- ಖರ್ಗೆ ಬಳಿಗೆ ಪಟ್ಟಿ । ಶೀಘ್ರವೇ ಅಂತಿಮ ಸಂಭವ- ಎಂ.ಎಲ್.ಮೂರ್ತಿ ಮೈಸೂರು ಮುಡಾ ಅಧ್ಯಕ್ಷ?- ಸಂಪಂಗಿ, ಗಫೂರ್, ಅಘಾ, ಪ್ಯಾರೇಜಾನ್ ಹೆಸರು?
--- ಸಿದ್ದರಾಮಯ್ಯ, ಡಿಕೆಶಿ, ಸುರ್ಜೇವಾಲಾ ಮಧ್ಯೆ ಸುದೀರ್ಘ ಚರ್ಚೆ ಬಳಿಕ ಅಂತಿಮವಾಗಿದ್ದ ಪಟ್ಟಿ- ವೇಣುಗೋಪಾಲ್ ಬಳಿ ಇದ್ದ ನಿಗಮ-ಮಂಡಳಿ ಪಟ್ಟಿ ಇದೀಗ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಲ್ಲಿಕೆ- ಕೆಲ ಬದಲಾವಣೆಗಳೊಂದಿಗೆ ಅಂತಿಮಗೊಳಿಸಿ ಸಿದ್ದರಾಮಯ್ಯ ಅವರಿಗೆ ರವಾನಿಸಲಿರುವ ಖರ್ಗೆ- ಸಿಎಂ ಆದೇಶದ ಬಳಿಕ ಸಂಬಂಧಿಸಿದ ಇಲಾಖೆಗಳಿಂದ ನೇಮಕಾತಿ ಆದೇಶ ಪ್ರಕಟ ನಿರೀಕ್ಷೆ
---ಕನ್ನಡಪ್ರಭ ವಾರ್ತೆ ಬೆಂಗಳೂರುಮೈಸೂರಿನ ಮುಡಾ ಅಧ್ಯಕ್ಷ ಸ್ಥಾನ ಸೇರಿ 35-37 ಮಂದಿ ಕಾಂಗ್ರೆಸ್ ನಾಯಕರಿಗೆ ದಸರಾ ಉಡುಗೊರೆಯಾಗಿ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ಪ್ರಕಟವಾಗುವ ಸಾಧ್ಯತೆಯಿದೆ.
ಕಾಂಗ್ರೆಸ್ ನಾಯಕ ಎಂ.ಎಲ್.ಮೂರ್ತಿಗೆ ಮೈಸೂರಿನ ಮುಡಾ ಅಧ್ಯಕ್ಷ ಸ್ಥಾನ ದೊರೆಯುವ ನಿರೀಕ್ಷೆ ಇದೆ ಎನ್ನಲಾಗಿದೆ. ಇದಲ್ಲದೆ, ಮಾಜಿ ಶಾಸಕ ಎನ್.ಸಂಪಂಗಿ, ಆಸ್ಕರ್ ಫರ್ನಾಂಡಿಸ್ ಆಪ್ತ ಗಫೂರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಘಾ ಸುಲ್ತಾನ್, ಸೇವಾದಳದ ಮಾಜಿ ಅಧ್ಯಕ್ಷೆ ಪ್ಯಾರೇಜಾನ್ ಸೇರಿ 35 ರಿಂದ 37 ಮಂದಿಗೆ ನಿಗಮ-ಮಂಡಳಿ ಭಾಗ್ಯ ಒಲಿಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.ಈ ಕುರಿತ ಪಟ್ಟಿ ಈಗಾಗಲೇ ಹೈಕಮಾಂಡ್ ಬಳಿ ಸೇರಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಅವರು ಸುದೀರ್ಘ ಚರ್ಚೆ ನಡೆಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರಿಗೆ ಹಿಂದೆಯೇ ಪಟ್ಟಿ ಸಲ್ಲಿಸಿದ್ದರು.
ಎರಡು ದಿನಗಳ ಹಿಂದೆ ಕೆ.ಸಿ.ವೇಣುಗೋಪಾಲ್ ಕಚೇರಿಯಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಳಿಗೆ ಪಟ್ಟಿ ಕಳುಹಿಸಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಕೆಲ ಬದಲಾವಣೆಗಳೊಂದಿಗೆ ಪಟ್ಟಿ ಅಂತಿಮಗೊಳಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶೀಘ್ರ ರವಾನಿಸಲಿದ್ದಾರೆ. ಮುಖ್ಯಮಂತ್ರಿಗಳ ಆದೇಶದ ಬಳಿಕ ಸಂಬಂಧಪಟ್ಟ ಇಲಾಖೆಗಳಿಂದ ನೇಮಕಾತಿ ಆದೇಶ ಹೊರ ಬೀಳಲಿದೆ ಎಂದು ತಿಳಿದುಬಂದಿದೆ.