ಕನ್ನಡಪ್ರಭ ವಾರ್ತೆ ಬೆಂಗಳೂರುನರೇಂದ್ರ ಮೋದಿ ಅವರು ಚುನಾವಣೆ ಬಂದಾಗಲೆಲ್ಲ ಧರ್ಮ ಸೇರಿದಂತೆ ಜನರ ಭಾವನಾತ್ಮಕ ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಆದರೆ, ಜನರ ಮೂಲ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾಗಾಂಧಿ ಹೇಳಿದರು.
ಬೆಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಶಿಕ್ಷಣ, ನಿರುದ್ಯೋಗ, ಬೆಲೆ ಏರಿಕೆ, ಹೆಣ್ಣುಮಕ್ಕಳ ಸಬಲೀಕರಣ ವಿಚಾರವಾಗಿ ಮೋದಿ ಮಾತನಾಡಲಿ. ದೇಶದಲ್ಲಿ ದೊಡ್ಡ ಸಮಸ್ಯೆಗಳಿವೆ. ಅದನ್ನು ಬಿಟ್ಟು ಸಣ್ಣ ಮಟ್ಟದ ಮಾತನಾಡುತ್ತಾ, ದಿನವಿಡೀ ಸುಳ್ಳು ಹೇಳುತ್ತಾ ಚುನಾವಣೆ ಎದುರಿಸುತ್ತಿದ್ದಾರೆ. ಅವರು ದೇಶದ, ಜನರ ಸಮಸ್ಯೆಯನ್ನು ಮುಂದಿಟ್ಟು ಚುನಾವಣೆ ಎದುರಿಸಲಿ ಎಂದು ಸವಾಲು ಹಾಕಿದರು.ಚುನಾವಣಾ ಬಾಂಡ್ ವಸೂಲಿ ಸ್ಕೀಂ:
ಖಾಸಗಿ ಸಂಸ್ಥೆ, ವ್ಯಕ್ತಿಗಳಿಂದ ರಾಜಕೀಯ ಪಕ್ಷಗಳು ಪಡೆಯುವ ನಿಧಿಯನ್ನು ಚುನಾವಣಾ ಬಾಂಡ್ ಮೂಲಕ ಪಡೆಯುವ ವ್ಯವಸ್ಥೆ ಜಾರಿಗೊಳಿಸಲಾಗಿತ್ತು. ಆದರೆ, ಸುಪ್ರೀಂಕೊರ್ಟ್ ಅದನ್ನು ಸ್ಥಗಿತಗೊಳಿಸಿತು. ಬಿಜೆಪಿ ಸರ್ಕಾರ ಜಾರಿಗೆ ತಂದ ಈ ಚುನಾವಣಾ ಬಾಂಡ್ ಚಂದಾ ಸ್ವೀಕರಿಸುವ ಯೋಜನೆಯಲ್ಲ. ಬದಲಿಗೆ ಕಪ್ಪು ಹಣವನ್ನು ಸಕ್ರಮಗೊಳಿಸುವುದಕ್ಕೆ, ಅಕ್ರಮ ಸಂಸ್ಥೆ, ವ್ಯಕ್ತಿಗಳಿಂದ ವಸೂಲಿ ಮಾಡುವ ಯೋಜನೆಯಾಗಿದೆ. ಬಿಜೆಪಿ ಮಾಡಿದ ಭ್ರಷ್ಟಾಚಾರದಲ್ಲಿ ಇದೂ ಒಂದು ಎಂದು ಪ್ರಿಯಾಂಕಾ ಗಾಂಧಿ ಕಿಡಿಕಾರಿದರು.ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ, ಕೇಂದ್ರದ ಮಾಜಿ ಸಚಿವ ರೆಹಮಾನ್ ಖಾನ್, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ರಾಮಲಿಂಗಾರೆಡ್ಡಿ, ಜಮೀರ್ ಅಹಮದ್‌ಖಾನ್, ಕೆ.ಜೆ. ಜಾರ್ಜ್, ಶಾಸಕರಾದ ಪ್ರಿಯಕೃಷ್ಣ, ಎ.ಸಿ. ಶ್ರೀನಿವಾಸ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಪ್ರಮುಖರಾದ ಉಗ್ರಪ್ಪ, ಉಮಾಪತಿ ಗೌಡ, ವಿ.ಆರ್. ಸುದರ್ಶನ್, ಯುವ ಕಾಂಗ್ರೆಸ್ ಅಧ್ಯಕ್ಷ ಮಹಮದ್ ನಲಪಾಡ್, ತಮಿಳುನಾಡು ಶಾಸಕ ಟಿ.ಆರ್. ರಾಮಚಂದ್ರ ಇತರರಿದ್ದರು.