ಚಿರತೆ ದಾಳಿಯ ವೇಳೆ ಸ್ನೇಹಿತರ ಕರೆ : ನರಳಾಡಿದವ ಶವವಾಗಿ ಪತ್ತೆ!

Published : Jan 22, 2026, 06:57 AM IST
Chamarajanagar Leopard Attacks Devotee on Padayatra Victim Injured

ಸಾರಾಂಶ

ಪ್ರಸಿದ್ಧ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಯುವಕ ಚಿರತೆ ದಾಳಿಗೆ ಬಲಿಯಾದ ಘಟನೆ  ಮಲೆ ಮಹದೇಶ್ವರ ಬೆಟ್ಟದ ತಪ್ಪಲು ಪ್ರದೇಶ ತಾಳುಬೆಟ್ಟದಲ್ಲಿ ಬುಧವಾರ ಮುಂಜಾನೆ ನಡೆದಿದೆ. ಚಿರತೆ ದಾಳಿಯ ವೇಳೆ ಆತನಿಗೆ ಸ್ನೇಹಿತರು ಕರೆ ಮಾಡಿದ್ದು, ಆತ ನರಳಾಡುವ ಶಬ್ದ ಕೇಳಿದೆ.

 ಹನೂರು :  ಪ್ರಸಿದ್ಧ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಯುವಕ ಚಿರತೆ ದಾಳಿಗೆ ಬಲಿಯಾದ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ತಪ್ಪಲು ಪ್ರದೇಶ ತಾಳುಬೆಟ್ಟದಲ್ಲಿ ಬುಧವಾರ ಮುಂಜಾನೆ ನಡೆದಿದೆ. ಚಿರತೆ ದಾಳಿಯ ವೇಳೆ ಆತನಿಗೆ ಸ್ನೇಹಿತರು ಕರೆ ಮಾಡಿದ್ದು, ಆತ ನರಳಾಡುವ ಶಬ್ದ ಕೇಳಿಬಂದಿದೆ.

ಮಂಡ್ಯ ಜಿಲ್ಲೆಯ ಚೀರನಹಳ್ಳಿ ಗ್ರಾಮದ ಪ್ರವೀಣ್

ಮಂಡ್ಯ ಜಿಲ್ಲೆಯ ಚೀರನಹಳ್ಳಿ ಗ್ರಾಮದ ಪ್ರವೀಣ್ (30) ಚಿರತೆ ದಾಳಿಗೆ ಮೃತಪಟ್ಟಿರುವ ಪಾದಯಾತ್ರಿಕ. ಕ್ಷೇತ್ರಕ್ಕೆ ಚೀರನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಪಾದಯಾತ್ರಿಗಳು ತೆರಳಿದ್ದರು. ಮಂಗಳವಾರ ರಾತ್ರಿ ಕೆಲವು ಭಕ್ತರು ತಾಳುಬೆಟ್ಟದಲ್ಲಿ ವಾಸ್ತವ್ಯ ಹೂಡಿ ಬುಧವಾರ ಬೆಳಗಿನ ಜಾವ ಟಾರ್ಚ್ ಹಿಡಿದು ಮಲೆ ಮಹದೇಶ್ವರ ಬೆಟ್ಟಕ್ಕೆ ಹೊರಟಿದ್ದರು. ಈ ವೇಳೆ, ರಂಗಸ್ವಾಮಿ ಒಡ್ಡಿನ ಸಮೀಪದ ಪಾದಯಾತ್ರಿಕರ ಮಾರ್ಗದಲ್ಲಿ ಕುಳಿತಿದ್ದ ಚಿರತೆ, ಏಕಾಏಕಿ ಪ್ರವೀಣ್‌ನನ್ನು ಅಟ್ಟಾಡಿಸಿಕೊಂಡು ಬಂದಿದೆ. ಚಿರತೆ ನೋಡಿ ಪ್ರವೀಣ್‌ ಬೆಟ್ಟದ ಕಡೆಗೆ ಓಡಿದರೆ, ಉಳಿದವರು ತಾಳಬೆಟ್ಟದ ಕಡೆ ಓಡಿ ಹೋದರು. ಸುಮಾರು 1 ಕಿ.ಮೀ. ಓಡಿ ಬಂದ ಬಳಿಕ ಉಳಿದವರು ಪ್ರವೀಣ್‌ನಿಗೆ ಮೊಬೈಲ್‌ನಲ್ಲಿ ಕರೆ ಮಾಡಿದರೆ, ‘ಅಯ್ಯೋ ಅಪ್ಪ’ ಅಂತಾ ಚೀರಾಟ ಕೇಳಿ ಬಂತು. ನಂತರ ಆತನ ಸಂಪರ್ಕ ಕಡಿತವಾಯಿತು.

ಭಯಭೀತರಾದ ಸ್ನೇಹಿತರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಶವ ಪತ್ತೆ ಹಚ್ಚಿದ್ದಾರೆ. ಬೆಳಗ್ಗೆ 11 ಗಂಟೆ ವೇಳೆಗೆ ಶವ ಪತ್ತೆಯಾಗಿದೆ. ಚಿರತೆಯು ಹಳ್ಳಕ್ಕೆ ಪ್ರವೀಣ್ ಮೃತದೇಹ ಎಳೆದೊಯ್ದಿತ್ತು. ಹಗ್ಗ ಕಟ್ಟಿಕೊಂಡು ಪ್ರವೀಣ್ ಮೃತದೇಹವನ್ನು ಸಿಬ್ಬಂದಿ ಎತ್ತಿಕೊಂಡು ಬಂದಿದ್ದಾರೆ.

ತಾತ್ಕಾಲಿಕ ನಿರ್ಬಂಧ

ಚಿರತೆ ದಾಳಿ ಹಿನ್ನೆಲೆಯಲ್ಲಿ ಮಹದೇಶ್ವರ ಬೆಟ್ಟಕ್ಕೆ ಹೋಗುವ ಪಾದಯಾತ್ರೆಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ. ಬೆಳಗಿನ ಜಾವ ಹಾಗೂ ಸಂಜೆ ವೇಳೆ ವನ್ಯಪ್ರಾಣಿಗಳ ಸಂಚಾರ ಹೆಚ್ಚಾಗಿರುತ್ತದೆ. ಹೀಗಾಗಿ, ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಮಾತ್ರ ಪಾದಯಾತ್ರೆಗೆ ಅವಕಾಶ ನೀಡಲು ಹಾಗೂ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆಯಿಂದ ಬೋನು ಅಳವಡಿಕೆಗೆ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಬ್ಯಾಲೆಟ್‌ನಲ್ಲಿ ಮತದಾನ ನಡೆಸಿದರೆ ತಪ್ಪೇನು? ರಾಜ್ಯ ಚುನಾವಣಾ ಆಯುಕ್ತ
ಬಿಜೆಪಿ- ದಳ ಶಾಸಕರಿಗೆ ಇಂದು ಚೌಹಾಣ್‌ ಜಿ ರಾಮ್‌ ಜಿ ಪಾಠ!