ಕನ್ನಡಪ್ರಭ ವಾರ್ತೆ ಬೆಳಗಾವಿ
ಚಿಕ್ಕಮಗಳೂರು-ಉಡುಪಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗಾದ ಮಾದರಿಯಲ್ಲೇ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸ್ಪರ್ಧೆಗೂ ಬಿಜೆಪಿಯಲ್ಲೇ ಅಪಸ್ವರ ತೀವ್ರಗೊಂಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ''''ಗೋ ಬ್ಯಾಕ್ ಶೆಟ್ಟರ್'''' ಅಭಿಯಾನ ತೀವ್ರಗೊಂಡಿರುವುದರ ಜೊತೆಗೆ ಇದೇ ಮೊದಲ ಬಾರಿ ಬೆಳಗಾವಿ ನಗರದಲ್ಲಿ ಬಹಿರಂಗವಾಗಿಯೇ ಶೆಟ್ಟರ್ ವಿರೋಧಿ ಬ್ಯಾನರ್‌ಗಳು ಬುಧವಾರ ಪ್ರತ್ಯಕ್ಷವಾಗಿವೆ.
ವಲಸಿಗರ ಬದಲು ಸ್ಥಳೀಯರಿಗೇ ಟಿಕೆಟ್ ನೀಡುವಂತೆ ಸ್ಥಳೀಯ ಬಿಜೆಪಿ ನಾಯಕರು ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆನ್ನಲಾಗಿದ್ದು, ಇದರ ನಡುವೆಯೇ ''''ಗೋಬ್ಯಾಕ್ ಶೆಟ್ಟರ್'''' ಅಭಿಯಾನ ಸಾಮಾಜಿಕ ಜಾಲತಾಣದಲ್ಲಿ ತೀವ್ರಗೊಂಡಿದೆ.
ವಿಧಾನಸಭಾ ಚುನಾವಣೆ ವೇಳೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ತೊರೆದು ಜಗದೀಶ್ ಶೆಟ್ಟರ್ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತರೂ ನಂತರ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಲೋಕಸಭಾ ಚುನಾವಣೆ ವೇಳೆಗೆ ಕಾಂಗ್ರೆಸ್ ತೊರೆದು ಬಿಜೆಪಿಗೆ ವಾಪಸ್ ಆಗಿರುವ ಶೆಟ್ಟರ್ ಧಾರವಾಡ ಅಥವಾ ಹಾವೇರಿ ಕ್ಷೇತ್ರದ ಟೆಕೆಟ್‌ಗೆ ಬೇಡಿಕೆ ಇಟ್ಟಿದ್ದರು.
ಆದರೆ, ಹಾವೇರಿಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಧಾರವಾಡದಿಂದ ಪ್ರಹ್ಲಾದ್ ಜೋಶಿ ಅವರಿಗೆ ಟಿಕೆಟ್ ಅಂತಿಮಗೊಂಡಿರುವ ಹಿನ್ನೆಲೆಯಲ್ಲಿ ಬೆಳಗಾವಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಬಿಜೆಪಿ ಕೇಂದ್ರ ನಾಯಕರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಆದರೆ ಹೊರಗಿನವರು ಬೆಳಗಾವಿಯ ಅಭ್ಯರ್ಥಿಯಾಗುತ್ತಿರುವುದಕ್ಕೆ ಬಿಜೆಪಿ ಸ್ಥಳೀಯ ಮುಖಂಡರು, ಕಾರ್ಯಕರ್ತರಿಂದಲೇ ವಿರೋಧ ವ್ಯಕ್ತವಾಗುತ್ತಿದೆ.
ಶೆಟ್ಟರ್ ಸ್ಪರ್ಧೆಗೆ ವ್ಯಂಗ್ಯ ಬರಹ: ಬೆಳಗಾವಿಯಲ್ಲಿ ಶೆಟ್ಟರ್ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದ್ದಾರೆನ್ನಲಾದ ಕೆಲ ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಗೋಬ್ಯಾಕ್ ಶೆಟ್ಟರ್, ಸ್ಥಳೀಯ ಅಭ್ಯರ್ಥಿಗಳಿಗೇ ಟಿಕೆಟ್ ನೀಡಿ ಎಂದು ಕೆಲದಿನಗಳಿಂದ ನಡೆಸುತ್ತಿದ್ದು, ಅದೀಗ ತೀವ್ರಗೊಂಡಿದೆ.
ಇದರ ನಡುವೆಯೇ ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಬಳಿ ಶೆಟ್ಟರ್ ಸ್ಪರ್ಧೆ ವಿರೋಧಿಸಿ ಬ್ಯಾನರ್‌ಗಳು ಪ್ರತ್ಯಕ್ಷವಾಗಿವೆ.
''''ಬರ್ರಿ ಶೆಟ್ಟರ್-ಉಂಡು ಹೋಗ್ರಿ... ಬೆಳಗಾವಿ ನಿಮ್ಮಂಥವರಿಗೆ ಬಿಟ್ಟಿ ಬಿದ್ದೈತಿ'''' ಎನ್ನುವ ಬ್ಯಾನರ್ ಹಾಕಿ ವ್ಯಂಗ್ಯ ಬರಹದ ಮೂಲಕ ಶೆಟ್ಟರ್ ಸ್ಪರ್ಧೆಗೆ ತೀವ್ರ ವಿರೋಧ ವ್ಯಕ್ತಪಡಿಸಲಾಗಿದೆ.
ಶೆಟ್ಟರ್ ವಿರುದ್ಧ ಬ್ಯಾನರ್: ಬಿಜೆಪಿ ಖಂಡನೆ, ದೂರು
ನಗರದಲ್ಲಿ ಶೆಟ್ಟರ್ ವಿರುದ್ಧ ಅವಹೇಳನಕಾರಿ ಪೋಸ್ಟರ್‌ಗಳನ್ನು ಹಾಕಿರುವುದನ್ನು ಬಿಜೆಪಿ ಮಹಾನಗರ ಜಿಲ್ಲಾ ಘಟಕದಿಂದ ತೀವ್ರವಾಗಿ ಖಂಡಿಸಲಾಗಿದೆ. ಜತೆಗೆ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷೆ ಗೀತಾ ಸುತಾರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮತ್ತು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಲಾಗಿದೆ.