;Resize=(412,232))
ಬೆಂಗಳೂರು : ದೀರ್ಘಾವಧಿ ಸಿಎಂ ಆಗಿ ಸಿದ್ದರಾಮಯ್ಯ ದಾಖಲೆ ಮಾಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದೆಲ್ಲೆಡೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. -ಹಲವೆಡೆ ಜನತೆಗೆ ಭರ್ಜರಿ ನಾಟಿಕೋಳಿ ಬಾಡೂಟ ವಿತರಣೆ ಆದರೆ, ಕಲಬುರಗಿ, ಬೆಳಗಾವಿಯಲ್ಲಿ ಸಿದ್ದರಾಮಯ್ಯ ಫೋಟೋಗೆ ಕ್ಷೀರಾಭಿಷೇಕ ಮಾಡಲಾಯಿತು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಭಕ್ತನಪಾಳ್ಯದಲ್ಲಿ ಅಹಿಂದ ಒಕ್ಕೂಟದಿಂದ ನಾಟಿಕೋಳಿ ಬಾಡೂಟ ಏರ್ಪಡಿಸಲಾಗಿತ್ತು. ಊಟಕ್ಕೆ 1500 ಕೆಜಿ ನಾಟಿ ಕೋಳಿಯ ಮಾಂಸವನ್ನು ಬಳಸಲಾಗಿತ್ತು. ಸುಮಾರು 6000 ಜನರಿಗೆ ಬಾಡೂಟದ ವ್ಯವಸ್ಥೆ ಮಾಡಲಾಗಿತ್ತು. ಊಟಕ್ಕೆ ನಾಟಿ ಕೋಳಿ ಸಾರು, ಮುದ್ದೆ , ಅನ್ನ, ರಸಂ, ಪಾಯಸ ಮಾಡಲಾಗಿತ್ತು.
ಬೀದರ್‌ನಲ್ಲಿ ಅಭಿಮಾನಿಗಳು ಸಿದ್ದರಾಮಯ್ಯ ಅವರ 6 ಅಡಿ ಕಟೌಟ್ ಹಿಡಿದು ಮೆರವಣಿಗೆ ನಡೆಸಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ, ಜೈಕಾರ ಕೂಗಿ ಸಂಭ್ರಮ ಪಟ್ಟರು. ಅಹಿಂದ ನಾಯಕ ಸಿಎಂ ಸಿದ್ದು ಎಂಬ ಘೋಷಣೆ ಎಲ್ಲೆಡೆ ಮೊಳಗಿತು.
ಸಿದ್ದು ತವರು ಮೈಸೂರಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಅಹಿಂದ ಸಂಘಟನೆಗಳಿಂದ ಸಾರ್ವಜನಿಕರಿಗೆ ನಾಟಿ ಕೋಳಿ ಬಾಡೂಟ ವ್ಯವಸ್ಥೆ ಮಾಡಲಾಗಿತ್ತು. ಮೈಸೂರಿನ ಟಿ.ಕೆ.ಬಡಾವಣೆಯಲ್ಲಿರುವ ಸಿದ್ದರಾಮಯ್ಯ ನಿವಾಸದ ಮುಂಭಾಗ ಅಭಿಮಾನಿಗಳು ಸಿದ್ದರಾಮಯ್ಯನವರ ಭಾವಚಿತ್ರ, ಬಾವುಟ ಹಿಡಿದು ಅವರ ಪರ ಜಯಘೋಷ ಮೊಳಗಿಸಿದರು. ಸಿಹಿ ಹಂಚಿ ಸಂತಸಪಟ್ಟರು.
ಕಲಬುರಗಿಯಲ್ಲಿ ಸಿಎಂ ಸಿದ್ದರಾಮಯ್ಯ ಅಭಿಮಾನಿ ಬಳಗದಿಂದ ನಗರದ ಎಸ್‌ವಿಪಿ ವೃತ್ತದಲ್ಲಿ ಸಿದ್ದರಾಮಯ್ಯ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ, ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳು ಹಾಗೂ ಸಿದ್ದರಾಮಯ್ಯ ಅಭಿಮಾನಿಗಳು ನಗರದ ಅಭಿಷೇಕ್ ವೃತ್ತದಲ್ಲಿ ಚಿಕನ್ ಬಿರಿಯಾನಿ, ಸಿಹಿ ವಿತರಿಸಿ ಸಂಭ್ರಮಿಸಿದರು.
ಯಾದಗಿರಿಯಲ್ಲಿ ಕಲ್ಯಾಣ ಕರ್ನಾಟಕ ಸಿದ್ದರಾಮಯ್ಯ ಯುವ ಬ್ರಿಗೇಡ್ ನ ಕಾರ್ಯಕರ್ತರು, ನಗರದ ಸುಭಾಷ್ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು. ಸಿಎಂ ಬಣದ ಆಪ್ತ ಸಚಿವರು, ಶಾಸಕರ ಪೋಟೋ ಹಿಡಿದು ಸಂಭ್ರಮ ಪಟ್ಟರು. ಸಿಎಂ ಸಿದ್ದರಾಮಯ್ಯ ಪರ ಘೋಷಣೆ ಕೂಗಿ ಸಂಭ್ರಮಿಸಿದರು.
ಶಿವಮೊಗ್ಗದಲ್ಲಿ ಅಭಿಮಾನಿಗಳಿಂದ ಖಾಸಗಿ ಬಸ್ ನಿಲ್ದಾಣದ ಬಳಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಜನರಿಗೆ ‘ಬಿರಿಯಾನಿ ಮತ್ತು ಲಡ್ಡು’ ವಿತರಣೆ ನಡೆಸಲಾಯಿತು. ಭಾಗ್ಯಗಳ ವಿಧಾತ ಗ್ಯಾರಂಟಿ ರಾಮಯ್ಯ ಸರ್ವ ಜನಾಂಗದ ನಾಯಕ ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಘೋಷಣೆ ಕೂಗಿದರು. ಸಿದ್ದರಾಮಯ್ಯನವರ ಬೃಹತ್ ಕಟೌಟ್ ಗೆ ಪುಷ್ಪಾರ್ಚನೆ ಮಾಡಲಾಯಿತು.
ಬೆಳಗಾವಿಯಲ್ಲಿ ಸಿದ್ದರಾಮಯ್ಯ ಬ್ಯಾನರ್ ಗೆ ಕ್ಷೀರಾಭಿಷೇಕ ಮಾಡಿದ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರು, ಸಿಹಿ ಹಂಚಿ ಸಂಭ್ರಮಿಸಿದರು.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಮಾರಸಿಂಗನಹಳ್ಳಿ ಹಾಗೂ ಕೊರೆಮೇಗೌಡನಕೊಪ್ಪಲು ಗ್ರಾಮಸ್ಥರು ಪಟಾಕಿ ಸಿಡಿಸಿ, ಸಿದ್ದರಾಮಯ್ಯ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದರು. ಹಾಲು ವಿತರಿಸಿ, ಅನ್ನಸಂತರ್ಪಣೆ ಮಾಡಿದರು.