ಬಿಜೆಪಿ ಹಿನ್ನಡೆಗೆ ಬಣ ರಾಜಕೀಯ ಕಾರಣ? - ವಿಜಯೇಂದ್ರ ನಾಯಕತ್ವಕ್ಕೆ ಸಡ್ಡು ಹೊಡೆದ ಯತ್ನಾಳ್‌ ಬಣ

ಸಾರಾಂಶ

ಮೂರು ವಿಧಾನಸಭಾ ಕ್ಷೇತ್ರಗಳ ಪೈಕಿ ಎರಡರಲ್ಲಿ ಸ್ಪರ್ಧಿಸಿದ್ದ ಪ್ರಮುಖ ಪ್ರತಿಪಕ್ಷ ಬಿಜೆಪಿಯ ಹೀನಾಯ ಸೋಲಿಗೆ ಪಕ್ಷದಲ್ಲಿನ ಬಣ ರಾಜಕೀಯ ಕಾರಣವಾಯಿತೇ ಎಂಬ ಚರ್ಚೆ ಆರಂಭವಾಗಿದೆ.

ಬೆಂಗಳೂರು : ಮೂರು ವಿಧಾನಸಭಾ ಕ್ಷೇತ್ರಗಳ ಪೈಕಿ ಎರಡರಲ್ಲಿ ಸ್ಪರ್ಧಿಸಿದ್ದ ಪ್ರಮುಖ ಪ್ರತಿಪಕ್ಷ ಬಿಜೆಪಿಯ ಹೀನಾಯ ಸೋಲಿಗೆ ಪಕ್ಷದಲ್ಲಿನ ಬಣ ರಾಜಕೀಯ ಕಾರಣವಾಯಿತೇ ಎಂಬ ಚರ್ಚೆ ಆರಂಭವಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನಾಯಕತ್ವವನ್ನು ವಿರೋಧಿಸುತ್ತಿರುವ ಹಿರಿಯ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಪಕ್ಷದಲ್ಲಿ ಬಣ ರಾಜಕೀಯಕ್ಕೆ ಇಂಬು ಕೊಟ್ಟಿದೆ ಎನ್ನಲಾಗುತ್ತಿದೆ.

ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ದಿನದಿಂದಲೂ ದಿನೇ ದಿನೇ ಹೆಚ್ಚಾದ ಚಟುವಟಿಕೆಗಳು ಇದೀಗ ಉಪಚುನಾವಣೆಯಲ್ಲೂ ಪರಿಣಾಮ ಬೀರಿದ್ದು, ಪಕ್ಷದ ಸೋಲಿಗೆ ಕಾರಣವಾಯಿತು ಎಂಬ ಮಾತು ಈಗ ಬಲವಾಗಿ ಕೇಳಿಬರುತ್ತಿದೆ.

ಈ ಬಣ ರಾಜಕೀಯದ ಬಗ್ಗೆ ಪಕ್ಷದ ರಾಷ್ಟ್ರೀಯ ನಾಯಕರಿಗೆ ಮಾಹಿತಿ ಸಿಕ್ಕರೂ ಯಾವುದೇ ಕಠಿಣ ಕ್ರಮ ಕೈಗೊಳ್ಳದೆ ಇಂದೋ ನಾಳೆಯೋ ಸರಿಯಾಗಬಹುದು ಎಂಬ ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದರಿಂದ ಈಗ ಅದಕ್ಕೆ ಬೆಲೆ ತೆರಬೇಕಾಯಿತು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಮುಡಾ ಹಗರಣ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಕುರಿತಂತೆ ಪಕ್ಷದಲ್ಲಿ ಭಿನ್ನ ಸ್ವರ ಕೇಳಿಬಂದಿತ್ತು. ಮುಡಾ ಹಗರಣ ಸಂಬಂಧ ಬೆಂಗಳೂರಿನಿಂದ ಮೈಸೂರುವರೆಗೆ ನಡೆಸಿದ ಪಾದಯಾತ್ರೆಯಲ್ಲಿ ವಿಜಯೇಂದ್ರ ಅವರು ಪಕ್ಷದ ರಾಜ್ಯಾಧ್ಯಕ್ಷರಾಗಿ ಎಲ್ಲರನ್ನೂ ಒಳಗೊಳ್ಳಲಿಲ್ಲ ಎಂಬ ಆರೋಪ ಅತೃಪ್ತ ನಾಯಕರಿಂದ ಕೇಳಿಬಂದಿತ್ತು. ಅದಕ್ಕೆ ಪ್ರತಿಯಾಗಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಮುಂದಿಟ್ಟುಕೊಂಡು ಉತ್ತರ ಕರ್ನಾಟಕದಲ್ಲಿ ಪಾದಯಾತ್ರೆ ನಡೆಸಬೇಕು ಎಂದು ಯತ್ನಾಳ ಬಣ ಬಹಿರಂಗವಾಗಿಯೇ ಒತ್ತಾಯಿಸಿ ಪ್ರಯತ್ನವನ್ನೂ ನಡೆಸಿ ವಿಫಲವಾಯಿತು.

ಇತ್ತೀಚೆಗೆ ವಕ್ಫ್ ಆಸ್ತಿ ವಿಚಾರವಾಗಿ ಪ್ರತಿಭಟನೆ ನಡೆಸುವಲ್ಲಿಯೂ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಕೈಬಿಟ್ಟು ಯತ್ನಾಳ ಮತ್ತಿತರ ನಾಯಕರು ತಮ್ಮದೇ ಹಾದಿ ತುಳಿದರು. ಯಾವುದೇ ರೀತಿಯ ಒಗ್ಗಟ್ಟು ಪ್ರದರ್ಶಿಸಲಿಲ್ಲ. ಒಬ್ಬೊಬ್ಬ ನಾಯಕರು ತಮ್ಮದೇ ದಾರಿಯಲ್ಲಿ ಸಾಗಿದರು. ಇದೆಲ್ಲವೂ ಮುಂದುವರೆದು ಉಪಚುನಾವಣೆಯಲ್ಲಿ ಜನರಿಗೆ ಬಿಜೆಪಿ ಬಗ್ಗೆ ಒಲವು ವ್ಯಕ್ತವಾಗದಿರುವುದಕ್ಕೆ ಕಾರಣವಾಯಿತು ಎನ್ನಲಾಗುತ್ತಿದೆ.

ಜತೆಗೆ ಉಪಚುನಾವಣೆಯ ಸ್ಟಾರ್ ಪ್ರಚಾರಕರ ಪಟ್ಟಿ ಸಿದ್ಧಪಡಿಸುವಲ್ಲಿಯೂ ಬಣ ರಾಜಕೀಯದ ವಾಸನೆ ಬಂತು. ಹಲವು ನಾಯಕರನ್ನು ಕೈಬಿಟ್ಟು ಪ್ರಚಾರಕರ ಪಟ್ಟಿ ಸಿದ್ಧಪಡಿಸಿದ್ದರಿಂದ ಹಲವರು ಮುನಿಸಿಕೊಂಡರು.

ಸಂಡೂರಿನಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಪ್ರವೇಶವಾದ ಬಳಿಕ ಮಾಜಿ ಸಚಿವ ಬಿ.ಶ್ರೀರಾಮುಲು ಬಣ ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಗೆಲುವಿನ ಕ್ರೆಡಿಟ್ ವಾರ್ ಆರಂಭವಾಯಿತು. ಇದು ಸೋಲಿಗೆ ನಾಂದಿಯಾಯಿತು ಎಂದು ಮೂಲಗಳು ತಿಳಿಸಿವೆ.

ಶಿಗ್ಗಾಂವಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಅವರೇ ತಮ್ಮ ಪುತ್ರನ ಪರವಾಗಿ ಉಸ್ತುವಾರಿ ವಹಿಸಿಕೊಂಡಿದ್ದರಿಂದ ಪಕ್ಷ ಇತರ ನಾಯಕರು ಪ್ರಚಾರದಲ್ಲಿ ಹೆಚ್ಚು ಪಾಲ್ಗೊಳ್ಳಲಿಲ್ಲ ಎನ್ನಲಾಗಿದೆ.

Share this article