ಕನ್ನಡಪ್ರಭ ವಾರ್ತೆ ಬೆಂಗಳೂರು
ಯಲಹಂಕ, ಮಹಾದೇವಪುರ, ಬ್ಯಾಟರಾಯನಪುರ, ದೊಡ್ಡಬಳ್ಳಾಪುರ, ಆನೇಕಲ್, ಯಶವಂತಪುರ ಸೇರಿದಂತೆ ಡಂಪಿಂಗ್ ಯಾರ್ಡ್‌ಗಳಿರುವ ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 350 ಕೋಟಿ ರು. ಅನುದಾನ ಬಿಡುಗಡೆ ಮಾಡುವುದಾಗಿ ಜಿಬಿಎ ಆಯುಕ್ತರು ಭರವಸೆ ಹೇಳಿರುವ ನೀಡಿರುವ ಹಿನ್ನೆಲೆಯಲ್ಲಿ ಬೆಳ್ಳಹಳ್ಳಿ, ಮಿಟ್ಟಗಾನಹಳ್ಳಿ, ಕಣ್ಣೂರು, ದೊಡ್ಡಬಳ್ಳಾಪುರ ಡಂಪಿಂಗ್ ಯಾರ್ಡ್‌ಗಳಲ್ಲಿ ಕಸ ಸುರಿಯಲು ಕಸದ ಲಾರಿಗಳಿಗೆ ಅನುವು ಮಾಡಿಕೊಡಲಾಗಿದೆ.
ಬುಧವಾರ ರಾತ್ರಿಯಿಂದಲೇ ಕಸದ ಲಾರಿಗಳು ಕಸವನ್ನು ಡಂಪ್ ಮಾಡಿ ನಗರಕ್ಕೆ ಹಿಂದಿರುಗಿವೆ. ನಗರದ ವಿವಿಧೆಡೆ ಮಸ್ಟರಿಂಗ್ ಕೇಂದ್ರಗಳಿಂದ ಕಸವನ್ನು ಡಂಪಿಂಗ್ ಯಾರ್ಡ್‌ಗಳಿಗೆ ಸಾಗಿಸುವ ಪ್ರಕ್ರಿಯೆ ಆರಂಭವಾಗಿದೆ. ಉತ್ತರ ಪಾಲಿಕೆ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ಶೇ.90ರಷ್ಟು ಪರಿಹಾರವಾಗಿದೆ. ಬಹುತೇಕ ಮಸ್ಟರಿಂಗ್ ಕೇಂದ್ರಗಳಿಂದ ಕಸವನ್ನು ಸಾಗಿಸಲಾಗಿದೆ. ಕೆಲವೆಡೆ ಬಾಕಿ ಉಳಿದಿದ್ದು, ಶುಕ್ರವಾರದ ವೇಳೆಗೆ ಎಲ್ಲಾ ಕಡೆಗಳಿಂದಲೂ ಕಸವನ್ನು ಸಾಗಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದರು.ಡಂಪಿಂಗ್ ಯಾರ್ಡ್‌ಗಳ ಅಸಮರ್ಪಕ ನಿರ್ವಹಣೆ, ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ. ನಿಗದಿಗಿಂತ ಹೆಚ್ಚಿನ ಕಸದ ಲಾರಿಗಳ ಸಂಚಾರದಿಂದ ಸ್ಥಳೀಯರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಆರೋಪಿಸಿ ಬೆಳ್ಳಹಳ್ಳಿ ಮತ್ತು ಮಿಟ್ಟಗಾನಹಳ್ಳಿ ಹಾಗೂ ದೊಡ್ಡಬಳ್ಳಾಪುರ ಬಳಿಯ ಡಂಪಿಂಗ್ ಯಾರ್ಡ್ ವ್ಯಾಪ್ತಿಯ ನಾಗರಿಕರು ಹಾಗೂ ಸ್ಥಳೀಯ ಶಾಸಕರು ಕಸದ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದ್ದರು.
ಏಕಾಏಕಿ 150ಕ್ಕೂ ಹೆಚ್ಚು ಲಾರಿಗಳನ್ನು ಡಂಪಿಂಗ್ ಯಾರ್ಡ್‌ಗಳಲ್ಲಿ ತಡೆದು ನಿಲ್ಲಿಸಿದ್ದರಿಂದ ನಗರದ ಕಸ ವಿಲೇವಾರಿ ಸಮಸ್ಯೆ ಬಿಗಡಾಯಿಸಿತ್ತು. ಅನೇಕ ಮಸ್ಟರಿಂಗ್ ಕೇಂದ್ರಗಳು ಹಾಗೂ ಕಸ ಸಾಗಿಸುವ ಆಟೋಗಳಲ್ಲೇ ನಗರದ ಕಸ ಉಳಿದುಕೊಂಡಿತ್ತು. ಗುರುವಾರವೂ ಮಲ್ಲೇಶ್ವರ, ಕೆ.ಆರ್. ಮಾರುಕಟ್ಟೆ, ಜೆ.ಸಿ. ರಸ್ತೆ ಗಾಂಧಿ ನಗರ ಮುಂತಾದ ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿ ಕಸ ವಿಲೇವಾರಿ ಮಾಡುವ ಆಟೋಗಳಲ್ಲಿ ಕಸ ಇರುವುದು ಕಂಡು ಬಂತು.ಎಂದಿನಂತೆ ಕಸ ಸಂಗ್ರಹ:
ಇನ್ನು ಮನೆ ಮನೆಗಳಿಂದ ಕಸ ಸಂಗ್ರಹಿಸುವ ಪ್ರಕ್ರಿಯೆಯು ಎಂದಿನಂತೆ ಮುಂದುವರಿದಿದೆ. ಯಾವುದೇ ಅಡಚಣೆ ಆಗಿಲ್ಲ. ವಾಣಿಜ್ಯ ಮಳಿಗೆಗಳಿಂದಲೂ ಕಸವನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.