ಗಿರೀಶ್ ಗರಗ
ಕೇಂದ್ರ ಸರ್ಕಾರ ಮತ್ತು ಹೈಕೋರ್ಟ್ ಸೂಚನೆ ನಂತರ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗೆ ನಿಯಮ ರೂಪಿಸುವ ಸಂಬಂಧ ಸಾರಿಗೆ ಇಲಾಖೆ ಅಧಿಕಾರಿಗಳು ದೇಶದ ಇತರ ಪ್ರಮುಖ 5 ನಗರಗಳಲ್ಲಿನ ಬೈಕ್ ಟ್ಯಾಕ್ಸಿ ಸೇವೆ ಮತ್ತು ನಿಯಮಗಳನ್ನು ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿದ್ದು, ಅದನ್ನು ಗುರುವಾರ ಹೈಕೋರ್ಟ್‌ಗೆ ಸಲ್ಲಿಸಲಿದ್ದಾರೆ.
ಆಟೋ, ಟ್ಯಾಕ್ಸಿ ಚಾಲಕರ ಮತ್ತು ಮಾಲೀಕರು ಭಾರೀ ವಿರೋಧದಿಂದಾಗಿ ರಾಜ್ಯ ಸರ್ಕಾರ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸಿತ್ತು. ಈ ಕುರಿತು ಹೈಕೋರ್ಟ್‌ಗೂ ಅಫಿಡವಿಟ್ ಸಲ್ಲಿಸಿ ಬೈಕ್ ಟ್ಯಾಕ್ಸಿ ಸೇವೆಗೆ ಸೂಕ್ತ ನಿಯಮ ರೂಪಿಸುವುದಿಲ್ಲ ಎಂದು ತಿಳಿಸಿತ್ತು. ಅದಾದ ನಂತರ ಕೇಂದ್ರ ಸರ್ಕಾರ ಜುಲೈನಲ್ಲಿ ಬಿಡುಗಡೆ ಮಾಡಿದ್ದ ಮೋಟಾರು ವಾಹನ ಅಗ್ರಿಗೇಟರ್ ಮಾರ್ಗಸೂಚಿ 2025ರಲ್ಲಿ ರಾಜ್ಯಗಳಲ್ಲಿ ಬೈಕ್ ಟ್ಯಾಕ್ಸಿ ಸೇವೆಗೆ ಸೂಕ್ತ ನಿಯಮ ರೂಪಿಸಿ ಅನುಮತಿ ನೀಡಬಹುದು ಎಂದು ತಿಳಿಸಲಾಗಿತ್ತು.ಅದರ ಆಧಾರದಲ್ಲಿ ರ್‍ಯಾಪಿಡೋ, ಉಬರ್, ಒಲಾದಂತಹ ಅಗ್ರಿಗೇಟರ್ ಸಂಸ್ಥೆಗಳು ಬೈಕ್ ಟ್ಯಾಕ್ಸಿ ಸೇವೆಗೆ ನಿಯಮ ರೂಪಿಸಿ, ಅನುಮತಿಸುವಂತೆ ಸರ್ಕಾರಕ್ಕೆ ಸೂಚಿಸಬೇಕೆಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಬೈಕ್ ಟ್ಯಾಕ್ಸಿ ಸೇವೆ ಕುರಿತು ನಿಲುವು ತಿಳಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು.
ಬೈಕ್ ಟ್ಯಾಕ್ಸಿ ಭವಿಷ್ಯ ಗುರುವಾರ ನಿರ್ಧಾರ:
ಮೂಲಗಳ ಪ್ರಕಾರ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗೆ ಷರತ್ತು ಬದ್ಧ ಅನುಮತಿ ನೀಡುವ ಸಾಧ್ಯತೆಗಳಿವೆ. ಈಗಾಗಲೇ ದೇಶದ 10ಕ್ಕೂ ಹೆಚ್ಚಿನ ನಗರಗಳಲ್ಲಿ ಬೈಕ್ ಟ್ಯಾಕ್ಸಿ ಸೇವೆ ಚಾಲ್ತಿಯಲ್ಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ರಾಜ್ಯದಲ್ಲಿ ಕೆಲ ಷರತ್ತುಗಳನ್ನು ವಿಧಿಸಿ, ಬೈಕ್ ಚಾಲಕರು ಮತ್ತು ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿ ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿಸುವ ಕುರಿತು ಸಾರಿಗೆ ಇಲಾಖೆ ಚಿಂತನೆಯನ್ನೂ ನಡೆಸಿದೆ.
ಬೈಕ್ ಟ್ಯಾಕ್ಸಿ ಸೇವೆ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ರಾಜ್ಯ ಸರ್ಕಾರ ಕಳೆದ ಕೆಲದಿನಗಳ ಹಿಂದೆ ಸಾರಿಗೆ ಇಲಾಖೆ ಕಾರ್ಯದರ್ಶಿ ಎನ್.ವಿ. ಪ್ರಸಾದ್ ನೇತೃತ್ವದಲ್ಲಿ 11 ಜನರ ಉನ್ನತ ಮಟ್ಟದ ಸಮಿತಿ ರಚಿಸಿತ್ತು. ಅದರಲ್ಲಿ ನಗರ ಭೂ-ಸಾರಿಗೆ ನಿರ್ದೇಶನಾಲಯ, ಕಾರ್ಮಿಕ ಇಲಾಖೆ, ಬಿಎಂಟಿಸಿ, ಸಂಚಾರ ಪೊಲೀಸ್ ಅಧಿಕಾರಗಳನ್ನು ಸಮಿತಿಯಲ್ಲಿ ಸೇರ್ಪಡೆ ಮಾಡಲಾಗಿತ್ತು. ಈ ಸಮಿತಿ ಇದೀಗ ವರದಿ ಸಿದ್ಧಪಡಿಸಿ, ಗುರುವಾರ ಹೈಕೋರ್ಟ್‌ಗೆ ವರದಿ ಸಲ್ಲಿಸಲಿದೆ.
- ಎ.ಎಂ. ಯೋಗೀಶ್, ಸಾರಿಗೆ ಆಯುಕ್ತ.