ಮಂಗಳವಾರ ಉಡುಪಿ ರಾಜಾಂಗಣದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ ಸಾಧಕರಿಗೆ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಶ್ರೀ ಕೃಷ್ಣಗೀತಾನುಗ್ರಹ ಪ್ರಶಸ್ತಿ ಪ್ರದಾನ ಮಾಡಿದರು.
ಉಡುಪಿ: ಮನುಷ್ಯನಾಗಿ ಈ ಭೂಮಿಗೆ ಬಂದ ಮೇಲೆ ಮನುಷ್ಯ ಜನಾಂಗಕ್ಕೆ ಒಳಿತಾಗುವುದನ್ನು ಮಾಡಬೇಕು, ಇದು ಕರ್ತವ್ಯ ಎಂಬುದು ಗೀತೆಯ ಬಹಳ ದೊಡ್ಡ ಸಂದೇಶ. ಕೇವಲ ಜೀವನೋಪಾಯಕ್ಕಾಗಿ ಮನೆ, ಆಹಾರ, ಹಣ ಸಂಪಾದನೆ ಮಾಡುವುದು ಸಾಧನೆಯಲ್ಲ, ಅದನ್ನೇ ಸಾಧನೆ ಎಂದರೆ ಅದು ಪಲಾಯನವಾದ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.
ಅವರು ಮಂಗಳವಾರ ರಾಜಾಂಗಣದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ ಸಾಧಕರಿಗೆ ಶ್ರೀ ಕೃಷ್ಣಗೀತಾನುಗ್ರಹ ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವಚನ ನೀಡಿದರು. ಇತರರ ಒಳಿತಿಗಾಗಿ ಕೆಲಸ ಮಾಡುವುದು ಪರಾಕ್ರಮವಾದ, ಅಂತಹ ಸಾಧಕರನ್ನು ಗೌರವಿಸಿದರೆ ಇದು ಸಮಾಜದ ಇತರರಿಗೂ ಪ್ರೇರಣೆಯಾಗುತ್ತದೆ, ಈ ಹಿನ್ನೆಲೆಯಲ್ಲಿ ಸಮಾಜದಲ್ಲಿ ನಿಸ್ವಾರ್ಥ ಸೇವೆ ಮಾಡುತ್ತಿರುವವರನ್ನು ಗೌರವಿಸಲಾಗುತ್ತಿದೆ ಎಂದವರು ಹೇಳಿದರು.ನಂತರ ಶ್ರೀಗಳು ವಿಧಾನ ಸಭಾ ಸ್ವೀಕರ್ ಯು. ಟಿ. ಖಾದರ್, ವಿವಿಧ ಕ್ಷೇತ್ರಗಳ ಸಾಧಕರಾದ ನಾರಾಯಣ ಬೆಳ್ಳಿರಾಯ, ನಿತ್ಯಾನಂದ ಒಳಕಾಡು, ಭಾರತಿ ಅಜೇಯ ಪಾಠಂಕರ್, ಸೇತು ಮಾಧವನ್, ಪದ್ಮನಾಭ ಆಚಾರ್ಯ, ಸೀತಾರಾಮ ತೋಳ್ಪಡಿತ್ತಾಯ, ಮಂಜುನಾಥ ಹೆಬ್ಬಾರ್, ನಾರಾಯಣ ಗೋವಿಂದ ಹೆಗಡೆ ಅವರಿಗೆ ಕೃಷ್ಣಗೀತಾನುಗ್ರಹ ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು.
ಇದೇ ಸಂದರ್ಭದಲ್ಲಿ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಕೃಷ್ಣಮಠದಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಬಯೋ ಪ್ಲಾಂಟನ್ನು ಯು.ಟಿ. ಖಾದರ್ ಉದ್ಘಾಟಿಸಿದರು. ಪುತ್ತಿಗೆ ಕಿರಿಯಪಟ್ಟ ಶ್ರೀ ಸುಶ್ರಂದ್ರ ತೀರ್ಥ ಶ್ರೀಪಾದರು ಸಾನಿಧ್ಯವಹಿಸಿದ್ದರು, ಶ್ರಿಮಠದ ದಿವಾನರಾದ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಹೆಬ್ಬಾರ್ ಉಪಸ್ಥಿತರಿದ್ದರು.