ಮಳೆ ಅವಾಂತರಕ್ಕೆ ಪರಿಹಾರ ಕಂಡುಕೊಳ್ಳಿ : ಸಿಎಂ ತಾಕೀತು

KannadaprabhaNewsNetwork | Updated : May 20 2025, 04:10 AM IST
Follow Us

ಸಾರಾಂಶ

ಭಾರೀ ಮಳೆಯಿಂದಾಗಿ ನಗರದಲ್ಲಿ ಸೃಷ್ಟಿಯಾಗಿರುವ ಅನಾಹುತಕ್ಕೆ ಸಿಲುಕಿರುವ ಜನರ ನೆರವಿಗೆ ಕೂಡಲೆ ಧಾವಿಸಬೇಕು, ಜನರ ಸಮಸ್ಯೆಯನ್ನು ನೀಗಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಬಿಎಂಪಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

 ಬೆಂಗಳೂರು : ಭಾರೀ ಮಳೆಯಿಂದಾಗಿ ನಗರದಲ್ಲಿ ಸೃಷ್ಟಿಯಾಗಿರುವ ಅನಾಹುತಕ್ಕೆ ಸಿಲುಕಿರುವ ಜನರ ನೆರವಿಗೆ ಕೂಡಲೆ ಧಾವಿಸಬೇಕು, ಜನರ ಸಮಸ್ಯೆಯನ್ನು ನೀಗಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಬಿಎಂಪಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಭಾನುವಾರ ರಾತ್ರಿ ಸುರಿದ ಭಾರೀ ಮಳೆಯಿಂದ ವ್ಯಾಪಕ ತೊಂದರೆಗಳು ಕಂಡು ಬಂದ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಳೆಯಿಂದಾಗಿರುವ ಅನಾಹುತಗಳ ಮಾಹಿತಿ ಪಡೆದರು.

ಈ ವೇಳೆ ಪ್ರವಾಹ ಸೃಷ್ಟಿಯಾಗಿರುವ ಬಡಾವಣೆಗಳಲ್ಲಿ ನೀರು ಹೊರಹಾಕಲು ಸೂಕ್ತ ಕ್ರಮ ಕೈಗೊಳ್ಳಬೇಕು. ರಸ್ತೆಗಳಲ್ಲಿ ನೀರು ನಿಲ್ಲುವುದನ್ನು ತಡೆಯಲು ಸೂಕ್ತ ಚರಂಡಿ, ರಾಜಕಾಲುವೆ ಹೂಳು ತೆಗೆಯಲು ಸೂಚಿಸಿದರು. ಈ ವೇಳೆ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆಯೂ ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ, ಮುಂಗಾರು ಆರಂಭಕ್ಕೂ ಮುನ್ನ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು.

ಸೂಚನೆ ನೀಡಿದ್ದರೂ ನಿರ್ಲಕ್ಷ್ಯ

ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಗರದಲ್ಲಿ ರಾಜಕಾಲುವೆಗಳು ಒತ್ತುವರಿಯಾಗಿದ್ದು, ಚರಂಡಿಗಳು ಹೂಳು ತುಂಬಿದೆ. ಇದನ್ನು ಸರಿಪಡಿಸುವಂತೆ ಹಲವು ಬಾರಿ ಸೂಚನೆ ನೀಡಲಾಗಿತ್ತಾದರೂ ಬಿಬಿಎಂಪಿ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಹೀಗಾಗಿ ಪ್ರವಾಹ ಸೃಷ್ಟಿಯಾಗಿದೆ. ಅದಕ್ಕಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೇನೆ. ನಗರದಲ್ಲಿನ 859.90 ಕಿಮೀ ಉದ್ದದ ರಾಜಕಾಲುವೆ ಪೈಕಿ 491 ಕಿಮೀ ಉದ್ದದ ರಾಜಕಾಲುವೆಗಳಿಗೆ ತಡೆಗೋಡೆ ನಿರ್ಮಿಸಲಾಗಿದೆ. 195 ಕಿಮೀ ಉದ್ದದ ರಾಜಕಾಲುವೆ ತಡೆಗೋಡೆ ನಿರ್ಮಾಣ ಕಾಮಗಾರಿ ಚಾಲ್ತಿಯಲಿದ್ದು, ಉಳಿದ 173 ಕಿಮೀ ಉದ್ದದ ರಾಜಕಾಲುವೆ ದುರಸ್ತಿಗೆ ವಿಶ್ವ ಬ್ಯಾಂಕ್‌ನಿಂದ ಆರ್ಥಿಕ ನೆರವು ಪಡೆಯಲಾಗುತ್ತಿದೆ ಎಂದರು.

ನಗರದಲ್ಲಿ ಸುಮಾರು 210 ತಗ್ಗು ಪ್ರದೇಶಗಳನ್ನು ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದೆ. ಅದರಲ್ಲಿ 166 ಪ್ರದೇಶಗಳಲ್ಲಿ ಪರಿಹಾರ ಕ್ರಮ ಕೈಗೊಳ್ಳಲಾಗಿದೆ. ಬಾಕಿ 44 ಪ್ರದೇಶಗಳಲ್ಲಿ ತಾತ್ಕಾಲಿಕ ಕ್ರಮ ಕೈಗೊಳ್ಳಲಾಗಿದೆ. ಅವುಗಳು ಪೂರ್ಣಗೊಂಡರೆ ಪ್ರವಾಹ ಸಮಸ್ಯೆ ಕಡಿಮೆಯಾಗಲಿದೆ. ನಗರದಲ್ಲಿ 4,292 ಕಡೆ ರಾಜಕಾಲುವೆ ಒತ್ತುವರಿಯಾಗಿದ್ದು, 2,326 ಒತ್ತುವರಿ ತೆರವು ಮಾಡಲಾಗಿದೆ. ಉಳಿದ ಒತ್ತುವರಿ ತೆರವಿಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಎಷ್ಟೇ ಒತ್ತುವರಿದಾರರು ಎಷ್ಟೇ ಪ್ರಭಾವಿಗಳಾಗಿದ್ದರೂ ಅದನ್ನು ಪರಿಗಣಿಸದೆ ತೆರವುಗೊಳಿಸುವಂತೆ ನಿರ್ದೇಶಿಸಿದ್ದೇನೆ ಎಂದು ಹೇಳಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ನಗರದಲ್ಲಿ ಬಿಬಿಎಂಪಿ ಗುರುತಿಸಿರುವ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳನ್ನು ಹೊರತುಪಡಿಸಿ ಸಂಚಾರ ಪೊಲೀಸರು ಮಳೆ ಬಂದಾಗ ಸಮಸ್ಯೆ ಉಂಟಾಗುವ 132 ಪ್ರದೇಶಗಳನ್ನು ಗುರುತಿಸಿದ್ದಾರೆ. ಅದರಲ್ಲಿ ಏಪ್ರಿಲ್‌ ವೇಳೆಗೆ 82 ಪ್ರದೇಶಗಳಲ್ಲಿ ಪರಿಹಾರ ಕ್ರಮ ಕೈಗೊಳ್ಳಲಾಗಿದ್ದು, ಉಳಿದ ಕಡೆ ಶೀಘ್ರದಲ್ಲಿ ಪರಿಹಾರ ಕ್ರಮ ಕೈಗೊಳ್ಳುತ್ತೇವೆ. ರಾಜಕಾಲುವೆಗಳ ಅಭಿವೃದ್ಧಿಗಾಗಿಯೇ ಎರಡು ಸಾವಿರ ಕೋಟಿ ರು. ಖರ್ಚು ಮಾಡಲಾಗುತ್ತಿದೆ ಎಂದು ಹೇಳಿದರು.

ಕೆಲಸಗಳ ಚರ್ಚೆಗೆ ವಿಪಕ್ಷಗಳಿಗೆ ಸವಾಲು

ಮಳೆ ಅವಾಂತರಕ್ಕೆ ಸರ್ಕಾರವನ್ನು ಟೀಕಿಸುತ್ತಿರುವ ವಿರೋಧ ಪಕ್ಷಗಳಿಗೆ ಸವಾಲು ಹಾಕಿದ ಡಿ.ಕೆ. ಶಿವಕುಮಾರ್‌, ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಬಿಜೆಪಿಯ ನಾಯಕರು ಹತಾಶೆಯಾಗಿದ್ದಾರೆ. ನಾನು ಮತ್ತು ಸರ್ಕಾರ ಮಾಡುತ್ತಿರುವ ಕೆಲಸವನ್ನು ಸಹಿಸದೆ ಟೀಕಿಸುತ್ತಿದ್ದಾರೆ. ಅವರ ಟೀಕೆಗಳಿಗೆ ನಾನು ಉತ್ತರಿಸುವುದಿಲ್ಲ. ಆರ್‌. ಅಶೋಕ್‌ ಹಾಗೂ ವಿರೋಧ ಪಕ್ಷದ ಯಾರಾದರೂ ನಮ್ಮ ಕೆಲಸಗಳ ಬಗ್ಗೆ ಚರ್ಚೆಗೆ ಬರಲಿ ಎಂದು ಹೇಳಿದರು.

ನಾಳೆ ಮಳೆ ಹಾನಿ ಪ್ರದೇಶಗಳಿಗೆ ಸಿಎಂ ಭೇಟಿ

ಮಳೆಯಿಂದ ಹಾನಿ ಪ್ರದೇಶಗಳಿಗೆ ಸಿದ್ದರಾಮಯ್ಯ ಸೋಮವಾರ ಸಂಜೆ ಭೇಟಿ ನೀಡಲು ನಿರ್ಧರಿಸಿದ್ದರು. ಆದರೆ ಮಳೆ ಸುರಿದ ಕಾರಣ ಹಾಗೂ ಎಲ್ಲೆಡೆ ಸಂಚಾರ ದಟ್ಟಣೆ ಹೆಚ್ಚಾಗಿದ್ದ ಕಾರಣ ನಗರ ಪರಿವೀಕ್ಷಣೆಯನ್ನು ರದ್ದು ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಜನರಿಗೆ ಸಮಸ್ಯೆಯಾಗಬಾರದು ಎಂಬ ಕಾರಣಕ್ಕಾಗಿ ಸೋಮವಾರ ಭೇಟಿ ನೀಡಲು ತೆರಳಲಿಲ್ಲ. ಆದರೆ, ಬುಧವಾರ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡುವುದಾಗಿ ತಿಳಿಸಿದರು.

ರಾತ್ರಿ ಡಿಸಿಎಂ ನಗರ ಪರಿವೀಕ್ಷಣೆ

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಅಧಿಕಾರಿಗಳ ಸಭೆ ನಡೆಸಿದ ನಂತರ ಡಿ.ಕೆ. ಶಿವಕುಮಾರ್‌, ಮಳೆ ಹಾನಿ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಸಿಲ್ಕ್‌ಬೋರ್ಡ್‌ ಜಂಕ್ಷನ್‌ಗೆ ಭೇಟಿ ನೀಡಿ ಅಲ್ಲಿ ಮಳೆ ನೀರು ನಿಂತಿರುವುದನ್ನು ಕೂಡಲೆ ತೆರವಿಗೆ ಸೂಚನೆ ನೀಡಿದರು. ನಂತರ ರಾಜರಾಜೇಶ್ವರಿ ನಗರ ಗೋಪಾಲನ್‌ ಮಾಲ್‌ ಆರ್ಚ್‌ಗೆ ಭೇಟಿ ನೀಡಿ ಪರಿಶೀಲಿಸಿದರು.

ಸಿಲ್ಕ್‌ ಬೋರ್ಡ್ಡ್‌ ಜಂಕ್ಷನ್‌ ಭೇಟಿ ನೀಡಿದಾಗ ಜತೆಯಲ್ಲಿದ್ದ ಶಾಸಕರ ಸತೀಶ್‌ ರೆಡ್ಡಿ, ಕಾಂಗ್ರೆಸ್ ಮುಖಂಡ ಉಮಾಪತಿ ಗೌಡ ಪ್ರತಿ ಬಾರಿ ಮಳೆ ಬಂದಾಗಲೂ ನೀರು ನಿಂತು ಸಮಸ್ಯೆ ಸೃಷ್ಟಿಯಾಗುತ್ತದೆ ಎಂದು ವಿವರಿಸಿದರು. ಅದಕ್ಕೆ ಬಿಬಿಎಂಪಿ ಆಡಳಿತಾಧಿಕಾರಿ ತುಷಾರ್‌ ಗಿರಿನಾಥ್‌, ರಾಜಕಾಲುವೆ ದುರಸ್ತಿ ಸೇರಿದಂತೆ ಪ್ರವಾಹ ಪರಿಸ್ಥಿತಿ ತಡೆಯಲು ಕೈಗೊಂಡಿರುವ ಕ್ರಮಗಳ ಕುರಿತು ತಿಳಿಸಿದರು.

Read more Articles on