ನಾಳೆಯಿಂದ ‘ಗೆಫೆಕ್ಸ್‌’ ಸಮ್ಮೇಳನ: ಸಚಿವ ಖರ್ಗೆ

KannadaprabhaNewsNetwork | Published : Feb 26, 2025 1:31 AM

ಸಾರಾಂಶ

ರಾಜ್ಯದಲ್ಲಿ ಆನಿಮೇಶನ್‌, ಗೇಮಿಂಗ್‌, ಕಾಮಿಕ್ಸ್‌ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಆಕರ್ಷಿಸಲು ಹಾಗೂ ಹೆಚ್ಚಿನ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಫೆ.27ರಿಂದ ಮೂರು ದಿನ ಬೆಂಗಳೂರು ‘ಗೆಫೆಕ್ಸ್‌ (ಜಿಎಎಫ್‌ಎಕ್ಸ್‌ )-2025’ ಸಮ್ಮೇಳನ ನಗರದ ಲಲಿತ್ ಅಶೋಕ ಹೋಟೆಲ್‌ನಲ್ಲಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ಆನಿಮೇಶನ್‌, ಗೇಮಿಂಗ್‌, ಕಾಮಿಕ್ಸ್‌ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಆಕರ್ಷಿಸಲು ಹಾಗೂ ಹೆಚ್ಚಿನ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಫೆ.27ರಿಂದ ಮೂರು ದಿನ ಬೆಂಗಳೂರು ‘ಗೆಫೆಕ್ಸ್‌ (ಜಿಎಎಫ್‌ಎಕ್ಸ್‌ )-2025’ ಸಮ್ಮೇಳನ ನಗರದ ಲಲಿತ್ ಅಶೋಕ ಹೋಟೆಲ್‌ನಲ್ಲಿ ನಡೆಯಲಿದೆ.

ಮಂಗಳವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ, ಈ ಬಾರಿಯ ಸಮ್ಮೇಳನವು ‘ತಲ್ಲೀನತೆಯ ಭವಿಷ್ಯ: ಅನುಭವಿಸಿ, ಅನ್ವೇಷಿಸಿ, ಭೇದಿಸಿ‘ ವಿಷಯದ ಅಡಿ ನಡೆಯಲಿದೆ. ಸಮ್ಮೇಳನದಲ್ಲಿ ಸಾರ್ವಜನಿಕರಿಗೆ ಕ್ರಿಯಾತ್ಮಕವಾದ ವಲಯಗಳ ವೀಕ್ಷಣೆಗೆ ಅವಕಾಶ ಇರುತ್ತದೆ. ಜೊತೆಗೆ ಈ ಕ್ಷೇತ್ರದಲ್ಲಿನ ವಿಶ್ವದ ನಾಯಕರ ಜೊತೆ ಸಂವಾದ, ಹೂಡಿಕೆದಾರರ ಸಂಪರ್ಕ ನಡೆಯಲಿದೆ. ಈ ಕ್ಷೇತ್ರದಲ್ಲಿ ಆಗಿರುವ ಅಗಾಧವಾದ ತಂತ್ರಜ್ಞಾನದ ಬದಲಾವಣೆಯನ್ನು ವೀಕ್ಷಿಸಬಹುದಾಗಿದೆ, ಸುಮಾರು 20 ಸಾವಿರಕ್ಕೂ ಹೆಚ್ಚು ಜನರು ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ಎವಿಜಿಸಿ-ಎಕ್ಸ್‌ಆರ್‌ ಕ್ಷೇತ್ರದಲ್ಲಿ ಕೆಲಸ ಮಾಡುವವರು, ಸ್ಟುಡಿಯೋಗಳು ಸೇರಿದಂತೆ ಹಲವು ಉತ್ಸಾಹಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ಪ್ರಸ್ತುತ ಈ ಕ್ಷೇತ್ರದಿಂದ ದೇಶಕ್ಕೆ ಬರುವ ಒಟ್ಟು ಆದಾಯದಲ್ಲಿ ಕರ್ನಾಟಕದ ಕೊಡುಗೆ ಹೆಚ್ಚಾಗಿದೆ. ಅನಿಮೇಷನ್‌ ಮೂಲಕ ಹೊಸ ಉದ್ಯೋಗ ಸೃಷ್ಠಿಯಾಗುತ್ತಿದೆ. ಅಮೆರಿಕ, ಕೆನಡಾ ದೇಶಗಳಿಗೆ ಔಟ್‌ ಸೋರ್ಸ್‌ ನೀಡಲಾಗುತ್ತಿದೆ. ವಿಶೇಷವಾಗಿ ಭಾರತದಲ್ಲಿ ಗೇಮಿಂಗ್‌ ಕೈಗಾರಿಕೆ ದೊಡ್ಡದಾಗಿ ಬೆಳೆಯುತ್ತಿದೆ. ಈ ಕ್ಷೇತ್ರಕ್ಕೆ ಶೇ.28ರಷ್ಟು ಜಿಎಸ್‌ಟಿ ತೆರಿಗೆ ಇದ್ದರೂ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ. ಪ್ರಸ್ತುತ ದೇಶದಲ್ಲಿ 590 ದಶಲಕ್ಷ ಗೇಮರ್ಸ್‌ ಇದ್ದಾರೆ. ಈ ಪೈಕಿ ಪೇಯಿಡ್‌ ಗೇಮರ್ಸ್‌ ಸಹ ಇದ್ದಾರೆ. ಮುಂದಿನ ಮೂರು ವರ್ಷದೊಳಗೆ ಸುಮಾರು 50 ಸಾವಿರ ಉದ್ಯೋಗ ಸೃಷ್ಟಿಯಾಗುವ ಭರವಸೆ ಇದೆ ಎಂದು ಸಚಿವರು ವಿವರಿಸಿದರು.

ಮಾಹಿತಿ ಇಲಾಖೆಯ ಕಾರ್ಯದರ್ಶಿ ಏಕ್‌ರೂಪ್‌ ಕೌರ್‌ ಮಾತನಾಡಿ, ರಾಜ್ಯ ಸರ್ಕಾರ ಈಗಾಗಲೇ ಎವಿಜಿಸಿ ನೀತಿ ಜಾರಿಗೆ ತಂದಿದ್ದು, ನಂತರ ನೆರೆಯ ಮಹಾರಾಷ್ಟ್ರ ಜಾರಿಗೆ ತಂದಿದೆ ಎಂದ ಸಚಿವ ಖರ್ಗೆ, ಈ ವರ್ಷ ಎವಿಜಿಜಿಸಿ ಕ್ಷೇತ್ರದಲ್ಲಿ ಸ್ಟಾರ್ಟ್‌ ಅಪ್, ಐಪಿ ಸೃಷ್ಠಿ ವಲಯದಲ್ಲಿ ಬಂಡವಾಳ ಹೂಡಿಕೆಯನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ ಎಂದು ಹೇಳಿದರು.

ಬೆಂಗಳೂರು ಗೆಫೆಕ್ಸ್ ಅಧ್ಯಕ್ಷ ಮತ್ತು ‘ಅಬಯ್‌’ ಅಧ್ಯಕ್ಷ ಬಿರೇನ್ ಘೋಷ್ ಮಾತನಾಡಿ, ಬೇರೆ ಬೇರೆ ಭಾಗಗಳಿಂದ ತಂತ್ರಜ್ಞಾನದ ವಿವಿಧ ರೂಪಗಳನ್ನು ಹಾಗೂ 12ಕ್ಕೂ ಹೆಚ್ಚು ರಾಜ್ಯಗಳಿಂದ ಪ್ರತಿನಿಧಿಗಳನ್ನು ಒಳಗೊಳ್ಳುವ ಇಂಡಿಯಾ ಎಕ್ಸ್‌ಪೋವನ್ನು ಪ್ರಸ್ತುತಪಡಿಸಲಿದೆ. ಕಥೆ ಹೇಳುವ ಕಲೆಯನ್ನು ಮರುವ್ಯಾಖ್ಯಾನಿಸುವ ಭವಿಷ್ಯದ ಬುದ್ಧಿಮತ್ತೆಯ ಪ್ರತಿಯೊಂದು ಮುಖವನ್ನೂ ತೆರೆದಿಡುವ ಅತಿ ದೊಡ್ಡದಾದ ಏಕೈಕ ಪ್ರದರ್ಶನ ಇದಾಗಲಿದೆ ಎಂದರು.

Share this article