ಕಾಂಗ್ರೆಸ್ಸಲ್ಲಿ ಈಗ ಹೊಸ ಒತ್ತಡ ಹೆಚ್ಚಳ : ಮಂತ್ರಿ ಸ್ಥಾನಕ್ಕಾಗಿ 31 ಶಾಸಕರ ಪತ್ರ

Published : Feb 24, 2026, 05:58 AM IST
Siddaramaiah DK Shivakumar

ಸಾರಾಂಶ

ಸಚಿವ ಸಂಪುಟ ಪುನಾರಚನೆಗೆ ಒತ್ತಡ ತೀವ್ರಗೊಂಡಿದೆ. ಸಂಪುಟ ಪುನಾರಚನೆ ಮಾಡಬೇಕು ಹಾಗೂ ಪುನಾರಚನೆ ವೇಳೆ, ಮೊದಲ ಬಾರಿ ಆಯ್ಕೆಯಾದ ಕನಿಷ್ಠ 5 ಮಂದಿ ಶಾಸಕರಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ 31ಕ್ಕೂ ಹೆಚ್ಚು ಮಂದಿ ಶಾಸಕರು ಹೈಕಮಾಂಡ್‌ಗೆ ಪತ್ರ ಬರೆದಿದ್ದಾರೆ.

 ಬೆಂಗಳೂರು :  ನಾಯಕತ್ವ ಬದಲಾವಣೆ ವಿಚಾರದಲ್ಲಿ ನಡೆದಿರುವ ಬಣ ರಾಜಕಾರಣದ ನಡುವೆಯೇ ಸಚಿವ ಸಂಪುಟ ಪುನಾರಚನೆಗೆ ಒತ್ತಡ ತೀವ್ರಗೊಂಡಿದೆ. ಸಂಪುಟ ಪುನಾರಚನೆ ಮಾಡಬೇಕು ಹಾಗೂ ಪುನಾರಚನೆ ವೇಳೆ, ಮೊದಲ ಬಾರಿ ಆಯ್ಕೆಯಾದ ಕನಿಷ್ಠ 5 ಮಂದಿ ಶಾಸಕರಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ 31ಕ್ಕೂ ಹೆಚ್ಚು ಮಂದಿ ಶಾಸಕರು ಹೈಕಮಾಂಡ್‌ಗೆ ಪತ್ರ ಬರೆದಿದ್ದಾರೆ.

ಇದೇ ಪ್ರಥಮ ಬಾರಿ ವಿಧಾನಸಭೆಗೆ ಆರಿಸಿ ಬಂದಿರುವ ಶಾಸಕರು ಜನವರಿ ಮಾಸಾಂತ್ಯದಲ್ಲೇ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಅವರಿಗೆ ಪತ್ರ ಬರೆದಿದ್ದಾರೆ. ತನ್ಮೂಲಕ ಸಂಪುಟ ಪುನಾರಚನೆಗೆ ಒತ್ತಾಯಿಸಿ ಹೈಕಮಾಂಡ್‌ಗೆ ಸಂದೇಶ ರವಾನಿಸಿದ್ದಾರೆ.

ರಾಜ್ಯ ಸರ್ಕಾರ ಎರಡೂವರೆ ವರ್ಷ ಪೂರೈಸಿದಾಗಲೇ (2025ರ ನವೆಂಬರ್) ಸಂಪುಟ ಸರ್ಜರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಸಕ್ತಿ ತೋರಿದ್ದರು. ದೆಹಲಿ ನಾಯಕರ ಮುಂದೆ ಇಟ್ಟ ಪುನಾರಚನೆ ಪ್ರಸ್ತಾವನೆಗೆ ದೆಹಲಿ ನಾಯಕರು ಒಪ್ಪಿಗೆ ನೀಡಿರಲಿಲ್ಲ.

ಸಚಿವರು ಎರಡೂವರೆ ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಆಕಾಂಕ್ಷಿಗಳಿಂದಲೂ ಒತ್ತಡ ಹೆಚ್ಚಾಗಿತ್ತು. ಆದರೆ, ಸಂಪುಟ ಪುನಾರಚನೆ ಆದರೆ ನಾಯಕತ್ವ ಬದಲಾವಣೆ ವಿಚಾರ ನೆನೆಗುದಿಗೆ ಬೀಳಬಹುದು ಎಂಬ ಲೆಕ್ಕಾಚಾರದಿಂದ ಡಿ.ಕೆ. ಶಿವಕುಮಾರ್‌ ಬಣ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಲೇ ಇತ್ತು.

ಇದೀಗ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಎರಡೂ ಬಣದಲ್ಲೂ ಗುರುತಿಸಿಕೊಂಡಿರುವ ಶಾಸಕರು ಸೇರಿ 31ಕ್ಕೂ ಹೆಚ್ಚು ಮಂದಿ ಶಾಸಕರು ಸಂಪುಟ ಪುನಾರಚನೆಗೆ ಸುರ್ಜೇವಾಲಾ ಅವರಿಗೆ ಪತ್ರ ಬರೆದಿದ್ದಾರೆ. ಇದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಪ್ರಸಕ್ತ ಚುನಾವಣೆಯಲ್ಲಿ 38 ಮಂದಿ ಮೊದಲ ಬಾರಿಯ ಶಾಸಕರು ಕಾಂಗ್ರೆಸ್‌ನಿಂದ ಗೆದ್ದಿದ್ದೇವೆ. ಇದರಿಂದ ಜನರು ಹೊಸಬರನ್ನು ಎದುರು ನೋಡುತ್ತಿರುವುದು ತಿಳಿಯುತ್ತಿದೆ. ಹೀಗಾಗಿ 34 ಮಂದಿ ಇರುವ ಸಂಪುಟದಲ್ಲಿ ಕನಿಷ್ಠ 5 ಮಂದಿ ಹೊಸಬರಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಬೇರೆ ರಾಜ್ಯಗಳಲ್ಲಿ ಮೊದಲ ಬಾರಿಗೆ ಗೆದ್ದವರು ಮುಖ್ಯಮಂತ್ರಿಗಳು, ಸಚಿವರು ಆಗಿದ್ದಾರೆ. 2028ರ ವಿಧಾನಸಭೆ ಚುನಾವಣೆ ಹಾಗೂ ಯುವಕರ ಆಶೋತ್ತರಗಳನ್ನು ಈಡೇರಿಸುವ ದೃಷ್ಟಿಯಿಂದ ಹೊಸಬರನ್ನು ಸೇರಿಸಿಕೊಳ್ಳಬೇಕು ಎಂದು ಸುರ್ಜೇವಾಲಾ ಅವರ ಮೂಲಕ ಹೈಕಮಾಂಡ್‌ಗೆ ಮನವಿ ಸಲ್ಲಿಸಲಾಗಿದೆ.

ಹೌದು ಪತ್ರ ಬರೆದಿದ್ದೇವೆ- ಮಂಥರ್‌ಗೌಡ:

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಮಡಿಕೇರಿ ಶಾಸಕ ಮಂಥರ್‌ಗೌಡ, ಅಧಿವೇಶನದ ವೇಳೆ ಪತ್ರಕ್ಕೆ ಸಹಿ ಹಾಕಿ ನೀಡಿದ್ದೇವೆ. ಸಹಿ ಸಂಗ್ರಹ ಮಾಡಿದ್ದು ಯಾರೆಂಬುದು ನೆನಪಿಲ್ಲ. ನಾವೆಲ್ಲಾ ಒಟ್ಟಾಗಿ ಸಹಿ ಹಾಕಿದ್ದೇವೆ. ಯುವಕರಿಗೆ ಅವಕಾಶ ಕೊಡಿ ಎಂದು ಕೇಳಿದ್ದೇವೆ. ಮುಂದೊಂದು ದಿನ ನೀವು ಕೇಳಿದ್ದರೆ ಕೊಡುತ್ತಿದ್ದೆವು ಎಂಬ ಮಾತು ಬರಬಾರದು. ಹೀಗಾಗಿ ಕೇಳಿದ್ದೇವೆ ಎಂದು ಹೇಳಿದರು.

ಹೊಸ ಶಾಸಕರ ಬೇಡಿಕೆ ಏನು?

ಈ ಬಾರಿ ಕಾಂಗ್ರೆಸ್‌ನಿಂದ 31 ಜನರು ಮೊದಲ ಸಲ ವಿಧಾನಸಭೆಗೆ ಆಯ್ಕೆ

ಇದು ಜನತೆ ಹೊಸ ಮುಖ ನೋಡಲು ಬಯಸುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿ

ಸಂಪುಟ ಪುನಾರಚನೆ ಈ ವೇಳೆ 31 ಜನರ ಪೈಕಿ 5 ಜನರಿಗೆ ಸ್ಥಾನ ನೀಡಿ

2028ರ ಚುನಾವಣೆ, ಯುವಕರ ಆಶೋತ್ತರ ಈಡೇರಿಸಲು ಇದು ಅಗತ್ಯ

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಸುರ್ಜೇವಾಲಾಗೆ ಪತ್ರ ಬರೆದು ಶಾಸಕರ ಬೇಡಿಕೆ

ಮನವಿ ಮಾಡಿದವರಲ್ಲಿ ಸಿದ್ದರಾಮಯ್ಯ, ಡಿಕೆಶಿ ಬಣದ ಯುವ ಶಾಸಕರು

ಸಂಪುಟ ಪುನಾರಚನೆಗೆ ಹಿರಿಯರ ಬಳಿಕ ಕಿರಿಯ ಶಾಸಕರಿಂದ ಮನವಿ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಜಿ ರಾಮ್‌ ಜಿ ರದ್ಧತಿವರೆಗೂ ಹೋರಾಟ ನಿಲ್ಲಲ್ಲ : ಸಿದ್ದರಾಮಯ್ಯ
ಸ್ಟಾಲಿನ್‌ ಸ್ಟ್ಯಾಂಡ್‌ ಅಪ್ ಕಮೆಡಿಯನ್‌ : ವಿಜಯ್‌ ವ್ಯಂಗ್ಯ