;Resize=(412,232))
ಬೆಂಗಳೂರು : ಡ್ರಗ್ಸ್ ಜಾಲ ಕುರಿತು ಗಮನ ಸೆಳೆಯುವ ಉದ್ದೇಶದಿಂದ ಮುಖ್ಯಮಂತ್ರಿಗಳ ತವರು ಜಿಲ್ಲೆ ಮೈಸೂರಿನಲ್ಲಿ ಹೋರಾಟ ರೂಪಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಮಂಗಳವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಸರ್ಕಾರ ವಿರುದ್ಧ ರಾಜ್ಯದ ವಿವಿಧ ಭಾಗಗಳಲ್ಲಿ ವಿವಿಧ ಹಂತದಲ್ಲಿ ಜನಾಂದೋಲನ, ಹೋರಾಟ ರೂಪಿಸಲು ಕಳೆದ ವಾರ ನಡೆದ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ಹೇಳಿದರು.
ಡ್ರಗ್ಸ್ ಹಾವಳಿ ವಿಪರೀತವಾಗಿದೆ. ಕಳೆದ ಎರಡೂವರೆ ವರ್ಷದಿಂದ ರಾಜ್ಯದಲ್ಲಿ ಡ್ರಗ್ಸ್ ಹೇರಳ ಪ್ರಮಾಣದಲ್ಲಿ ಜಪ್ತಿಯಾಗುತ್ತಿರುವುದು ಕಳವಕಳಕಾರಿ ಸಂಗತಿ. ಮೈಸೂರು ಮುಖ್ಯಮಂತ್ರಿಗಳ ತವರು ಜಿಲ್ಲೆ. ಅಲ್ಲಿದ್ದ ಮಾದಕವಸ್ತು ಕಾರ್ಖಾನೆಯನ್ನು ಮಹಾರಾಷ್ಟ್ರದ ಪೊಲೀಸರು ಬಂದು ಮುಚ್ಚಿಸಬೇಕಾಯಿತು. ಮೈಸೂರು ಒಳಗೊಂಡಂತೆ ರಾಜ್ಯಾದ್ಯಂತ ಡ್ರಗ್ ಮಾಫಿಯಾ ಹರಡಿದೆ. ಇದನ್ನು ಪರಿಗಣಿಸಿ ಮೈಸೂರಿನಲ್ಲಿ ಹೋರಾಟ ಮಾಡಲು ತೀರ್ಮಾನಿಸಲಾಗಿದೆ. ದಿನಾಂಕ ಮುಂದೆ ನಿರ್ಧರಿಸಲಾಗುವುದು ಎಂದು ಮಾಹಿತಿ ನೀಡಿದರು.
ರೈತರಿಗೆ ಕಾಂಗ್ರೆಸ್ ಸರ್ಕಾರ ದೋಖಾ ಮಾಡುತ್ತಿರುವುದನ್ನು ಖಂಡಿಸಿ ಬಾಗಲಕೋಟೆಯಲ್ಲಿ ಹೋರಾಟ ನಡೆಸಲಿದ್ದೇವೆ. ಮುಂದಿನ ದಿನದಲ್ಲಿ ದಿನಾಂಕ ನಿಗದಿ ಮಾಡುತ್ತೇವೆ. ಇದೇ ತಿಂಗಳ 5ರಿಂದ ಬೆಂಗಳೂರಿನಲ್ಲಿ ನಮ್ಮೆಲ್ಲ ವಿವಿಧ ಜಿಲ್ಲೆಗಳ ಸಭೆಗಳನ್ನು ಮಾಡುತ್ತಿದ್ದೇವೆ. ರಾಜ್ಯದ 39 ಸಂಘಟನಾತ್ಮಕ ಜಿಲ್ಲೆಗಳ ಸರಣಿ ಸಭೆ ನಡೆಸಲಾಗಿದೆ ಎಂದರು.
ರಾಜಕೀಯ ಗಲಭೆ ಹಿನ್ನೆಲೆಯಲ್ಲಿ ಇದೇ ತಿಂಗಳ 17ರಂದು ಬಳ್ಳಾರಿ ನಗರದಲ್ಲಿ ಬೃಹತ್ ಸಮಾವೇಶ ನಡೆಸಲು ಹಸಿರು ನಿಶಾನೆ ತೋರಿರುವ ರಾಜ್ಯ ಬಿಜೆಪಿಯು, ಬಳ್ಳಾರಿಯಿಂದ ಬೆಂಗಳೂರು ವರೆಗೆ ನಡೆಸಲು ಉದ್ದೇಶಿಸಿರುವ ಪಕ್ಷದ ಸ್ಥಳೀಯ ಮುಖಂಡರ ಪಾದಯಾತ್ರೆ ಕುರಿತ ನಿರ್ಧಾರವನ್ನು ವರಿಷ್ಠರ ಹೆಗಲಿಗೆ ಹೊರಿಸಿದೆ.
ಬಳ್ಳಾರಿಯಲ್ಲಿ ನಡೆಯುವ ಸಮಾವೇಶದಲ್ಲಿ ಪಕ್ಷದ ರಾಜ್ಯ ಘಟಕದ ಎಲ್ಲ ಹಿರಿಯ ನಾಯಕರೂ ಪಾಲ್ಗೊಳ್ಳಲಿದ್ದಾರೆ ಎಂದು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಕಟಿಸಿದ್ದಾರೆ.
ಮಂಗಳವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಬಳ್ಳಾರಿಯಲ್ಲಿ ಆತಂಕದ ವಾತಾವರಣ ಇದೆ. ಬಿ.ಶ್ರೀರಾಮುಲು, ಜನಾರ್ದನ ರೆಡ್ಡಿ ಸೇರಿ ಪಕ್ಷದ ಸ್ಥಳೀಯ ನಾಯಕರು ಪಾದಯಾತ್ರೆ ನಡೆಸುವ ಬಗ್ಗೆ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ನಮ್ಮ ಅಪೇಕ್ಷೆಯೂ ಇದೆ. ಅದನ್ನು ನಾನು ಪಕ್ಷದ ವರಿಷ್ಠರ ಗಮನಕ್ಕೂ ತಂದಿದ್ದೇನೆ. ಮುಂದಿನ ದಿನಗಳಲ್ಲಿ ಆ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಮಾಜಿ ಸಚಿವ ಶ್ರೀರಾಮುಲು ಅವರು ಸೋಮವಾರ ವಿಜಯೇಂದ್ರ ಸೇರಿ ಹಿರಿಯ ನಾಯಕರನ್ನು ಭೇಟಿ ಮಾಡಿ ರಾಜಕೀಯ ಗಲಭೆ ಪ್ರಕರಣ ಸಂಬಂಧ ಬಳ್ಳಾರಿಯಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ, ವರಿಷ್ಠರ ಗಮನಕ್ಕೆ ತರದೆ ಏಕಾಏಕಿ ನಿರ್ಣಯ ಕೈಗೊಳ್ಳುವುದು ಸರಿಯಲ್ಲ. ಮೊದಲು 17ರಂದು ಸಮಾವೇಶ ನಡೆಸಿ ಹೋರಾಟ ಆರಂಭಿಸೋಣ. ಬಳಿಕ ವರಿಷ್ಠರ ನಿರ್ದೇಶನದಂತೆ ಕ್ರಮ ಕೈಗೊಳ್ಳೋಣ ಎಂಬ ಸಲಹೆಯನ್ನು ವಿಜಯೇಂದ್ರ ಸೇರಿ ಇತರೆ ರಾಜ್ಯ ನಾಯಕರು ನೀಡಿದರು ಎನ್ನಲಾಗಿದೆ.