ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಲೋಕಸಭೆ ಚುನಾವಣೆ ಕಳೆದ ನಂತರ ಪಂಚ ಗ್ಯಾರಂಟಿ ಯೋಜನೆಗಳು ರದ್ದಾಗಲಿದ್ದು, ಆನಂತರ ಜನರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ವಂಚಿಸುತ್ತಿರುವ ಪರಿ ಗೊತ್ತಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.ಸಾಲಿಗ್ರಾಮ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದ ಚುನಾವಣಾ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ನೆಪದಲ್ಲಿ ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿದ್ದೆ ಕಾಂಗ್ರೆಸ್ ಸರ್ಕಾರದ ಸಾಧನೆ ಎಂದರು.
ಸರ್ಕಾರ ಶಾಶ್ವತ ಯೋಜನೆಗಳು ಮತ್ತು ಜನರಿಗೆ ಅನುಕೂಲವಾಗುವ ಕಾರ್ಯಕ್ರಮವನ್ನು ಜಾರಿಗೆ ತರುವ ಬದಲು ಸಾಲ ಮಾಡಿ ಪುಕ್ಕಟೆ ಯೋಜನೆಗಳನ್ನು ನೀಡುವ ಮೂಲಕ ಜನರ ಮೇಲೆ ಸಾಲದ ಹೊರೆ ಹೇರುತ್ತಿದ್ದು ಭವಿಷ್ಯದಲ್ಲಿ ಇದು ದೊಡ್ಡ ಗಂಡಾಂತರ ತಂದೊಡ್ಡಲಿದೆ ಎಂದು ಅವರು ಹೇಳಿದರು.ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮತದಾರರಿಗೆ ಸುಳ್ಳುಗಳ ಸರಮಾಲೆಯನ್ನೇ ಹೇಳಿಕೊಂಡು ಬರುತ್ತಿದ್ದು, ಇದನ್ನು ಯಾರು ನಂಬಬಾರದು, ನಾನು ಆಯ್ಕೆಯಾದರೆ ಕೇಂದ್ರ ಸರ್ಕಾರದಲ್ಲಿ ಉನ್ನತ ಸ್ಥಾನಮಾನ ದೊರಕುವ ವಿಶ್ವಾಸವಿದ್ದು, ಆ ನಂತರ ಕ್ಷೇತ್ರ ಮತ್ತು ರಾಜ್ಯದ ಅಭಿವೃದ್ಧಿಗೆ ಬದ್ಧನಾಗಿ ಕೆಲಸ ಮಾಡುತ್ತೇನೆ ಎಂದು ಅವರು ಭರವಸೆ ನೀಡಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ನನ್ನನ್ನು ಚುನಾವಣೆಗೆ ನಿಲ್ಲುವಂತೆ ಹೇಳಿದ್ದರಿಂದ ಸ್ಪರ್ಧೆ ಮಾಡಿದ್ದು, ಇದು ಭವಿಷ್ಯದಲ್ಲಿ ರಾಜ್ಯದ ರೈತರ ಸಹಕಾರಕ್ಕೆ ನಾನು ಬಂದು ಅವರ ಪರವಾಗಿ ಕೆಲಸ ಮಾಡಲಿ ಎಂಬ ಉದ್ದೇಶ ಇರಬಹುದು ಎಂದರು.ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಮಾಜಿ ಸಚಿವರಾದ ಎಂ.ಪಿ. ನಾಡಗೌಡ, ಸಾ.ರಾ. ಮಹೇಶ್ ಮಾತನಾಡಿದರು. ರಾಜ್ಯ ಬಿಜೆಪಿ ಕಾರ್ಯದರ್ಶಿ ದಿವ್ಯಾ, ಅಲ್ಪಸಂಖ್ಯಾತರ ಘಟಕದ ರಾಜ್ಯ ಕಾರ್ಯದರ್ಶಿ ಎಚ್.ಡಿ. ಪ್ರಭಾಕರ್ ಜೈನ್, ಜಿಪಂ ಮಾಜಿ ಮಾಜಿ ಸದಸ್ಯರಾದ ಅಮಿತ್ ವಿ. ದೇವರಹಟ್ಟಿ, ಎಂ.ಟಿ. ಕುಮಾರ್. ಸಿ.ಜೆ. ದ್ವಾರಕೀಶ್, ಗ್ರಾಪಂ ಮಾಜಿ ಅಧ್ಯಕ್ಷೆ ನಂದಿನಿ ರಮೇಶ್, ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್. ರಮೇಶ್, ಸಾಲಿಗ್ರಾಮ ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಕರ್ತಾಳು ಮಧು ಇದ್ದರು.