;Resize=(412,232))
ಬೆಂಗಳೂರು : ಜಿ ರಾಮ್ ಜಿ ವಿರುದ್ಧ ನಿರ್ಣಯ ಕೈಗೊಳ್ಳುವ ಉಮೇದಿಯಲ್ಲಿ ವಿಧಾನಮಂಡಲ ಜಂಟಿ ಅಧಿವೇಶನ ಕರೆದಿರುವ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಸಡ್ಡು ಹೊಡೆದಿದ್ದು, ಸರ್ಕಾರ ಸಿದ್ಧಪಡಿಸಿರುವ ರಾಜ್ಯಪಾಲರ ಭಾಷಣದಲ್ಲಿ 11 ಪ್ಯಾರಾ ಕೈಬಿಡುವಂತೆ ಪಟ್ಟು ಹಿಡಿದಿದ್ದಾರೆ.
ಆದರೆ, ರಾಜ್ಯ ಸರ್ಕಾರ ಈ ಪ್ಯಾರಾಗಳ ಬದಲಾವಣೆಗೆ ಸುತಾರಾಂ ಒಪ್ಪಿಲ್ಲ. ಈ ಹಿನ್ನೆಲೆಯಲ್ಲಿ ಲೋಕಭವನ ಹಾಗೂ ರಾಜ್ಯ ಸರ್ಕಾರದ ನಡುವೆ ಸಂಘರ್ಷ ಆರಂಭವಾಗಿದ್ದು, ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡುವರೇ ಎಂಬ ಕುತೂಹಲ ಇದೀಗ ಗರಿಗೆದರಿದೆ.
ರಾಜ್ಯಪಾಲರು ಜಂಟಿ ಅಧಿವೇಶನದಲ್ಲಿ ಭಾಗವಹಿಸುವ ಅಥವಾ ಭಾಗವಹಿಸದಿರುವ ಬಗ್ಗೆ ಬುಧವಾರ ರಾತ್ರಿ 10 ಗಂಟೆವರೆಗೂ ಸ್ಪಷ್ಟತೆ ನೀಡಿಲ್ಲ. ಹೀಗಾಗಿ ಒಂದೊಮ್ಮೆ ಗುರುವಾರ ಜಂಟಿ ಅಧಿವೇಶನದಲ್ಲಿ ಭಾಗವಹಿಸಲು ರಾಜ್ಯಪಾಲರು ನಿರಾಕರಿಸಿದರೆ ಕಾನೂನಾತ್ಮಕ ಹೋರಾಟಕ್ಕೆ ಮೊರೆ ಹೋಗಲು ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿಗೆ ಬುಧವಾರ ರಾತ್ರಿಯೇ ದೆಹಲಿಗೆ ತೆರಳುವಂತೆ ಸೂಚಿಸುವ ಮೂಲಕ ಸರ್ಕಾರ ಎಲ್ಲಾ ರೀತಿಯ ಸಾಧ್ಯತೆಗಳಿಗೂ ತೆರೆದುಕೊಂಡಿದೆ.
ಜಂಟಿ ಅಧಿವೇಶನದ ಭಾಷಣದಲ್ಲಿ ಜಿ ರಾಮ್ ಜಿ ಕಾಯ್ದೆ ವಿರುದ್ಧದ ಪ್ಯಾರಾಗಳಿವೆ. ರಾಷ್ಟ್ರಪತಿಗಳು ಅಂಕಿತ ಹಾಕಿರುವ ವಿಬಿ ಜಿ ರಾಮ್ ಜಿ ಕಾಯ್ದೆ ವಿರುದ್ಧ ಅವರಿಂದ ನಾಮನಿರ್ದೇಶಿತನಾಗಿರುವ ರಾಜ್ಯಪಾಲರು ಮಾತನಾಡಲು ಆಗುವುದಿಲ್ಲ ಎಂಬುದು ರಾಜ್ಯಪಾಲರ ಸಮರ್ಥನೆ. ಆದರೆ, ರಾಜ್ಯಪಾಲರ ಭಾಷಣ ಸಿದ್ಧಪಡಿಸುವುದು ರಾಜ್ಯ ಸರ್ಕಾರದ ಅಧಿಕಾರ. ಸಚಿವ ಸಂಪುಟ ಸಿದ್ಧಪಡಿಸಿರುವ ಭಾಷಣವನ್ನಷ್ಟೇ ರಾಜ್ಯಪಾಲರು ಓದಬೇಕು. 11 ಪ್ಯಾರಾಗಳನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಸರ್ಕಾರದ ನಿಲುವು.
ಈ ಪಟ್ಟು-ಬಿಗಿಪಟ್ಟಿನ ಹಿನ್ನೆಲೆಯಲ್ಲಿ ಬುಧವಾರ ಇಡೀ ದಿನ ಸಂಧಾನ ಪ್ರಹಸನ ಹಲವು ಸುತ್ತಿನ ಸಭೆ, ಮಾತುಕತೆಗಳಿಗೆ ಸಾಕ್ಷಿಯಾಯಿತು. ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರ ನೇತೃತ್ವದ ನಿಯೋಗವು ರಾಜ್ಯಪಾಲರ ಮನವೊಲಿಕೆಗೆ ಯತ್ನಿಸಿದರೂ ಪ್ರಯೋಜನವಾಗಿಲ್ಲ. 11 ಪ್ಯಾರಾ ಕೈಬಿಡುವ ರಾಜ್ಯಪಾಲರ ಬೇಡಿಕೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆದಿದ್ದು, ಭಾಷೆ ಬಳಕೆಯಲ್ಲಿ ತುಸು ಬದಲಾವಣೆ ಮಾಡಬಹುದು. ಆದರೆ 11 ಪ್ಯಾರಾಗಳಲ್ಲಿ ವಿಷಯ ಕೈಬಿಡಲು ಸಾಧ್ಯವಿಲ್ಲ ಎಂದು ಸರ್ಕಾರ ಸ್ಪಷ್ಟ ನಿಲುವು ಕೈಗೊಂಡಿತು.
ಈ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲು ರಾಜ್ಯಪಾಲರ ಥಾವರ್‌ಚಂದ್ ಗೆಹಲೋತ್ ಅವರು ವಿಧಾನಸೌಧಕ್ಕೆ ಬರಲಿದ್ದಾರೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆಯಿದೆ. ಒಂದು ವೇಳೆ ಜಂಟಿ ಅಧಿವೇಶನಕ್ಕೆ ಆಗಮಿಸಿದರೂ ರಾಜ್ಯ ಸರ್ಕಾರ ನೀಡಿರುವ ಭಾಷಣವನ್ನು ಸಂಪೂರ್ಣ ಓದಲಿದ್ದಾರೆಯೇ ಅಥವಾ ಕೇಂದ್ರದ ವಿರುದ್ಧದ ಅಂಶಗಳನ್ನು ಕೈಬಿಟ್ಟು ಉಳಿದ ಭಾಷಣ ಓದುತ್ತಾರೆಯೇ ಎಂಬ ಚರ್ಚೆಯೂ ನಡೆದಿದೆ.
ರಾಜ್ಯಪಾಲರು ಪೂರ್ತಿ ಭಾಷಣ ಓದದೆ ಕೇಂದ್ರ ಸರ್ಕಾರದ ವಿರುದ್ಧದ 11 ಪ್ಯಾರಾಗಳನ್ನು ಬಿಟ್ಟು ಓದಿದರೂ ರಾಜ್ಯ ಸರ್ಕಾರ 11 ಪ್ಯಾರಾಗಳನ್ನೂ ಸೇರಿಸಿ ಭಾಷಣ ಅಂಗೀಕರಿಸಬಹುದು. ಜತೆಗೆ ಅಷ್ಟೂ ಅಂಶಗಳನ್ನೂ ಸೇರಿಸಿ ಚರ್ಚೆಗೆ ತೆಗೆದುಕೊಳ್ಳಲು ಅವಕಾಶವಿದೆ. ಹೀಗಾಗಿ ಗುರುವಾರ ರಾಜ್ಯಪಾಲರ ನಡೆ ಏನಾಗಲಿದೆ ಎಂಬುದು ತೀವ್ರ ಕುತೂಹಲ ಹುಟ್ಟುಹಾಕಿದೆ.
ರಾಜ್ಯಪಾಲರನ್ನು ಗೌರವಪೂರ್ವಕವಾಗಿ ಕರೆದೊಯ್ಯಲು ಸರ್ಕಾರದ ಪ್ರತಿನಿಧಿಗಳು ಬೆಳಗ್ಗೆ 10.15 ಗಂಟೆಗೆ ಲೋಕಭವನಕ್ಕೆ ತೆರಳಲಿದ್ದಾರೆ. ಈ ವೇಳೆ ರಾಜ್ಯಪಾಲರು ವಿಧಾನಸೌಧಕ್ಕೆ ಬರಲು ಒಪ್ಪದಿದ್ದರೆ ಲೋಕಭವನದಲ್ಲಿ ಹೈಡ್ರಾಮಾ ಸೃಷ್ಟಿಯಾಗುವ ಸಾಧ್ಯತೆಯಿದೆ.
ಮೂಲಗಳ ಪ್ರಕಾರ ರಾಜ್ಯಪಾಲರಿಗೆ ಅಧಿವೇಶನದಲ್ಲಿ ಭಾಗವಹಿಸಬಾರದು ಎಂಬ ಉದ್ದೇಶವಿಲ್ಲ. ಆದರೆ, ರಾಷ್ಟ್ರಪತಿಗಳು ಅಂಕಿತ ಹಾಕಿರುವ ಕಾಯ್ದೆ ವಿರುದ್ಧವಾಗಿ ತಮ್ಮಿಂದ ಮಾತನಾಡಿಸುವುದಕ್ಕೆ ಅಷ್ಟೇ ಆಕ್ಷೇಪ. ಈ ಹಿನ್ನೆಲೆಯಲ್ಲಿ ಅದನ್ನು ತೆಗೆದು ಹಾಕುವಂತೆ ತಿಳಿಸಿದ್ದಾರೆ. ರಾಜ್ಯಪಾಲರು ಅಧಿವೇಶನಕ್ಕೆ ಬರಲಿದ್ದಾರೆ ಎಂದು ತಿಳಿದುಬಂದಿದೆ.
ಅಧಿವೇಶನದಲ್ಲಿ ಭಾಗವಹಿಸಲು ಬರುವುದಿಲ್ಲ ಎಂದು ರಾಜ್ಯಪಾಲರು ಸರ್ಕಾರಕ್ಕೆ ಹೇಳಿಲ್ಲ. 11 ಪ್ಯಾರಾ ಕೈಬಿಡಲು ಹೇಳಿದ್ದರು. ಆದರೆ ಅದು ಸರ್ಕಾರದ ನಿಲುವಾಗಿದ್ದು, ಕೈಬಿಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದೇವೆ. ನಮಗೆ ರಾಜ್ಯಪಾಲರು ಆಗಮಿಸುವ ವಿಶ್ವಾಸವಿದ್ದು, ಗುರುವಾರ ಏನು ಮಾಡಲಿದ್ದಾರೆ ಎಂಬುದನ್ನು ನೋಡಬೇಕು ಎಂದು ಮುಖ್ಯಮಂತ್ರಿಗಳ ಕಚೇರಿ ಮೂಲಗಳು ತಿಳಿಸಿವೆ.
ರಾಜ್ಯಪಾಲರು ರಾಜ್ಯ ಸರ್ಕಾರ ನೀಡಿರುವ ಭಾಷಣವನ್ನೇ ಪೂರ್ಣ ಪ್ರಮಾಣದಲ್ಲಿ ಓದಿದರೆ ಪ್ರತಿಪಕ್ಷಗಳು ಭಾಷಣದ ಪ್ರತಿಯನ್ನು ಹರಿದು ಹಾಕುವ ಸಾಧ್ಯತೆಯಿದೆ. ಹೀಗಾಗಿ ರಾಜ್ಯಪಾಲರು ಯಾವ ರೀತಿ ಭಾಷಣ ಮಾಡಲಿದ್ದಾರೆ ಅದಕ್ಕೆ ಸರ್ಕಾರ ಹಾಗೂ ಪ್ರತಿಪಕ್ಷಗಳ ಪ್ರತಿಕ್ರಿಯೆ ಹೇಗಿರಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
ರಾಜ್ಯಪಾಲರ ಆಕ್ಷೇಪವೇನು?:
ರಾಜ್ಯಪಾಲರ ಭಾಷಣದಲ್ಲಿ ಜಂಟಿ ಅಧಿವೇಶನ ಕರೆದಿರುವ ಉದ್ದೇಶದ ಬಗ್ಗೆ ತಿಳಿಸಬೇಕು. ಹೀಗಾಗಿ ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಿರುವ ರಾಜ್ಯಪಾಲರ ಭಾಷಣದಲ್ಲಿ ಮನರೇಗಾ ಯೋಜನೆ ರದ್ದುಪಡಿಸಿ ಜಿ ರಾಮ್ ಜಿ ಕಾಯ್ದೆ ಜಾರಿಗೊಳಿಸಿರುವುದನ್ನು ಕಟು ಪದಗಳಲ್ಲಿ ಟೀಕಿಸಲಾಗಿದೆ.
ಕೇಂದ್ರ ಸರ್ಕಾರವು ಮನರೇಗಾ ಕಾಯ್ದೆ ವಾಪಸ್ ಪಡೆದು ವಿಬಿ ಜಿ ರಾಮ್ ಜಿ ಅಂತಹ ಕರಾಳ ಕಾನೂನು ಮಾಡುವ ಮೂಲಕ ಗ್ರಾಮೀಣ ಭಾಗದ ಜನರ ಉದ್ಯೋಗದ ಹಕ್ಕು ಕಸಿದಿದೆ. ಉದ್ಯೋಗ ಖಾತ್ರಿ ಯೋಜನೆಯ ಕೆಲಸಗಳನ್ನು ನಿರ್ಧರಿಸುವ ಹಕ್ಕು ಪಂಚಾಯ್ತಿಗಳಿಂದ ಕಸಿದು ಸಂವಿಧಾನದ 73ರ ಅಧಿಕಾರ ವಿಕೇಂದ್ರೀಕರಣ ನಿಯಮ ಉಲ್ಲಂಘಿಸಿದೆ. ಆಸ್ತಿ ಸೃಜನೆಗೆ ಇದ್ದ ಅವಕಾಶ ಕಸಿಯಲಾಗಿದೆ. ಕೇಂದ್ರ ಹಾಗೂ ರಾಜ್ಯದ ನಡುವೆ ಇದ್ದ ಶೇ.90:ಶೇ.10ರ ಅನುಪಾತದಲ್ಲಿ ಇದ್ದ ಅನುದಾನವನ್ನು ಶೇ.60:40ಕ್ಕೆ ಇಳಿಕೆ ಮಾಡಿ ರಾಜ್ಯದ ಕತ್ತು ಹಿಸುಕಲಾಗಿದೆ.
ಜತೆಗೆ ಜಿಎಸ್‌ಟಿ ಅನ್ಯಾಯ, ಕೇಂದ್ರದ ಯೋಜನೆಗಳಿಗೆ ಅನುದಾನ ತಾರತಮ್ಯ, ತೆರಿಗೆ ಪಾಲು ಹಂಚಿಕೆಯಲ್ಲಿನ ಅನ್ಯಾಯ, 15ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಆಗಿರುವ ತಾರತಮ್ಯ ಬಗ್ಗೆ ವಿಸ್ತೃತವಾಗಿ ಟೀಕಿಸಲಾಗಿದೆ.
ಈ ಅಂಶಗಳ ಬಗ್ಗೆ ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ್ದು, ನಾನು ರಾಷ್ಟ್ರಪತಿಗಳ ಅಡಿ ಕೆಲಸ ಮಾಡುವ ಸಾಂವಿಧಾನಿಕ ಹುದ್ದೆಯಲ್ಲಿದ್ದೇನೆ. ವಿಬಿ ಜಿ ರಾಮ್ ಜಿ ಕಾಯ್ದೆಗೆ ಡಿಸೆಂಬರ್‌ನಲ್ಲೇ ರಾಷ್ಟ್ರಪತಿಗಳ ಅಂಕಿತ ಆಗಿದೆ. ಅದರ ವಿರುದ್ಧ ಮಾತನಾಡುವುದು ತಪ್ಪಾಗುತ್ತದೆ. ಆ 11 ಪ್ಯಾರಾ ತೆಗೆಯಿರಿ ಎಂಬುದು ರಾಜ್ಯಪಾಲರ ವಾದ.
ಇದರಿಂದ ನೆರೆಯ ತಮಿಳುನಾಡು ಮತ್ತು ಕೇರಳದಂತೆ ಕರ್ನಾಟಕದಲ್ಲೂ ಕಾರ್ಯಾಂಗ ಮತ್ತು ಶಾಸಕಾಂಗದ ನಡುವೆ ಸಂಘರ್ಷದ ವಾತಾವರಣ ಸೃಷ್ಟಿಯಾಗಿದೆ.