ತಮಗೆ ಬೇಕಾದವರು ಮರು ಆಯ್ಕೆಯಾಗಲೆಂದು ಅಧಿಕಾರ ದುರ್ಬಳಕೆ ಮಾಡಿಕೊಂಡು ವಿಂಗಡನೆ ಮಾಡದೆಯೇ ಮಾಡಿರುವಂತೆ ವರದಿ ನೀಡಿ ವಂಚಿಸಲಾಗಿದೆ, ಇದು ನನ್ನೊಬ್ಬನಿಗೆ ಮಾಡಿದ ವಂಚನೆಯಲ್ಲ ಇಡೀ ಜಿಲ್ಲೆಯ ರೈತರಿಗೆ ಮಾಡಿರುವ ಮಹಾ ದ್ರೋಹ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಂಗಾರಪೇಟೆ : ಕೋಲಾರ ಹಾಲು ಒಕ್ಕೂಟದ ಚುನಾವಣೆಗಾಗಿ ಕ್ಷೇತ್ರ ವಿಂಗಡಣೆ ಮಾಡುವುದರಲ್ಲಿ ಕೋಲಾರ ಹಾಲು ಒಕ್ಕೂಟದ ಎಂ.ಡಿ ಗೋಪಾಲಸ್ವಾಮಿ ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ತಮ್ಮ ಬೆಂಬಲಿಗರಿಗೆ ಅನುಕೂಲವಾಗುವಂತೆ ವಿಂಗಡನೆ ಮಾಡಿದ್ದಾರೆ ಎಂದು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ವಂಚನೆ ಮಾಡಿದ್ದಾರೆಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಆರೋಪ ಮಾಡಿದರು.
ಪಟ್ಟಣದ ಪುರಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೋಚಿಮುಲ್ ಕಚೇರಿ ನನ್ನ ಕ್ಷೇತ್ರದ ವ್ಯಾಪ್ತಿಗೆ ಸೇರುವುದರಿಂದ ಕ್ಷೇತ್ರ ವಿಂಗಡಣೆ ಮಾಡುವಾಗ ನನ್ನ ಗಮನಕ್ಕೆ ತನ್ನಿ ಎಂದು ಎಂ.ಡಿಗೆ ಪತ್ರ ಬರೆದರೂ ಅದನ್ನು ಕಡೆಗಣಿಸಿದ್ದಾರೆ ಎಂದರು.
ರೈತರಿಗೆ ಮಾಡಿದ ಮೋಸ
ಕೋಚಿಮುಲ್ ಚುನಾವಣೆಯಲ್ಲಿ ತಮಗೆ ಬೇಕಾದವರು ಮರು ಆಯ್ಕೆಯಾಗಲೆಂದು ಅಧಿಕಾರ ದುರ್ಬಳಕೆ ಮಾಡಿಕೊಂಡು ವಿಂಗಡನೆ ಮಾಡದೆಯೇ ಮಾಡಿರುವಂತೆ ವರದಿ ನೀಡಿ ವಂಚಿಸಲಾಗಿದೆ, ಇದು ನನ್ನೊಬ್ಬನಿಗೆ ಮಾಡಿದ ವಂಚನೆಯಲ್ಲ ಇಡೀ ಜಿಲ್ಲೆಯ ರೈತರಿಗೆ ಮಾಡಿರುವ ಮಹಾ ದ್ರೋಹವಾಗಿದೆ ಎಂದು ಎಚಿಡಿ ವಿರುದ್ದ ಗುಡುಗಿದರು.ಉಸ್ತುವಾರಿ ಸಚಿವರಿಗೂ ತಿಳಿಸದೆ ಎಂಡಿ ಗೋಪಾಲಸ್ವಾಮಿ ತಾವು ಹಿಟ್ಲರ್‌ರಂತೆ ವರ್ತಿಸಿದ್ದಾರೆ. ಇದರಲ್ಲೆ ಇಷ್ಟು ಅವ್ಯವಹಾರ ಮಾಡಿರುವ ಅವರು ಇನ್ನು ಒಕ್ಕೂಟದಲ್ಲಿ ಎಷ್ಟು ಮಾಡಿರಬಹುದು ಎಂದು ಪ್ರಶ್ನಿಸಿದರು.ಇದಲ್ಲದೆ ಎಂ.ವಿ.ಕೃಷ್ಣಪ್ಪ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ಗೋಲ್ಡನ್ ಡೈರಿ ನಿರ್ಮಾಣದಲ್ಲಿ ಒಂದೇ ಕುಟುಂಬದವರು ಗುತ್ತಿಗೆ ಪಡೆದು ಭಾರಿ ಅವ್ಯವಹಾರ ಮಾಡಲಾಗುತ್ತಿದೆ,ಇದರ ಬಗ್ಗೆ ಸಹ ತನಿಖೆಯಾಗಬೇಕೆಂದು ಒತ್ತಾಯಿಸಿದರು.
ಚಿಮುಲ್‌ಗೆ ಭೂಮಿ ಪರಭಾರೆ ಅಕ್ರಮ
ಹೊಳಲಿ ಗ್ರಾಮದಲ್ಲಿ 50 ಎಕರೆ ಜಾಗವನ್ನು ಚಿಕ್ಕಬಳ್ಳಾಪುರ ಒಕ್ಕೂಟಕ್ಕೆ ಅಕ್ರಮವಾಗಿ ಜಿಲ್ಲಾಧಿಕಾರಿ ನೀಡಿದ್ದಾರೆ. ಡಿಸೀಗೆ ೧೦ ಎಕರೆ ಅಷ್ಟೇ ನೀಡಲು ಅಧಿಕಾರವಿದ್ದರೂ ಆದರೂ ೫೦ಎಕರೆ ಹೇಗೆ ಒಕ್ಕೂಟಕ್ಕೆ ನೀಡಿದರು ಎಂದರಲ್ಲದೆ, ಕೋಲಾರ ಜಿಲ್ಲೆಯಲ್ಲಿ ಎಸ್‌ಸಿ ಬಲಗೈ ಸಮುದಾಯ ಅಧಿಕ ಸಂಖ್ಯೆಯಲ್ಲಿದ್ದು ಅವರ ಕಲ್ಯಾಣಕ್ಕಾಗಿ ಜಮೀನು ಕೊಡಿ ಎಂದರೆ ಕೊಡಲಿಲ್ಲ ಎಂದು ಹೇಳಿದರು.
ಹಾಲು ಒಕ್ಕೂಟಕ್ಕೆ ಮಾತ್ರ ಕಾನೂನು ಬಾಹಿರವಾಗಿ 50ಎಕರೆ ಕೊಡಲಾಗಿದೆ, ಅಲ್ಲದೆ ಒಕ್ಕೂಟ ಯಾವ ಉದ್ದೇಶಕ್ಕೆ ಪಡೆದ ಜಮೀನನ್ನು ಆ ಉದ್ದೇಶಕ್ಕೆ ಬಳಸದೆ ಸೋಲಾರ್ ವಿದ್ಯುತ್ ಉತ್ಪಾದನೆಗೆ ಮುಂದಾಗಿದೆ ಎಂದು ಟೀಕಿಸಿದರು.
ತನಿಖೆ ನಡೆಸಲು ಆಗ್ರಹ
ಹಾಲು ಒಕ್ಕೂಟದಿಂದ ಹೊರ ಬರುವ ಕಲುಷಿತ ನೀರು ಹರಿದು ರೈತರು ಜಮೀನು ಹಾಳಾಗಿದೆ, ಆ ರೈತರ ಬಗ್ಗೆ ಗಮನ ಹರಿಸಿಲ್ಲ, ಅಲ್ಲದೆ ಉದ್ಯೋಗ ನೀಡದೆ ಅವ್ಯವಹಾರದಲ್ಲಿ ನಿರತರಾಗಿದ್ದಾರೆ ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕೆಂದು ಆಗ್ರಹಿಸಿದರು.ಈ ವೇಳೆ ಪುರಸಭೆ ಅಧ್ಯಕ್ಷ ಗೋವಿಂದ,ಮಾಜಿ ಅಧ್ಯಕ್ಷರಾದ ಕೆ.ಚಂದ್ರಾರೆಡ್ಡಿ,ಶಂಷುದ್ದಿನ್ ಬಾಬು,ಮಣಿ,ಕೆಡಿಎ ಅಧ್ಯಕ್ಷ ಗೋಪಾಲರೆಡ್ಡಿ ಇದ್ದರು.