ಸಿಎಂ ಆರೋಪ ಮುಕ್ತವಾಗಲು ಬರಿಗಾಲಿನಲ್ಲಿ ಮೆಟ್ಟಿಲು ಹತ್ತಿದ ಅಭಿಮಾನಿಗಳು

KannadaprabhaNewsNetwork |  
Published : Nov 06, 2024, 12:53 AM ISTUpdated : Nov 06, 2024, 12:54 AM IST
4 | Kannada Prabha

ಸಾರಾಂಶ

ಚಾಮುಂಡಿಬೆಟ್ಟದ ಪಾದದ ಬಳಿ ಮುಖ್ಯಮಂತ್ರಿ ಅವರಿಗೆ ಒಳಿತು ಮಾಡುವಂತೆ ಪ್ರಾರ್ಥಿಸಿದರು. ಬೆಟ್ಟದಲ್ಲಿ ದೇವಾಲಯದ ಮುಂಭಾಗ ನೂರೊಂದು ತೆಂಗಿನ ಕಾಯಿ ಹೊಡೆದ ಸಿಎಂ ಸಂಕಷ್ಟ ದೂರ ಮಾಡಿ‌, ಶಿಷ್ಟರನ್ನು ರಕ್ಷಿಸಿ, ದುಷ್ಟರನ್ನು ಶಿಕ್ಷಿಸುವಂತೆ ಪ್ರಾರ್ಥಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಪ ಮುಕ್ತರಾಗಲು ಪ್ರಾರ್ಥಿಸಿ ಅವರ ಅಭಿಮಾನಿಗಳು ಮಂಗಳವಾರ ಬರಿಗಾಲಿನಲ್ಲಿ ಮೈಸೂರಿನ ಚಾಮುಂಡಿಬೆಟ್ಟದ ಮೆಟ್ಟಿಲುಗಳನ್ನು ಹತ್ತಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ನೋಟಿಸ್ ನೀಡಿರುವ ಹಿನ್ನೆಲೆ ನಗರ ಪಾಲಿಕೆ ಮಾಜಿ ಸದಸ್ಯ ಲೋಕೇಶ್ ಪಿಯಾ ನೇತೃತ್ವದಲ್ಲಿ ಸಿದ್ದರಾಮಯ್ಯ ಅವರ ಸಂಕಷ್ಟ ದೂರವಾಗಿ, ಆರೋಪ ಮುಕ್ತವಾಗಿ ಹೊರ ಬರಲಿ ಎಂದು 101 ಈಡುಗಾಯಿ ಹೊಡೆದು ಹರಕೆ ಕಟ್ಟಿಕೊಂಡರು. ಮುಡಾ ಹಗರಣ ವಿಚಾರಣೆ ದಿನಕ್ಕೊಂದು ತಿರುವು ಪಡೆಯುತ್ತಿರುವ ಹಿನ್ನೆಲೆಯಲ್ಲಿ ಲೋಕೇಶ್ ಪಿಯಾ ನೇತೃತ್ವದಲ್ಲಿ ಬರಿಗಾಲಲ್ಲಿ ಚಾಮುಂಡಿಬೆಟ್ಟದ ಮೆಟ್ಟಿಲು ಹತ್ತಿದರು.

ಇದಕ್ಕೂ ಮುನ್ನ ಚಾಮುಂಡಿಬೆಟ್ಟದ ಪಾದದ ಬಳಿ ಮುಖ್ಯಮಂತ್ರಿ ಅವರಿಗೆ ಒಳಿತು ಮಾಡುವಂತೆ ಪ್ರಾರ್ಥಿಸಿದರು. ಬೆಟ್ಟದಲ್ಲಿ ದೇವಾಲಯದ ಮುಂಭಾಗ ನೂರೊಂದು ತೆಂಗಿನ ಕಾಯಿ ಹೊಡೆದ ಸಿಎಂ ಸಂಕಷ್ಟ ದೂರ ಮಾಡಿ‌, ಶಿಷ್ಟರನ್ನು ರಕ್ಷಿಸಿ, ದುಷ್ಟರನ್ನು ಶಿಕ್ಷಿಸುವಂತೆ ಪ್ರಾರ್ಥಿಸಿದರು.

ಸಿಎಂ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ. ವಿರೋಧಿಗಳು ಕುತಂತ್ರದ ಮೂಲಕ ಅವರನ್ನು ಮುಗಿಸುವ ಪ್ರಯತ್ನ ಫಲ ಕೊಡುವುದಿಲ್ಲ. ವಿರೋಧಿಗಳ ಫಲ ನಾಶವಾಗಿ ಸತ್ಯಕ್ಕೆ ಜಯ ಸಿಗಲಿ ಎಂದು ಪ್ರಾರ್ಥಿಸುತ್ತಿರುವುದಾಗಿ ಲೋಕೇಶ್ ಪಿಯಾ ಹೇಳಿದರು.

ಮುಡಾ ಮುಕ್ತಿಗಾಗಿ ಅಭಿಮಾನಿಗಳ ಪೂಜೆ

ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ಬುಧವಾರ ಸಿಎಂ ವಿಚಾರಣೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರಿಗೆ ಮುಡಾ ಕೇಸ್ ನಿಂದ ಮುಕ್ತಿ ಸಿಗಲಿ, ಸಿದ್ದರಾಮಯ್ಯಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ ಅಭಿಮಾನಿಗಳು ಮೈಸೂರಿನ ಅಗ್ರಹಾರದ ನೂರೊಂದು ಗಣಪತಿ ದೇವಸ್ಥಾನದಲ್ಲಿ ಮಂಗಳವಾರ ಪೂಜೆ ಸಲ್ಲಿಸಿದರು.

ಈ ವೇಳೆ ಸಿಎಂ ಸಿದ್ದರಾಮಯ್ಯಗೆ ಜೈಕಾರ ಹಾಕಿದ ಅಭಿಮಾನಿಗಳು, ಇದೆಲ್ಲ ಬಿಜೆಪಿಯವರ ಕುತಂತ್ರ ಅಷ್ಟೇ, ಸಿದ್ದರಾಮಯ್ಯ ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಹಿಂದೆಯೂ ಮಾಡಿಲ್ಲ, ಮುಂದೆಯೂ ಭ್ರಷ್ಟಾಚಾರ ಮಾಡಲ್ಲ ಎಂದು ಅಭಿಮಾನಿಗಳು ಘೋಷಣೆ ಕೂಗಿದರು. ಸಿದ್ದು ವಿರುದ್ಧ ಷಡ್ಯಂತ್ರ ವಿರೋಧಿಸಿ ನಾಳೆ ದೆಹಲಿಯಲ್ಲಿ ಪ್ರತಿಭಟನಾ ಸಭೆ

ಕನ್ನಡಪ್ರಭ ವಾರ್ತೆ ಮೈಸೂರು

ಒಕ್ಕೂಟ ವ್ಯವಸ್ಥೆಗೆ ಕೇಂದ್ರ ಬಿಜೆಪಿ ಸರ್ಕಾರ ಧಕ್ಕೆ ತರುತ್ತಿದೆ. ಇದೇ ವೇಳೆ ಜಿಎಸ್ಟಿಗೆ ಸಂಬಂಧಿಸಿದಂತೆ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ. ಇದಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಹುನ್ನಾರ ಮಾಡುತ್ತ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಇದನ್ನು ಖಂಡಿಸಿ ನ.7 ರಂದು ದೆಹಲಿಯಲ್ಲಿ ಪ್ರತಿಭಟನಾ ಸಭೆ ಆಯೋಜಿಸಲಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಎಸ್. ಶಿವರಾಮು ತಿಳಿಸಿದರು.

ದೆಹಲಿಯ ಮೋತಿ ಬಾಗ್‌ ನಲ್ಲಿನ ದೆಹಲಿ ಕರ್ನಾಟಕ ಸಂಘದಲ್ಲಿ ಈ ಪ್ರತಿಭಟನಾ ಸಭೆ ನಡೆಯಲಿದೆ. ರಾಜ್ಯಸಭಾ ಮಾಜಿ ಸದಸ್ಯ ಎಲ್. ಹನುಮಂತಯ್ಯ, ಜಾಣಗೆರೆ ವೆಂಕಟರಾಮಯ್ಯ, ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್, ಡಾ.ಬಿ.ಜೆ. ವಿಜಯಕುಮಾರ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮೈಸೂರು, ಬೆಂಗಳೂರು, ಚಿಕ್ಕಮಗಳೂರು ಮೊದಲಾದ ಕಡೆಗಳಿಂದ ಸುಮಾರು 200 ಮಂದಿ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಸಭೆಯ ಬಳಿಕ ರಾಷ್ಟ್ರಪತಿಗಳಿಗೆ ಮಧ್ಯಪ್ರವೇಶಿಸುವಂತೆ ಕೋರಿ ಮನವಿ ಪತ್ರ ಸಲ್ಲಿಸಲಾಗುವುದು ಎಂದರು.

ಮುಖಂಡರಾದ ರವಿನಂದನ್, ಲೋಕೇಶ್, ಯೋಗೇಶ್, ಮೊಗಣ್ಣಾಚಾರ್ ಇದ್ದರು.

ಲೋಕಾಯುಕ್ತ ಕಚೇರಿ ಸುತ್ತಮುತ್ತ ಬಿಗಿ ಭದ್ರತೆ

ಕನ್ನಡಪ್ರಭ ವಾರ್ತೆ ಮೈಸೂರು

ಮುಡಾ ಹಗರಣ ಸಂಬಂಧ ಲೋಕಾಯುಕ್ತ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ವಿಚಾರಣೆಗೆ ಹಾಜರಾಗುವ ಹಿನ್ನಲೆಯಲ್ಲಿ ಲೋಕಾಯುಕ್ತ ಕಚೇರಿ ಸುತ್ತಮುತ್ತ ನಗರ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

ನಗರದ ಕೃಷ್ಣ ವಿಲಾಸ ರಸ್ತೆ ಮತ್ತು ದಿವಾನ್ಸ್ ರಸ್ತೆ ಜಂಕ್ಷನ್‌ ನಲ್ಲಿ ಇರುವ ಲೋಕಾಯುಕ್ತ ಕಚೇರಿಯನ್ನು ಸಂಪರ್ಕಿಸುವ ರಸ್ತೆಗಳನ್ನು ಬಂದ್ ಮಾಡುವ ಮೂಲಕ ಪೊಲೀಸರು ಮುನ್ನೆಚ್ಚರಿಕೆ ವಹಿಸಲಿದ್ದಾರೆ.

ಮುಖ್ಯಮಂತ್ರಿ ವಿಚಾರಣೆಗೆ ಹಾಜರಾಗಲಿರುವ ಹಿನ್ನಲೆಯಲ್ಲಿ ದೇವರಾಜ ಪೊಲೀಸ್ ಠಾಣೆಯಲ್ಲಿ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರು, ಮಂಗಳವಾರ ಅಧಿಕಾರಿಗಳ ಸಭೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ. ಲೋಕಾಯುಕ್ತ ಕಚೇರಿಯನ್ನು ಸಂಪರ್ಕಿಸುವ ರಸ್ತೆಗಳನ್ನು ಸಿಎಂ ಆಗಮನಕ್ಕೂ ಮುನ್ನ ಬಂದ್ ಮಾಡಿ, ಸಿಎಂ ವಿಚಾರಣೆ ಮುಗಿಸಿಕೊಂಡು ತೆರಳಿದ ಬಳಿಕ ವಾಹನ ಸಂಚಾರಕ್ಕೆ ಮುಕ್ತಗೊಳಿಸಲು ಸೂಚಿಸಿದ್ದಾರೆ.

ಬ್ಯಾರಿಕೇಡ್ ಅಳವಡಿಕೆ

ವಾಹನ ಸಂಚಾರ ನಿರ್ಬಂಧ ಹೇರಲು ದೇವರಾಜ ಪೊಲೀಸ್ ಠಾಣೆ ಆವರಣದಲ್ಲಿ ಹೆಚ್ಚುವರಿ ಬ್ಯಾರಿಕೇಡ್‌ ಗಳನ್ನು ಸಂಗ್ರಹಿಸಲಾಗಿದ್ದು, ಬುಧವಾರ ಮುಂಜಾನೆ ಬ್ಯಾರಿಕೇಡ್‌ ಗಳನ್ನು ಅಳವಡಿಸಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸುವ ಮೂಲಕ ಪರ್ಯಾಯ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ