ಜೆಡಿಎಸ್‌ ಅಭ್ಯರ್ಥಿ ಇಂದು ಫೈನಲ್‌? ನಿಖಿಲ್‌, ಅನಿತಾ ಜೊತೆ ಡಾಕ್ಟರ್‌ ಪತ್ನಿ ಹೆಸರೂ ಚಾಲ್ತಿಗೆ

Published : Oct 24, 2024, 09:44 AM IST
Union Minister HD Kumaraswamy

ಸಾರಾಂಶ

ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಬೆನ್ನಲ್ಲೇ ಜೆಡಿಎಸ್ ನಾಯಕರು ತಮ್ಮ ಪಕ್ಷದಿಂದ ಕಣಕ್ಕಿಳಿಸಬೇಕಾದ ಅಭ್ಯರ್ಥಿಗಾಗಿ ಕೊನೆಯ ಕ್ಷಣದ ಕಸರತ್ತು ನಡೆಸಿದ್ದು, ಗುರುವಾರ ಅಂತಿಮಗೊಳ್ಳುವ ಸಾಧ್ಯತೆಯಿದೆ.

ಬೆಂಗಳೂರು : ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಬೆನ್ನಲ್ಲೇ ಜೆಡಿಎಸ್ ನಾಯಕರು ತಮ್ಮ ಪಕ್ಷದಿಂದ ಕಣಕ್ಕಿಳಿಸಬೇಕಾದ ಅಭ್ಯರ್ಥಿಗಾಗಿ ಕೊನೆಯ ಕ್ಷಣದ ಕಸರತ್ತು ನಡೆಸಿದ್ದು, ಗುರುವಾರ ಅಂತಿಮಗೊಳ್ಳುವ ಸಾಧ್ಯತೆಯಿದೆ.

ಈಗ ಯೋಗೇಶ್ವರ್ ಅವರೇ ನೇರ ಎದುರಾಳಿಯಾಗಿರುವುದರಿಂದ ದೇವೇಗೌಡರ ಕುಟುಂಬದ ಸದಸ್ಯರನ್ನು ಕಣಕ್ಕಿಳಿಸಿದರೆ ಮಾತ್ರ ಪ್ರಬಲ ಪೈಪೋಟಿ ನೀಡಬಹುದು ಎಂಬ ಅಭಿಪ್ರಾಯ ಪಕ್ಷದಲ್ಲಿ ಬಲವಾಗಿ ವ್ಯಕ್ತವಾಗುತ್ತಿದೆ. ಈ ಪೈಕಿ ನಿಖಿಲ್ ಕುಮಾರಸ್ವಾಮಿ ಹೆಸರು ಮುಂಚೂಣಿಯಲ್ಲಿದೆ.

ಆದರೆ, ಮಹಿಳೆಯೊಬ್ಬರನ್ನು ಅಭ್ಯರ್ಥಿಯಾಗಿಸಿದರೆ ಹೇಗೆ ಎಂಬ ಚಿಂತನೆಯೂ ನಡೆದಿದೆ. ಹೀಗಾಗಿ, ಅನಿತಾ ಕುಮಾರಸ್ವಾಮಿ ಹಾಗೂ ಸಂಸದ ಡಾ.ಸಿ.ಎನ್‌.ಮಂಜುನಾಥ್ ಅವರ ಪತ್ನಿ ಅನಸೂಯ ಅವರ ಹೆಸರುಗಳೂ ಕೇಳಿಬರುತ್ತಿವೆ.

ಈ ನಡುವೆ ಕುಟುಂಬದವರು ಬೇಡ ಎನ್ನುವುದಾದರೆ ಪಕ್ಷದ ಕಾರ್ಯಕರ್ತರ ಪೈಕಿ ಚನ್ನಪಟ್ಟಣ ತಾಲೂಕು ಅಧ್ಯಕ್ಷ ಜಯಮುತ್ತು ಅವರನ್ನು ಕಣಕ್ಕಿಳಿಸುವ ಬಗ್ಗೆಯೂ ಚರ್ಚೆ ನಡೆದಿದೆ.

ಬುಧವಾರ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರು ನಿಖಿಲ್ ಕುಮಾರಸ್ವಾಮಿ ಹಾಗೂ ಜಯಮುತ್ತು ಅವರನ್ನು ಕರೆದು ಮಾತುಕತೆ ನಡೆಸಿದರು. ನಿಖಿಲ್ ಅವರನ್ನೇ ಕಣಕ್ಕಿಳಿಯುವಂತೆ ಗೌಡರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಈ ನಡುವೆ ಅಭ್ಯರ್ಥಿ ಆಯ್ಕೆ ಸಂಬಂಧ ಬಿಜೆಪಿ ನಾಯಕರೊಂದಿಗೆ ಸಂಜೆ ಸಭೆ ನಿಗದಿಯಾಗಿ ಕೊನೆ ಕ್ಷಣದಲ್ಲಿ ರದ್ದಾಯಿತು. ಗುರುವಾರ ಸಭೆ ನಡೆಯುತ್ತದೆಯೋ ಅಥವಾ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಗುರುವಾರದಿಂದ ಎರಡು ದಿನಗಳ ಪ್ರವಾಸದಲ್ಲಿರುತ್ತಾರೆ. ಆರ್.ಅಶೋಕ್ ಹಾಗೂ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರೊಂದಿಗೆ ಮಾತುಕತೆ ನಡೆಸುವ ನಿರೀಕ್ಷೆಯಿದೆ.

ಬುಧವಾರ ದೇವೇಗೌಡರ ಭೇಟಿ ಬ‍ಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಕಳೆದ ಎರಡು ತಿಂಗಳಿಂದ ನಿರಂತರವಾಗಿ ನನ್ನ ಹೆಸರು ಚಾಲ್ತಿಯಲ್ಲಿದೆ. ಆದರೆ, ನಾನು ಸ್ಪರ್ಧೆ ಮಾಡುವ ಬಗ್ಗೆ ಹೇಳಿಕೆಯನ್ನೇ ನೀಡಿಲ್ಲ. ಎನ್‌ಡಿಎಯಿಂದ ಅಭ್ಯರ್ಥಿ ಘೋಷಣೆ ಆಗಬೇಕು. ಲಕ್ಷಾಂತರ ಕಾರ್ಯಕರ್ತರ ದುಡಿಮೆಯಿಂದ ಕಟ್ಟಿರುವ ಪಕ್ಷ ನಮ್ಮದು. ಉಭಯ ಪಕ್ಷಗಳ ಮುಖಂಡರು ಕುಳಿತು ಚರ್ಚೆ ಮಾಡಿ ಅಭ್ಯರ್ಥಿಯನ್ನ ತೀರ್ಮಾನ ಮಾಡುತ್ತಾರೆ. ನನ್ನ ವೈಯಕ್ತಿಕ ಅಭಿಪ್ರಾಯದ ಪ್ರಕಾರ, ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಅಧಿಕಾರ ಸಿಕ್ಕಿದರೆ ಅದು ನಿಖಿಲ್ ಕುಮಾರಸ್ವಾಮಿಗೆ ಸಿಕ್ಕ ಅಧಿಕಾರದಂತಾಗುತ್ತದೆ ಎಂದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಪ್ರಯತ್ನ ವಿಫಲವಾದರೂ ಪ್ರಾರ್ಥನೆ ಆಗಲ್ಲ: ಡಿಕೆ ಬ್ರದರ್ಸ್‌ ನಿಗೂಢ ಪೋಸ್ಟರ್‌ ಸಂಚಲನ
ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ