ಜಂಪಿಂಗ್‌ ಸ್ಟಾರ್‌ ಸಿ.ಪಿ.ಯೋಗೇಶ್ವರ್‌! - 25 ವರ್ಷಗಳ ರಾಜಕಾರಣದಲ್ಲಿ 5 ಬಾರಿ ಪಕ್ಷಾಂತರ ಮಾಡಿರುವ ಮಾಜಿ ಸಚಿವ

ಸಾರಾಂಶ

ರಾಜ್ಯ ರಾಜಕಾರಣದಲ್ಲಿ ಜಂಪಿಂಗ್‌ ಸ್ಟಾರ್‌ ಎಂದೇ ಹೆಸರುವಾಸಿಯಾಗಿರುವ ಸಿ.ಪಿ.ಯೋಗೇಶ್ವರ್‌, ಬುಧವಾರ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಗೊಳ್ಳುವ ಮೂಲಕ ತಮ್ಮ 25 ವರ್ಷಗಳ ರಾಜಕೀಯ ಜೀವನದಲ್ಲಿ 5ನೇ ಬಾರಿಗೆ ಪಕ್ಷಾಂತರ ಮಾಡಿದ್ದಾರೆ.

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಜಂಪಿಂಗ್‌ ಸ್ಟಾರ್‌ ಎಂದೇ ಹೆಸರುವಾಸಿಯಾಗಿರುವ ಸಿ.ಪಿ.ಯೋಗೇಶ್ವರ್‌, ಬುಧವಾರ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಗೊಳ್ಳುವ ಮೂಲಕ ತಮ್ಮ 25 ವರ್ಷಗಳ ರಾಜಕೀಯ ಜೀವನದಲ್ಲಿ 5ನೇ ಬಾರಿಗೆ ಪಕ್ಷಾಂತರ ಮಾಡಿದ್ದಾರೆ.

1999ರಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಸಿ.ಪಿ.ಯೋಗೇಶ್ವರ್, 2004ರ ಚುನಾವಣೆ ವೇಳೆಗೆ ಕಾಂಗ್ರೆಸ್‌ ಸೇರ್ಪಡೆಗೊಂಡು, ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಅದಾದ ನಂತರ 2008ರಲ್ಲಿ ಮತ್ತೆ ಕಾಂಗ್ರೆಸ್‌ನಿಂದಲೇ ಚುನಾವಣೆ ಎದುರಿಸಿದ್ದರು. ಆದರೆ, 2009ರಲ್ಲಿ ಕಾಂಗ್ರೆಸ್‌ ತೊರೆದು ಅಂದು ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸೇರ್ಪಡೆಗೊಂಡಿದ್ದರು.

ಅದಾದ ನಂತರ 2013ರಲ್ಲಿ ಬಿಜೆಪಿ ಬಗ್ಗೆ ಬೇಸರಗೊಂಡು ಪಕ್ಷ ತೊರೆದಿದ್ದ ಸಿ.ಪಿ.ಯೋಗೇಶ್ವರ್‌, ರಾಜ್ಯದಲ್ಲಿ ನೆಲೆಯೇ ಇರದ ಸಮಾಜವಾದಿ ಪಕ್ಷ ಸೇರ್ಪಡೆಗೊಂಡು ಚುನಾವಣೆ ಎದುರಿಸಿದ್ದರು. ಅಲ್ಲದೆ, ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಪತ್ನಿ ಅನಿತಾ ಅವರನ್ನು ಸೋಲಿಸಿ 5ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು.

2018ರ ವೇಳೆಗೆ ಬಿಜೆಪಿಗೆ ಮರಳಿದ್ದ ಯೋಗೇಶ್ವರ್‌, ಅಂದಿನ ಚುನಾವಣೆಯಲ್ಲಿ ಎಚ್‌.ಡಿ.ಕುಮಾರಸ್ವಾಮಿ ಎದುರು ಸೋಲನುಭವಿಸಿದ್ದರು. ಅದಾದ ನಂತರ ಸತತ 6 ವರ್ಷಗಳ ಕಾಲ ಬಿಜೆಪಿಯಲ್ಲಿಯೇ ಉಳಿದಿದ್ದ ಯೋಗೇಶ್ವರ್‌, ಇದೀಗ ಕಾಂಗ್ರೆಸ್‌ಗೆ ವಾಪಸಾಗಿದ್ದಾರೆ. ಆ ಮೂಲಕ ತಮ್ಮ 25 ವರ್ಷಗಳ ರಾಜಕೀಯ ಜೀವನದಲ್ಲಿ 5 ಬಾರಿ ಪಕ್ಷಾಂತರ ಮಾಡಿದ್ದು, 9 ಚುನಾವಣೆಗಳನ್ನು ಎದುರಿಸಿ, 5 ಬಾರಿ ಶಾಸಕರಾಗಿದ್ದಾರೆ.

ಹೀಗೆ ಪದೇ ಪದೇ ಪಕ್ಷಾಂತರ ಮಾಡುತ್ತಿರುವ ಯೋಗೇಶ್ವರ್‌ ತಮ್ಮನ್ನು ತಾವೇ ಜಂಪಿಂಗ್‌ ಸ್ಟಾರ್‌ ಎಂದು ಮಾಧ್ಯಮಗಳೆದುರು ಕರೆದುಕೊಂಡಿದ್ದಾರೆ. ಜನರ ಸೇವೆ ಮಾಡುವ ಉದ್ದೇಶದಿಂದ ಪಕ್ಷಾಂತರ ಅನಿವಾರ್ಯ ಎಂದೂ ಹೇಳಿಕೊಂಡಿದ್ದಾರೆ.

Share this article