ವಿಧಾನಸಭೆ : ಶಾಸಕರ ಲಿಖಿತ ಪ್ರಶ್ನೆಗಳಿಗೆ ಸದನದಲ್ಲಿ ಲಿಖಿತ ಉತ್ತರ ಮಂಡಿಸಲು ವಿಫಲರಾದ ಸಚಿವರು ಮತ್ತು ಅಧಿಕಾರಿಗಳ ನಡೆ ವಿರುದ್ಧ ಅಸಮಾಧಾನಗೊಂಡ ಸ್ಪೀಕರ್ ಯು.ಟಿ.ಖಾದರ್ ಅವರು ಕಲಾಪ ನಡೆಸದೆ ಪೀಠದಿಂದ ಎದ್ದು ಹೊರ ನಡೆದ ಇತ್ತೀಚಿನ ದಶಕಗಳಲ್ಲೇ ಅಪರೂಪದ ಪ್ರಸಂಗ ಸೋಮವಾರ ವಿಧಾನಸಭೆಯಲ್ಲಿ ಜರುಗಿತು.
ಪ್ರಶ್ನೋತ್ತರ ಕಲಾಪದ ಬಳಿಕ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಶಾಸಕರ 230 ಲಿಖಿತ ಪ್ರಶ್ನೆಗಳ ಪೈಕಿ 84 ಪ್ರಶ್ನೆಗಳಿಗೆ ಉತ್ತರ ಮಂಡಿಸಿದರು.
ಇದಕ್ಕೆ ಆಕ್ಷೇಪಿಸಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಶೇ.50ರಷ್ಟೂ ಉತ್ತರ ಇಲ್ಲ. ಇದು ಸೇರಿ ಐದು ಬಾರಿ ಆಯಿತು. ಇದು ಕೂಡ ದಾಖಲೆ ಆಗಲಿ. ಸರ್ಕಾರ ಸತ್ತಿದೆ, ತಿಥಿ ಮಾಡಬೇಕು ಎನ್ನುವಂತಾಗಿದೆ. ನಿನ್ನೆ, ಮೊನ್ನೆ ನೀವು ಹೇಳಿದರೂ ಒಬ್ಬರೂ ಎಚ್ಚೆತ್ತುಕೊಂಡಿಲ್ಲ. ದೇವರ ರೀತಿ ಬಂದು ಕುಳಿತು ಬಳಿಕ ಮನೆಗೆ ಹೊರಟು ಹೋಗುತ್ತಾರೆ ಎಂದು ಆರೋಪಿಸಿದರು.
ಅಧಿವೇಶನ ನಡೆಸುವುದು ಮಂತ್ರಿಗಳಿಗಾಗಿ ಅಲ್ಲ:
ಈ ವೇಳೆ ಮಂತ್ರಿಗಳು ಹಾಗೂ ಅಧಿಕಾರಿಗಳ ನಡೆಗೆ ತೀವ್ರ ಬೇಸರ ವ್ಯಕ್ತಪಡಿಸಿದ ಸ್ಪೀಕರ್ ಖಾದರ್, ನಾನು ಈ ಹಿಂದೆ ಸ್ಪಷ್ಟವಾಗಿ ಹೇಳಿದ್ದೇನೆ. ನಾವು ಅಧಿವೇಶನ ನಡೆಸುವುದು ಮಂತ್ರಿಗಳಿಗೆ ಅಲ್ಲ. ಶಾಸಕರು ಮೂರು ತಿಂಗಳಿಗೊಮ್ಮೆ ಸೇರಬೇಕು. ತಮ್ಮ ಕ್ಷೇತ್ರಗಳ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು ಎಂಬ ಕಾರಣಕ್ಕೆ ಅಧಿವೇಶನ ನಡೆಸುತ್ತೇವೆ. ಎಲ್ಲ ಪಕ್ಷಗಳ ಶಾಸಕರು ಪ್ರಶ್ನೆಗಳನ್ನು ಕೇಳುತ್ತಾರೆ. 15 ಪ್ರಶ್ನೆಗಳನ್ನು ಸ್ಟಾರ್ ಮಾಡಲಾಗುತ್ತದೆ. ನಿಯಮಾವಳಿಗಳ ಪ್ರಕಾರ ಉಳಿದ ಪ್ರಶ್ನೆಗಳಿಗೆ ಸರ್ಕಾರ ಲಿಖಿತ ಉತ್ತರ ಕೊಡಬೇಕು. ಉತ್ತರ ಕೊಡಲಿಲ್ಲ ಎಂದ ಮೇಲೆ ಶಾಸಕರು ಅಧಿವೇಶನಕ್ಕೆ ಏಕೆ ಬರಬೇಕು ಎಂದು ಖಾರವಾಗಿ ಪ್ರಶ್ನಿಸಿದರು.
ಎಲ್ಲರೂ ಮೆಚ್ಚುವ ರೀತಿ ಸದನ ನಡೆಸುವುದು ಹೇಗೆ?:
ಈ ವಿಚಾರದಲ್ಲಿ ಗಂಭೀರವಾಗಿ ಇರಬೇಕು ಎಂದು ನಾಲ್ಕು ಬಾರಿ ಹೇಳಿದ್ದೆ. ಐದನೇ ಬಾರಿಯೂ ಸುಧಾರಣೆ ಕಾಣಲಿಲ್ಲ. ಈ ರೀತಿ ಧೋರಣೆ ಇದ್ದರೆ ಎಲ್ಲಾ ಸದಸ್ಯರು ಮೆಚ್ಚುವ ರೀತಿ ಸದನ ನಡೆಸುವುದು ಹೇಗೆ? ಸಂಬಂಧಿತ ಸಚಿವರು ಹಾಗೂ ಕಾರ್ಯದರ್ಶಿಗಳು ಏಕೆ ಹೀಗಾಯಿತು? ಸಮಸ್ಯೆ ಏನು ಎಂದು ಸ್ಪಷ್ಟನೆ ನೀಡುವ ತನಕ ಸದನ ನಡೆಸುವುದಿಲ್ಲ ಎಂದು ಸ್ಪೀಕರ್ ಖಾದರ್ ಪೀಠದಿಂದ ಎದ್ದು ಹೊರ ನಡೆದರು.
ಸಿಎಂ ನೇತೃತ್ವದಲ್ಲಿ ಮನವೊಲಿಕೆ:
ಸಚಿವರು ಮತ್ತು ಅಧಿಕಾರಿಗಳ ವಿರುದ್ಧ ಸ್ಪೀಕರ್ ಖಾದರ್ ಸಿಟ್ಟಾಗಿ ಪೀಠದಿಂದ ಹೊರ ನಡೆದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಸಚಿವರಾದ ಸತೀಶ್ ಜಾರಕಿಹೊಳಿ, ಜಿ.ಪರಮೇಶ್ವರ್, ಎಚ್.ಕೆ.ಪಾಟೀಲ್ ಮೊದಲಾದವರು ಸ್ಪೀಕರ್ ಕೊಠಡಿಗೆ ತೆರಳಿ ಚರ್ಚೆ ನಡೆಸಿದರು. ಲಿಖಿತ ಉತ್ತರ ನೀಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಮುಖ್ಯಮಂತ್ರಿ ಭರವಸೆ ನೀಡಿದರು. ಸರ್ಕಾರ ಮುಖ್ಯ ಕಾರ್ಯದರ್ಶಿಯನ್ನು ಕರೆಸಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚಿಸಿದರು. ಈ ವೇಳೆ ಸರಿಯಾದ ರೀತಿ ಸದನ ನಡೆಸಲು ಸಂಪೂರ್ಣ ಸಹಕಾರ ನೀಡುವುದಾಗಿ ಸಚಿವರು ಅಭಯ ನೀಡಿದರು.
ಮನವೊಲಿಕೆ ಬಳಿಕ ಕಲಾಪ:
ಮನವೊಲಿಕೆ ಬಳಿಕ ಮತ್ತೆ ಕಲಾಪ ಆರಂಭಿಸಿದ ಸ್ಪೀಕರ್ ಖಾದರ್, ಲಿಖಿತ ಪ್ರಶ್ನೆಗಳಿಗೆ ಉತ್ತರ ನೀಡುವ ಸಂಬಂಧ ಮುಖ್ಯಮಂತ್ರಿ, ಸಚಿವರು ಮತ್ತು ವಿರೋಧ ಪಕ್ಷದ ನಾಯಕರ ಜೊತೆ ಚರ್ಚಿಸಿ ತೀರ್ಮಾನಿಸಲಾಗಿದೆ. ಭೋಜನ ವಿರಾಮದ ಬಳಿಕ ಸರ್ಕಾರ ಈ ಬಗ್ಗೆ ಉತ್ತರ ನೀಡಲಿದೆ ಎಂದು ಕಲಾಪವನ್ನು ಮುಂದೂಡಿದರು.
ಸದನದ ಇತಿಹಾಸದಲ್ಲಿ ವಿರಳ:
ಬಳಿಕ ಮತ್ತೆ ಕಲಾಪ ಆರಂಭದಲ್ಲಿ ಗೃಹ ಸಚಿವ ಪರಮೇಶ್ವರ್ ಮಾತನಾಡಿ, ಪ್ರಶ್ನೆಗಳಿಗೆ ಸರಿಯಾದ ಲಿಖಿತ ಉತ್ತರ ಬಂದಿಲ್ಲ ಎಂಬ ಕಾರಣಕ್ಕೆ ಸಭಾಧ್ಯಕ್ಷರು ಬೇಸರಿಸಿಕೊಂಡು ಸದನ ಮುಂದೂಡಿ ಹೊರಗೆ ಹೋಗಿದ್ದು ವಿರಳ. ಸದನ ಇತಿಹಾಸದಲ್ಲಿ ಎರಡು ಅಥವಾ ಮೂರನೇ ಬಾರಿ ಈ ರೀತಿ ಆಗಿರಬಹುದು ಎಂದು ಹೇಳಿದರು.
ಮುಂದೆ ಇಂಥ ಬೆಳವಣಿಗೆಗೆ ಅವಕಾಶ ಕೊಡಲ್ಲ:
ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರು ಎಲ್ಲ ಸೇರಿ ಚರ್ಚಿ ಮಾಡಿದ್ದೇವೆ. ಸರ್ಕಾರ ಮುಖ್ಯ ಕಾರ್ಯದರ್ಶಿ ಅವರನ್ನು ತಮ್ಮ ಕಚೇರಿಗೆ ಕರೆಸಿ ಇಲಾಖೆಗಳ ಕಾರ್ಯದರ್ಶಿಗಳಿಗೆ ನೋಟಿಸ್ ನೀಡಲು ಹೇಳಿದ್ದಾರೆ. ಹೆಚ್ಚು ಪ್ರಶ್ನೆಗಳಿಗೆ ಉತ್ತರ ಬಾಕಿ ಉಳಿಸಿಕೊಂಡಿದ್ದರೆ ಆ ಅಧಿಕಾರಿಗಳ ಅಮಾನತಿಗೂ ಸೂಚಿಸಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಸ್ವೀಕರಿಸಿದೆ. ನಾನು ಸರ್ಕಾರದ ಪರವಾಗಿ ಭರವಸೆ ನೀಡುವೆ. ಮುಂದೆ ಇಂತಹ ಬೆಳವಣಿಗೆಗಳು ಆಗದಂತೆ ಉತ್ತರ ಕೊಡುವುದಾಗಿ ಹೇಳಲು ಬಯಸುತ್ತೇನೆ ಎಂದು ತಿಳಿಸಿದರು.
ಸ್ಪೀಕರ್ ಪೀಠದಿಂದ ಎದ್ದು ಹೋಗಿರುವುದು ಸರ್ಕಾರಕ್ಕೆ ಕಪ್ಪು ಚುಕ್ಕೆ, ಅವಮಾನ, ಚಾಟಿ ಏಟು. ಕೋಟ್ಯಂತರ ರು. ಖರ್ಚು ಮಾಡಿ ಈ ರೀತಿ ಅಧಿವೇಶನ ನಡೆಸುವುದರ ಅಗತ್ಯವೇನು? ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದ ಕ್ಷಮೆ ಕೇಳಬೇಕು. ಸದನಕ್ಕೆ ಗೈರು ಹಾಜರಾಗಿರುವ ಮಂತ್ರಿಗಳು ರಾಜೀನಾಮೆ ನೀಡಬೇಕು.
- ಆರ್.ಅಶೋಕ್, ವಿರೋಧ ಪಕ್ಷದ ನಾಯಕ
