ಮುಡಾ ಮಾಜಿ ಆಯುಕ್ತ ಡಾ.ಡಿ.ಬಿ.ನಟೇಶ್ ಲೋಕಾ ಗ್ರೀಲ್

KannadaprabhaNewsNetwork |  
Published : Nov 20, 2024, 12:36 AM IST
5 | Kannada Prabha

ಸಾರಾಂಶ

ಮುಡಾದಲ್ಲಿ ಬದಲಿ ನಿವೇಶನಗಳ ಹಂಚಿಕೆ ನಿರ್ಣಯ, ವಿಜಯನಗರದಲ್ಲೇ ನಿವೇಶನಗಳ ಹಂಚಿಕೆ ಹಾಗೂ ಅದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ಪ್ರಭಾವ ಕುರಿತು ಅಧಿಕಾರಿಗಳ ತಂಡವು ಹಲವು ಪ್ರಶ್ನೆಗಳನ್ನು ಕೇಳಿದ್ದು, ಪ್ರತಿಯೋಂದಕ್ಕೂ ಡಾ. ನಟೇಶ್ ಅವರು ತಾವು ಕೈಗೊಂಡ ಕ್ರಮದ ಬಗ್ಗೆ ಲಿಖಿತ ದಾಖಲೆಗಳೊಂದಿಗೆ ಮಾಹಿತಿ ಒದಗಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿರುವ ಮೈಸೂರು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು, ಮುಡಾ ಮಾಜಿ ಆಯುಕ್ತ ಡಾ.ಡಿ.ಬಿ. ನಟೇಶ್ ಅವರನ್ನು ಮಂಗಳವಾರ ಸತತ 7 ಗಂಟೆ ವಿಚಾರಣೆ ನಡೆಸಿದರು.

ಮುಡಾ ಹಗರಣ ಸಂಬಂಧ ಈಗಾಗಲೇ ಇಡಿ ವಿಚಾರಣೆ ಎದುರಿಸಿದ್ದ ಡಾ.ಡಿ.ಬಿ.ನಟೇಶ್ ಅವರು, ಲೋಕಾಯುಕ್ತ ಪೊಲೀಸರ ನೋಟಿಸ್ ಜಾರಿಗೊಳಿಸಿದ್ದರಿಂದ ಮಂಗಳವಾರ ಮೈಸೂರು ಲೋಕಾಯುಕ್ತ ಎಸ್ಪಿ ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸಿದರು.

ಬೆಳಗ್ಗೆಯಿಂದ ಸಂಜೆಯವರಗೆಗೆ ಸತತ 7 ಗಂಟೆಗಳ ಕಾಲ ಡಾ. ನಟೇಶ್ ಅವರನ್ನು ಲೋಕಾಯುಕ್ತ ಪೊಲೀಸರು ವಿಚಾರ ನಡೆಸಿ, ಪ್ರಕರಣ ಸಂಬಂಧ ಮಾಹಿತಿ ಕಲೆ ಹಾಕಿದರು.

ಮುಡಾದಲ್ಲಿ ಬದಲಿ ನಿವೇಶನಗಳ ಹಂಚಿಕೆ ನಿರ್ಣಯ, ವಿಜಯನಗರದಲ್ಲೇ ನಿವೇಶನಗಳ ಹಂಚಿಕೆ ಹಾಗೂ ಅದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ಪ್ರಭಾವ ಕುರಿತು ಅಧಿಕಾರಿಗಳ ತಂಡವು ಹಲವು ಪ್ರಶ್ನೆಗಳನ್ನು ಕೇಳಿದ್ದು, ಪ್ರತಿಯೋಂದಕ್ಕೂ ಡಾ. ನಟೇಶ್ ಅವರು ತಾವು ಕೈಗೊಂಡ ಕ್ರಮದ ಬಗ್ಗೆ ಲಿಖಿತ ದಾಖಲೆಗಳೊಂದಿಗೆ ಮಾಹಿತಿ ಒದಗಿಸಿದ್ದಾರೆ.

ಆಟೋದಲ್ಲಿ ಆಗಮನ, ಮಧ್ಯಾಹ್ನ ಊಟ, ವಿಚಾರಣೆ:

ಲೋಕಾಯುಕ್ತ ಎಸ್ಪಿ ಕಚೇರಿಗೆ ಆಟೋದಲ್ಲಿ ಬೆಳಗ್ಗೆ 10.45ಕ್ಕೆ ಆಗಮಿಸಿದ ಡಾ.ಡಿ.ಬಿ. ನಟೇಶ್ ಅವರು, ಸಂಜೆ 6.45 ರವರೆಗೂ ವಿಚಾರಣೆ ಎದುರಿಸಿದರು. ಲೋಕಾಯುಕ್ತ ಎಸ್ಪಿ ಟಿ.ಜೆ. ಉದೇಶ ನೇತೃತ್ವದ ತಂಡವು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ನಟೇಶ್ ಅವರು, ಮಧ್ಯಾಹ್ನ 1.30ರ ವೇಳೆಗೆ ಹೊರ ಬಂದು, ಪಕ್ಕದಲ್ಲೇ ಇದ್ದ ಹೋಟೆಲ್‌ ನಲ್ಲಿ ಊಟ ಮುಗಿಸಿ ಮತ್ತೆ ಮಧ್ಯಾಹ್ನ 2.30ಕ್ಕೆ ವಿಚಾರಣೆಗೆ ಹಾಜರಾಗಿ ಸಂಜೆ 6.45ಕ್ಕೆ ಎಸ್ಪಿ ಕಚೇರಿಯಿಂದ ಹೊರ ಬಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ ಮುಡಾದಿಂದ ವಿಜಯನಗರದಲ್ಲಿ 14 ಬದಲಿ ನಿವೇಶನಗಳನ್ನು ನಿಯಮ ಮೀರಿ ಹಂಚಿಕೆ ಮಾಡಿದ ಆರೋಪ ಡಾ. ನಟೇಶ್ ಅವರ ಮೇಲಿದೆ. ಈ ಸಂಬಂಧ ವಿಚಾರಣೆಗೆ ಬರುವಂತೆ ಲೋಕಾಯುಕ್ತ ಎಸ್ಪಿ ಟಿ.ಜೆ. ಉದೇಶ ನೋಟಿಸ್ ನೀಡಿದ್ದರು.

ವಿಡಿಯೋ ಚಿತ್ರೀಕರಣಕ್ಕೆ ನಟೇಶ್ ಆಕ್ಷೇಪ

ಬೆಂಗಳೂರಿನಿಂದ ಖಾಸಗಿ ಕಾರಿನಲ್ಲಿ ಮೈಸೂರಿಗೆ ಆಗಮಿಸಿದ್ದ ಡಾ. ನಟೇಶ್ ಅವರು, ಮಾಧ್ಯಮವರ ಕಣ್ತಪ್ಪಿಸಲು ಲೋಕಾಯುಕ್ತ ಎಸ್ಪಿ ಕಚೇರಿಯಿಂದ ಅನತಿ ದೂರದಲ್ಲಿ ಕಾರನ್ನು ನಿಲ್ಲಿಸಿ, ಆಟೋದಲ್ಲಿ ಕಚೇರಿಯ ಪ್ರವೇಶ ದ್ವಾರದಲ್ಲಿ ಇಳಿದು ನೇರವಾಗಿ ಕಚೇರಿಯೊಳಗೆ ಪ್ರವೇಶ ಮಾಡಿದರು.

ಈ ವೇಳೆ ದೃಶ್ಯ ಮಾಧ್ಯಮದವರು ವೀಡಿಯೋ ಚಿತ್ರೀಕರಣಕ್ಕೆ ಮುಂದಾಗುತ್ತಿದ್ದಂತೆ ಗರಂ ಆದ ಡಾ.ಡಿ.ಬಿ. ನಟೇಶ್ ಅವರು, ‘ನಾನೇನು ಡ್ಯಾನ್ಸ್ ಮಾಡುತ್ತಾ ಇದ್ದೇನೆಯೇ? ನಿಮಗೆ ಸ್ವಲ್ಪನೂ ಕಾಮನ್ ಸೆನ್ಸ್ ಬೇಡವೇ?. ಲೋಕಾಯುಕ್ತ ಅಧಿಕಾರಿಗಳು ವಿಚಾರಣೆಗೆ ಕರೆದಿದ್ದಾರೆ, ಹಾಜರಾಗುತ್ತಿದ್ದೇನೆ. ಇದನ್ನೇಕೆ ವೀಡಿಯೋ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದರು. ನಂತರ ಕೆಲವು ಕಡತಗಳೊಂದಿಗೆ ಕಚೇರಿಯೊಳಗೆ ತೆರಳಿದರು.

ಮಧ್ಯಾಹ್ನ ಊಟದ ವಿರಾಮದ ವೇಳೆ ಹೊರ ಬಂದ ಡಾ. ನಟೇಶ್ ಅವರನ್ನು ದೃಶ್ಯ ಮಾಧ್ಯಮದವರು ತರಾಟೆ ತೆಗೆದುಕೊಂಡರು. ನಾನು ಅಧಿಕಾರಿ, ನನಗೂ ಒಂದು ಕುಟುಂಬ ಇದೆ. ಹಲವು ದಿನಗಳಿಂದ ನಮ್ಮನ್ನೇ ತೊರಿಸುತ್ತಿದ್ದಾಗ, ಅದರಿಂದ ಆಗುವ ನೋವು ಎಂತಹದ್ದು ಎನ್ನುವುದನ್ನು ಅನುಭವಿಸಿದವರಿಗೆ ಗೊತ್ತು. ನಾನು ಬರುವುದು ಮತ್ತು ಹೋಗುವುದನ್ನೇ ತೋರಿಸುತ್ತಿದ್ದ ಕಾರಣ ಮಾತನಾಡಿದೆ ಅಷ್ಟೇ ಹೋಗಲಿ ಬಿಡಿ ಎಂದು ನಿರ್ಗಮಿಸಿದರು.ಮತ್ತೆ ಕರೆದಾಗ ಬರುತ್ತೇನೆ:

ಲೋಕಾಯುಕ್ತ ವಿಚಾರಣೆ ಮುಗಿಸಿಕೊಂಡು ಹೊರ ಬಂದ ಬಳಿಕ ಡಾ. ನಟೇಶ್ ಮಾತನಾಡಿ, ಯಾರು ಕಾನೂನಿಗಿಂತ ದೊಡ್ಡವರಲ್ಲ. ಕಾನೂನಿಂದ ಯಾರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮುಡಾದ ಹಗರಣ ಇದೀಗ ತನಿಖೆಯ ಹಂತದಲ್ಲಿದೆ. ವಿಚಾರಣೆ ಬಗ್ಗೆ ನಾನು ಏನನ್ನೂ ಹೇಳಲು ಬರುವುದಿಲ್ಲ. ಲೋಕಾಯುಕ್ತರಿಗೆ ಎಲ್ಲಾ ಉತ್ತರ ನೀಡಿದ್ದೇನೆ. ಮತ್ತೆ ಕರೆಯುತ್ತೇವೆ ಬನ್ನಿ ಎಂದಿದ್ದಾರೆ. ಯಾವಾಗ ಕರೆಯುತ್ತಾರೋ ಗೊತ್ತಿಲ್ಲ. ಅವರು ಕರೆದಾಗ ಬರುತ್ತೇನೆ ಎಂದರು.

ಯಾವ ಪ್ರಶ್ನೆಗಳನ್ನು ಕೇಳಿದರು ಎಂಬುದನ್ನು ಹೇಳೋಕೆ ಆಗೋದಿಲ್ಲ. ಇಂದು ವಿಚಾರಣೆ ಮುಗಿದಿದೆ ಅಷ್ಟೆ. ಮತ್ತೆ ನೋಟಿಸ್ ಕೊಟ್ಟಾಗ ಬರುತ್ತೇನೆ. ನಮ್ಮ ಕಾಲದಲ್ಲಿ ಆಗಿರುವುದರ ಬಗ್ಗೆ ಸತ್ಯಾನ್ವೇಷಣೆ ನಡೆಯುತ್ತಿದೆ. ಯಾವುದು ಸತ್ಯ, ಸತ್ಯ- ಸುಳ್ಳು ಎಲ್ಲಾ ತನಿಖೆಯ ಬಳಿಕ ಹೊರ ಬರಲಿದೆ ಎಂದು ಅವರು ಹೇಳಿದರು.

ಒಂದು ಪಾತ್ರೆಯಲ್ಲಿ ಅನ್ನ ಬೆಂದಿದ್ಯಾ ಎಂದು ಒಂದು ಅಗಳು ತೆಗೆದು ನೋಡಿದರೆ ಸಾಕು. ನಾನು ಏನು ಮಾಡಿದ್ದೇನೆ ಎಂಬುದು ಪಬ್ಲಿಕ್ ಡಾಕ್ಯುಮೆಂಟ್ ನಲ್ಲಿದೆ. ಯಾರು ಯಾವಾಗ ಕೊಟ್ಟಿದ್ದಾರೆ. ಎಷ್ಟು ಕೊಟ್ಟಿದ್ದಾರೆ ನಿಮ್ಮ ಬಳಿ ಪಟ್ಟಿ ಇದೆ. ಹೊಸ ನಿಯಮ ಏನು ಮಾಡಿಲ್ಲ. ಹಳೇ ನಿಯಮವನ್ನು ಜಾರಿಗೆ ತಂದಿದ್ದೇವೆ ಎಂದರು.

ಕಾನೂನು ದೃಷ್ಟಿಯಲ್ಲಿ ಯಾವುದು ಸರಿ ಎಂಬುದು ತನಿಖೆ ನಡೆಯುತ್ತಿದೆ. ನನಗೆ ಬ್ರಹ್ಮತೀತವಾದ ಜ್ಞಾನವಿಲ್ಲ, ಮತ್ತೆ ಯಾವಾಗ ವಿಚಾರಣೆ ಕರೆಯುತ್ತಾರೆ ಅಂಥ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.ಮುಡಾದಲ್ಲಿ ಕಾನೂನು ಪ್ರಕಾರ ಎಲ್ಲವೂ ನಡೆದಿದೆ. ಕಾನೂನು ಬಿಟ್ಟು ಬೇರೇನೂ ತೀರ್ಮಾನ ಮಾಡಿಲ್ಲ. ಕಾನೂನು ಪ್ರಕಾರವೇ ನಡೆದುಕೊಂಡಿರುವ ಬಗ್ಗೆ ವಿಚಾರಣೆ ವೇಳೆ ಮಾಹಿತಿ ನೀಡಲಾಗಿದೆ. ಪ್ರಕರಣದ ಬಗ್ಗೆ ವಿಚಾರಣೆ ನಡೆಯುತ್ತಿದೆ. ಯಾವುದು ಕಾನೂನಾತ್ಮಕ ಯಾವುದು ಮತ್ತು ಕಾನೂನಾತ್ಮಕ ಅಲ್ಲ ಎನ್ನುವುದು ವಿಚಾರಣೆ ಬಳಿಕ ಗೊತ್ತಾಗುತ್ತದೆ. ನಾವೊಂದು ಕಾಯಿದೆಯಲ್ಲಿ ನಿವೇಶನ ಕೊಟ್ಟಿದ್ದು ಸರಿ ಎನ್ನುತ್ತೇವೆ. ಅದೇ ರೀತಿ ಮತ್ತೊಂದು ಕಾಯಿದೆಯಲ್ಲಿ ಬೇರೆಯವರು ಬೇರೆ ರೀತಿ ಅರ್ಥೈಸುತ್ತಾರೆ. ವಿಚಾರಣಾ ವರದಿ ಬಳಿಕ ಯಾವುದು ಸರಿ ಎಂಬುದನ್ನು ನ್ಯಾಯಾಲಯ ತೀರ್ಮಾನಿಸಲಿದೆ.

- ಡಾ.ಡಿ.ಬಿ. ನಟೇಶ್, ಮುಡಾ ಮಾಜಿ ಆಯುಕ್ತಮತ್ತೆ ಪಾಲಯ್ಯಗೆ ನೋಟಿಸ್

ಮುಡಾ ಹಗರಣ ಸಂಬಂಧ ಮೈಸೂರು ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿದ್ದ ಪಾಲಯ್ಯ ಅವರಿಗೆ ನ.20 ರಂದು ಮತ್ತೆ ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಈಗಾಗಲೇ ಪಾಲಯ್ಯ ಅವರನ್ನು ಒಮ್ಮೆ ವಿಚಾರಣೆ ನಡೆಸಿರುವ ಲೋಕಾಯುಕ್ತ ಪೊಲೀಸರು, ಈಗ ಮತ್ತೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಸಂಕ್ರಾಂತಿ ಬಳಿಕ ರಾಜ್ಯ ಸಚಿವ ಸಂಪುಟ ಪುನಾರಚನೆ: ಸಲೀಂ
ಜಿ ರಾಮ್‌ ಜಿ, ಅನುದಾನ ಕಡಿತ ವಿರುದ್ಧ ಇಂದು ರಾಜ್ಯ ಸಂಪುಟದಲ್ಲಿ ನಿರ್ಣಯ?