ದಾರೆ.ಬೆಂಗಳೂರಿನ ಡಿಸಿಎಂ ಡಿಕೆ ಶಿವಕುಮಾರ್ ನಿವಾಸಕ್ಕೆ ಆಗಮಿಸಿದ ಯೋಗೇಶ್ವರ್, ಚರ್ಚೆ ನಡೆಸಿದರು. ಅಲ್ಲಿಂದ ನೇರವಾಗಿ ಡಿಕೆ ಸೋದರರ ಜೊತೆಯಲ್ಲಿ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ತೆರಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಶೀರ್ವಾದ ಪಡೆದುಕೊಂಡು ಸಿಪಿ ಯೋಗೇಶ್ವರ್ ನೇರವಾಗಿ ಕೆಪಿಸಿಸಿ ಕಚೇರಿಗೆ ತೆರಳಿದರು. ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಬಾವುಟ ಹಿಡಿದು ಪ್ರಾಥಮಿಕ ಸದಸ್ಯತ್ವ ಸ್ವೀಕರಿಸಿದರು. ಇತ್ತ ಮತ್ತೊಂದೆಡೆ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಪತ್ರವನ್ನು ವಾಟ್ಸಪ್ ಮೂಲಕ ರಾತ್ರಿಯೇ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ರವಾನಿಸಿದ್ದಾರೆ.

ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿದೆ. ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಕಾರಣ ಚನ್ನಪಟ್ಟಣ ಕ್ಷೇತ್ರವನ್ನು ದಳಪತಿಗಳಿಗೆ ಬಿಟ್ಟು ಕೊಡಲಾಗಿತ್ತು. ಜೆಡಿಎಸ್ ಚಿಹ್ನೆಯಡಿಯಲ್ಲಿ ಸ್ಪರ್ಧೆ ಮಾಡುವಂತೆ ಯೋಗೇಶ್ವರ್ ಅವರಿಗೆ ದಳಪತಿಗಳು ಆಫರ್ ನೀಡಿದ್ದರು. ಜೆಡಿಎಸ್ ಆಫರ್ ತಿರಸ್ಕರಿಸಿದ್ದ ಯೋಗೇಶ್ವರ್, ಬಿಜೆಪಿಯಿಂದಲೇ ಬಿ ಫಾರಂ ಬೇಕೆಂದು ಹಠ ಹಿಡಿದಿದ್ದರು.  

ಬಿಜೆಪಿ ಮೈತ್ರಿ ಧರ್ಮ ಪಾಲನೆಯಿಂದ ಹಿಂದೆ ಸರಿಯದ ಕಾರಣ, ಯೋಗೇಶ್ವರ್ ಕಾಂಗ್ರೆಸ್ ಸೇರಿದ್ದಾರೆ. ಕಾಂಗ್ರೆಸ್ ಮೊದಲಿನಿಂದಲೂ ಅಚ್ಚರಿ ಅಭ್ಯರ್ಥಿ ಸ್ಪರ್ಧೆ ಮಾಡ್ತಾರೆ ಅಂತಾನೇ ಹೇಳಿಕೊಂಡು ಬಂದಿತ್ತು. ಡಿಸಿಎಂ ಮಾತ್ರ ನಾನೇ ಅಭ್ಯರ್ಥಿ ಅಂತಾನೇ ಹೇಳಿಕೆ ನೀಡಿದ್ದರು. ಇದೀಗ ಬಿಜೆಪಿ ಅಭ್ಯರ್ಥಿಯನ್ನೇ ಹೈಜಾಕ್ ಮಾಡುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಸಿ.ಪಿ.ಯೋಗೇಶ್ವರ್ ಅವರನ್ನು ಮನವೊಲಿಸಿ ಕಾಂಗ್ರೆಸ್‌ಗೆ ಕರೆದುಕೊಂಡು ಬರುವ ಟಾಸ್ಕ್ ನ್ನು ಮಾಗಡಿ ಶಾಸಕ ಬಾಲಕೃಷ್ಣ ಅವರಿಗೆ ಡಿಕೆ ಶಿವಕುಮಾರ್ ನೀಡಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್‌ನಿಂದ ಸಿ.ಪಿ.ಯೋಗೇಶ್ವರ್ ಸ್ಪರ್ಧೆ ಮಾಡೋದು ಖಾತ್ರಿಯಾಗಿದ್ದು, ಗುರುವಾರ ನಾಮಪತ್ರ ಸಲ್ಲಿಸುವ ಸಾಧ್ಯತೆಗಳಿವೆ. ಇತ್ತ ಜೆಡಿಎಸ್‌ನಿಂದ ಯಾರು ಅಭ್ಯರ್ಥಿ ಆಗ್ತಾರೆ ಎಂಬುದರ ಬಗ್ಗೆ ಕುತೂಹಲ ಮನೆ ಮಾಡಿದೆ. ನಿಖಿಲ್ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ಡಾ.ಸಿಎನ್ ಮಂಜುನಾಥ್ ಪತ್ನಿ ಅನುಸೂಯಾ ಅವರ ಹೆಸರು ಜೆಡಿಎಸ್ ಅಂಗಳದಿಂದ ಪ್ರಬಲವಾಗಿ ಕೇಳಿ ಬರುತ್ತಿದೆ.

ಜೆಡಿಎಸ್ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಚನ್ನಪಟ್ಟಣ ಕ್ಷೇತ್ರವನ್ನ ಕೈ ವಶ ಮಾಡಿಕೊಳ್ಳುವ ಮೂಲಕ ಬೆಂಗಳೂರು ಗ್ರಾಮಾಂತರ ಸೋಲಿನ ಸೇಡು ತೀರಿಸಿಕೊಳ್ಳಲು ಡಿಕೆ ಬ್ರದರ್ಸ್ ಪ್ಲಾನ್ ಮಾಡಿಕೊಂಡಿದ್ದಾರೆ. ಒಂದು ವೇಳೆ ಉಪ ಚುನಾವಣೆಯಲ್ಲಿ ಚನ್ನಪಟ್ಟಣ ಕಳೆದುಕೊಂಡರೆ ಕುಮಾರಸ್ವಾಮಿ ಅವರಿಗೆ ತವರಿನಲ್ಲಿಯೇ ಮುಖಭಂಗವಾದಂತೆ ಆಗಲಿದೆ.

ಕಾಂಗ್ರೆಸ್ ಸೇರ್ಪಡೆಗೆ ಸೈನಿಕನ ಷರತ್ತು!

*ಕ್ಯಾಬಿನೆಟ್ ದರ್ಜೆಯ ಹುದ್ದೆ ಕೊಡಬೇಕು.

*ಚುನಾವಣೆ ಖರ್ಚನ್ನು ಕಾಂಗ್ರೆಸ್ ಭರಿಸಬೇಕು.

*ಚುನಾವಣೆ ಬಳಿಕ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಎಂಎಸ್‌ಎಂಇ ಅಭಿವೃದ್ಧಿಗೆ ಸಂಪೂರ್ಣ ಸಹಕಾರ : ಸಚಿವೆ ಶೋಭಾ ಕರಂದ್ಲಾಜೆ
ಬಿಜೆಪಿ ವಿರುದ್ಧ ‘ಚಿಲುಮೆ’ ಅಸ್ತ್ರಕ್ಕೆ ಸರ್ಕಾರ ಸಜ್ಜು