ದಲಿತ ಸಮುದಾಯದ ಹಿತರಕ್ಷಣೆಗೆ ಬದ್ದ: ಗಣೇಶ್‌ ಪ್ರಸಾದ್‌

KannadaprabhaNewsNetwork | Published : Nov 5, 2023 1:15 AM

ಸಾರಾಂಶ

ದಲಿತ ಸಮುದಾಯದ ಹಿತರಕ್ಷಣೆ ಮುಖ್ಯ,ದಲಿತರ ಸಮಸ್ಯೆಗಳಿದ್ದರೆ ಹೇಳಿ ಪರಿಹಾರ ಮಾಡೋಣ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಅಭಯ ನೀಡಿದರು.

ಪಟ್ಟಣದಲ್ಲಿ ನಡೆದ ಪ.ಜಾತಿ,ಪಂಗಡಗಳ ಹಿತರಕ್ಷಣಾ ಸಭೆ । ದಲಿತರಿಗೆ ಬ್ಯಾಂಕ್ ಸಾಲ ನಿರಾಕರಣೆ ಆರೋಪ

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆದಲಿತ ಸಮುದಾಯದ ಹಿತರಕ್ಷಣೆ ಮುಖ್ಯ,ದಲಿತರ ಸಮಸ್ಯೆಗಳಿದ್ದರೆ ಹೇಳಿ ಪರಿಹಾರ ಮಾಡೋಣ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಅಭಯ ನೀಡಿದರು. ಪಟ್ಟಣದ ತಾಲೂಕು ಕಚೇರಿಯ ಸಭಾ ಭವನದಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ನಿಮ್ಮ ಜೊತೆ ನಾನು ಇರುತ್ತೇನೆ. ನಾನು ಶಾಸಕನಾಗಿ ಆರು ತಿಂಗಳಾಗಿವೆ. ಕ್ಷೇತ್ರದಲ್ಲಿ ಜನರ ಸಮಸ್ಯೆಗಳು ಇವೆ. ಸಮಸ್ಯೆ ಬಗೆಹರಿಸಲು ಕಾಲಾವಕಾಶ ಬೇಕು ಎಂದರು. ಗದ್ದಲ,ಕೂಗಾಟ:ಸಭೆಯಲ್ಲಿ ಲೀಡ್‌ ಬ್ಯಾಂಕ್‌ ಅಧಿಕಾರಿ ಅನುಪಾಲನ ವರದಿ ಓದುವಾಗ ಕಾಂತರಾಜ ಅಸುರ,ಮುತ್ತಣ್ಣ, ಹನುಮಂತು,ಸಿದ್ದಯ್ಯ,ಹೊರೆಯಾಲ ಕೃಷ್ಣ ತಕರಾರು ತಗೆದು ದಲಿತರಿಗೆ ಸರ್ಕಾರ ಸಾಲ ನೀಡಿದರೂ ಬ್ಯಾಂಕ್‌ಗಳು ಸಾಲ ನೀಡುತ್ತಿಲ್ಲ ಎಂದು ಕೂಗಾಡಿ, ಗದ್ದಲ ಎಬ್ಬಿಸಿ ಗುಂಡ್ಲುಪೇಟೆ ತಾಲೂಕಿನ ಎಷ್ಟು ಜನರಿಗೆ ಸಾಲ ಕೊಟ್ಟಿದ್ದೀರಾ? ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.ಆಗ ಲೀಡ್‌ ಬ್ಯಾಂಕ್‌ ಅಧಿಕಾರಿ ಮಾತನಾಡಿ ತಾಲೂಕಿನಲ್ಲಿ ಎಸ್ಸಿಯ ೬೯೬೭ ಜನರಿಗೆ ೪೯ ಕೋಟಿ ಸಾಲ ನೀಡಲಾಗಿದೆ. ಎಸ್‌ಟಿಯ ೫೪೩೮ ಜನರಿಗೆ ೩೫.೬ ಕೋಟಿ ಸಾಲ ನೀಡಲಾಗಿದೆ ಎಂದು ಉತ್ತರಿಸಿದರು.ಇದಕ್ಕೆ ತೃಪ್ತವಾಗದ ಕೆಲ ಮುಖಂಡರು, ಸರ್ಕಾರ ಸಬ್ಸಿಡಿ ದರದಲ್ಲಿ ಸಾಲ ನೀಡುತ್ತಿದೆ. ಆದರೆ ಬ್ಯಾಂಕ್ ಗಳು ಸಿಬಿಲ್‌ ಸ್ಕೋರ್‌ ಇಲ್ಲವೆಂದು ಸಾಲ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಲೀಡ್‌ ಬ್ಯಾಂಕ್‌ ಅಧಿಕಾರಿ ಉತ್ತರಿಸಿ, ಸಿಬಿಲ್‌ ಸ್ಕೋರ್‌ ಇಲ್ಲದೆ ಸಾಲ ಸಿಗಲ್ಲ ಎಂದಾಗ ಮತ್ತೆ ಗದ್ದಲ,ಕೂಗಾಟ ನಡೆಯಿತು. ದಲಿತ ಮುಖಂಡ ಕಾಂತರಾಜ ಅಸುರ ಮಾತನಾಡಿ ,ತಾಲೂಕಿನ ಬ್ಯಾಂಕ್‌ಗಳು ಗ್ರಾಹಕರ ಸಭೆ ನಡೆಸುತ್ತಿಲ್ಲ. ಸರ್ಕಾರದ ಸಾಲಕ್ಕೆ ಸಬ್ಸಿಡಿ ಹಣ ನೀಡದೆ ಸತಾಯಿಸುತ್ತಿದ್ದಾರೆ.ಬ್ಯಾಂಕ್‌ ಸಿಬ್ಬಂದಿಗೆ ಭಾಷೆ ಸಮಸ್ಯೆಯಿಂದ ಗ್ರಾಹಕರು ಪರದಾಡುತ್ತಿದ್ದಾರೆ ಎಂದು ದೂರಿದರು.ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಮಾತನಾಡಿ, ಕೂಡಲೇ ಬ್ಯಾಂಕ್‌ಗಳು ಗ್ರಾಹಕರ ಸಭೆ ನಡೆಸುವಂತೆ ಸೂಚನೆ ನೀಡಬೇಕು ಎಂದು ಲೀಡ್‌ ಬ್ಯಾಂಕ್‌ ಅಧಿಕಾರಿಗೆ ಸೂಚನೆ ನೀಡಿದರು.

ಕ್ಷೇತ್ರ ಶಾಂತಿಯುತವಾಗಿರಬೇಕು:

ಗುಂಡ್ಲುಪೇಟೆ: ಕ್ಷೇತ್ರ ಶಾಂತಿಯುತವಾಗಿರಬೇಕು,ಸುಖಾ ಸುಮ್ಮನೆ ಕೇಸು ಹಾಕಲು ಬಿಡಲ್ಲ. ಕೇಸು ಬಂದರೆ ರಾಜಿ ಮಾಡಲು ಸೂಚನೆ ನೀಡಿದ್ದೇನೆ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹೇಳಿದರು. ಗುಂಡ್ಲುಪೇಟೆ ಕ್ಷೇತ್ರದಲ್ಲಿ ಎಚ್.ಕೆ.ಶಿವರುದ್ರಪ್ಪ,ಕೆ.ಎಸ್. ನಾಗರತ್ನಮ್ಮ,ಎಚ್.ಎಸ್.ಮಹದೇವಪ್ರಸಾದ್‌,ಡಾ.ಗೀತಾ ಮಹದೇವಪ್ರಸಾದ್‌,ಸಿ.ಎಸ್.ನಿರಂಜನ್‌ ಕುಮಾರ್‌ ಹಾಗು ನಾನು ಸೇರಿದಂತೆ ಆರು ಜನರಿಗೆ ಅವಕಾಶ ಸಿಕ್ಕಿದೆ. ಕ್ಷೇತ್ರ ಶಾಂತಿಯುತವಾಗಿದೆ. ಮುಂದೆಯೂ ಶಾಂತಿಯುತವಾಗಿರಲಿದೆ ಎಂದರು.

ಹಿರೀಕಾಟಿ ಸ್ಮಶಾನದ ಜಾಗದಲ್ಲಿ ಅಕ್ರಮ ಕ್ವಾರಿ:ಗುಂಡ್ಲುಪೇಟೆ: ಹಿರೀಕಾಟಿ ಕ್ವಾರಿಯ ಸ್ಮಶಾನದ ಜಾಗವನ್ನು ಬಿಡದೆ ಅಕ್ರಮವಾಗಿ ಕ್ವಾರಿ ಮಾಡುತ್ತಿದ್ದಾರೆ. ದಲಿತರು ಶವ ಹೂಳಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಶಾಸಕರು,ತಹಸೀಲ್ದಾರ್‌ ಗೆ ದೂರು ಸಲ್ಲಿಸಿದರು. ಸ್ಮಶಾನದಿಂದ ೨೦೦ ಮೀಟರ್‌ ದೂರ ಕೆಲಸ ಮಾಡಂಗಿಲ್ಲ ಎಂಬ ನಿಯಮವಿದೆ.ಕ್ವಾರಿಯಿಂದ ಗ್ರಾಮಸ್ಥರಿಗೆ ತೊಂದರೆಯಾದರೆ ಕ್ರಮ ಕೈಗೊಂಡು ಸ್ಥಳ ಪರಿಶೀಲನೆ ನಡೆಸಿ ಎಂದು ತಹಸೀಲ್ದಾರ್‌ಗೆ ಶಾಸಕರು ಸೂಚಿಸಿದರು.ಸಭೆಯಲ್ಲಿ ತಹಸೀಲ್ದಾರ್‌‌ ಟಿ.ರಮೇಶ್‌ ಬಾಬು, ಎಸ್‌ಸಿ,ಎಸ್ಟಿ ಹಿತ ರಕ್ಷಣಾ ಸಮಿತಿ ಸದಸ್ಯರಾದ ಬೆಟ್ಟಹಳ್ಳಿ ಕೆಂಪರಾಜು,ಬಂಗಾರನಾಯಕ,ಡಿ.ಶ್ರೀನಿವಾಸ ಮೂರ್ತಿ,ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ರಾಮಲಿಂಗಯ್ಯ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ನಂಜುಂಡೇಗೌಡ, ಪೊಲೀಸ್‌ ಇನ್ಸ್‌ಪೆಕ್ಟರ್‌ ಎಸ್.ಪರಶಿವಮೂರ್ತಿ, ಬೇಗೂರು ಸರ್ಕಲ್‌ ಇನ್ಸ್‌ಪೆಕ್ಟರ್‌ ವಿ.ಸಿ.ವನರಾಜು ಇದ್ದರು.-----

ಬಾಕ್ಸ್...

ಸಿಬಿಲ್‌ʼ ಪಾಠ ಮಾಡಿದ ಶಾಸಕ ಗಣೇಶ್‌ ಪ್ರಸಾದ್!ಗುಂಡ್ಲುಪೇಟೆ: ಗುಂಡ್ಲುಪೇಟೆ ಎಸ್‌ಸಿ,ಎಸ್ಟಿ ಹಿತರಕ್ಷಣಾ ಸಮಿತಿ ಸಭೆಯಲ್ಲಿ ದಲಿತರಿಗೆ ಬ್ಯಾಂಕ್‌ ಗಳಲ್ಲಿ ಸಿಬಿಲ್‌ ನೆಪದಲ್ಲಿ ಸಾಲ ನೀಡುತ್ತಿಲ್ಲ ಎಂದು ದಲಿತ ಮುಖಂಡರು ದೂರಿದಾಗ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಸಿಬಿಲ್‌ ಸ್ಕೋರ್ ಬಗ್ಗೆ ಕೆಲ ಕಾಲ ಸಭಿಕರಿಗೆ ಪಾಠ ಮಾಡಿದರು.ಸಿಬಿಲ್‌ ಸ್ಕೋರ್‌ ಆಧಾರವಾಗಿಟ್ಟುಕೊಂಡೇ ಸಾಲ ನೀಡುವುದಾಗಿ ಆರ್‌ಬಿಐ ಬ್ಯಾಂಕಿನ ಆದೇಶವಿದೆ. ಆರ್‌ಬಿಐ ಸ್ವತಂತ್ರ ಸಂಸ್ಥೆಯಾಗಿದೆ. ಇದರಲ್ಲಿ ನಾನು,ನೀವು ಏನು ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು. ಸಾಲ ಪಡೆದವರು ಮರುಪಾವತಿ ಮಾಡದಿದ್ದರೆ ಹಾಗೂ ಬೇರೆಯವರ ಸಾಲಕ್ಕೆ ಗ್ಯಾರಂಟಿ ಹಾಕಿದ್ದರೂ ಸಿಬಿಲ್‌ ಸ್ಕೋರ್‌ ಬರುವುದಿಲ್ಲ. ಸಿಬಿಲ್‌ ಸ್ಕೋರ್‌ ಇಲ್ಲದಿದ್ರೆ ಬ್ಯಾಂಕ್‌ನವರು ಸರ್ಕಾರ ಹೇಳಿದರೂ ಸಾಲ ನೀಡಲ್ಲ. ಹಾಗಾಗಿ ಸಾಲ ಪಡೆದವರು ಮರು ಪಾವತಿ ಮಾಡಬೇಕು ಎಂದರು.

---- ೪ಜಿಪಿಟಿ೨ಗುಂಡ್ಲುಪೇಟೆಯಲ್ಲಿ ಎಸ್‌ಸಿ,ಎಸ್‌ಟಿ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಮಾತನಾಡಿದರು.೪ಜಿಪಿಟಿ೩ಗುಂಡ್ಲುಪೇಟೆಯಲ್ಲಿ ಎಸ್‌ಸಿ,ಎಸ್‌ಟಿ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಸಂಘ,ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ದಲಿತ ಮುಖಂಡರು.

-------------

Share this article