ಕಾವೇರಿ ಇಕ್ಕಟ್ಟಿನಲ್ಲಿ ಸರ್ಕಾರ : ನೀರು ಬಿಡುಗಡೆಗೆ ನಿರ್ವಹಣಾ ಪ್ರಾಧಿಕಾರದಿಂದಲೂ ಆದೇಶ

Published : Jul 31, 2026, 04:52 AM IST
KRS Dam

ಸಾರಾಂಶ

15 ದಿನಗಳ ಕಾಲ ನಿತ್ಯ 3500 ಕ್ಯುಸೆಕ್‌ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಲು ಸೂಚಿಸಿದ್ದ ಕಾವೇರಿ ನೀರು ನಿಯಂತ್ರಣ ಸಮಿತಿ  ಆದೇಶದ ವಿರುದ್ಧ ರಾಜ್ಯದಲ್ಲಿ ಪ್ರತಿಭಟನೆ ಭುಗಿಲೆದ್ದಿರುವಾಗಲೇ, ಸಿಡಬ್ಲ್ಯುಆರ್‌ಸಿ ಆದೇಶವನ್ನು ಈಗ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕೂಡ ಎತ್ತಿ ಹಿಡಿದಿದೆ.

ನವದೆಹಲಿ/ಬೆಂಗಳೂರು :  15 ದಿನಗಳ ಕಾಲ ನಿತ್ಯ 3500 ಕ್ಯುಸೆಕ್‌ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಲು ಸೂಚಿಸಿದ್ದ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ)ಯ ಆದೇಶದ ವಿರುದ್ಧ ರಾಜ್ಯದಲ್ಲಿ ಪ್ರತಿಭಟನೆ ಭುಗಿಲೆದ್ದಿರುವಾಗಲೇ, ಸಿಡಬ್ಲ್ಯುಆರ್‌ಸಿ ಆದೇಶವನ್ನು ಈಗ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಕೂಡ ಎತ್ತಿ ಹಿಡಿದಿದೆ.

ಮುಂಗಾರು ಮಳೆ ಕೊರತೆಯಿಂದಾಗಿ ಕಾವೇರಿ ಕೊಳ್ಳದ ಜಲಾಶಯಗಳು ಖಾಲಿ ಇದ್ದರೂ 15 ದಿನಗಳಲ್ಲಿ 4 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಕಾವೇರಿಗೆ ಸಂಬಂಧಿಸಿದ ಎರಡು ಸಂಸ್ಥೆಗಳು ಆದೇಶಿಸಿರುವುದು ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಮುಂದೇನು ಮಾಡಬೇಕು ಎಂಬ ಬಗ್ಗೆ ಚರ್ಚಿಸಲು ರಾಜ್ಯ ಸರ್ಕಾರ ಭಾನುವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸರ್ವಪಕ್ಷಗಳ ಸಭೆಯನ್ನು ಆಯೋಜಿಸಿದೆ.

ಭಾನುವಾರ ನಡೆಯಲಿರುವ ಸರ್ವ ಪಕ್ಷ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಣಯದಂತೆ ಮುಂದಿನ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅಲ್ಲಿಯವರೆಗೆ ತಮಿಳುನಾಡಿಗೆ ನೀರು ಬಿಡುವ ವಿಚಾರದಲ್ಲಿ ಯಾವುದೇ ಕ್ರಮ ಕೈಗೊಳ್ಳದಿರಲು ಸರ್ಕಾರ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕಕ್ಕೆ ಹಿನ್ನಡೆ:

ತಮಿಳುನಾಡಿಗೆ 15 ದಿನ ನಿತ್ಯ 3500 ಕ್ಯುಸೆಕ್‌ ನೀರು ಹರಿಸುವಂತೆ ಕಾವೇರಿ ಜಲ ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ) ಜು.28ರಂದು ಸೂಚಿಸಿತ್ತು. ಇದರ ವಿರುದ್ಧ ಕರ್ನಾಟಕ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ)ಗೆ ಮೇಲ್ಮನವಿ ಸಲ್ಲಿಸಿತ್ತು. ಒಳಹರಿವಿನ ಸಮಸ್ಯೆಯಿಂದಾಗಿ ತೀವ್ರ ಜಲಸಂಕಷ್ಟವಿದೆ. ಹೀಗಾಗಿ ಇನ್ನೂ 15 ದಿನಗಳ ಕಾಲ ನೀರು ಬಿಡುಗಡೆ ಆದೇಶಕ್ಕೆ ತಡೆಯೊಡ್ಡಬೇಕು ಎಂದು ಮನವಿ ಮಾಡಿತ್ತು. ಆದರೆ, ಗುರುವಾರ ನಡೆದ ಸಿಡಬ್ಲ್ಯುಎಂಎ ಸಭೆಯಲ್ಲಿ ಸಿಡಬ್ಲ್ಯುಆರ್‌ಸಿ ಆದೇಶವನ್ನು ಎತ್ತಿ ಹಿಡಿಯಲಾಗಿದೆ.

ಸೂಪರ್‌ ಎಲ್‌ ನಿನೋ ಪರಿಣಾಮದಿಂದಾಗಿ ಕರ್ನಾಟಕದ ಜಲಾಶಯಗಳಲ್ಲಿ ಶೇ.65.65ರಷ್ಟು ಮಾತ್ರವೇ ನೀರು ಇದೆ. ಇದು 30 ವರ್ಷಗಳ ಸರಾಸರಿಗಿಂತ ಕಡಿಮೆಯಾಗಿದೆ. ತಮಿಳುನಾಡಿಗೆ ಹಿಂಗಾರು ಮಳೆಯಾಗುವ ನಿರೀಕ್ಷೆ ಇದೆ. 3500 ಕ್ಯುಸೆಕ್‌ ಹರಿಸುವಂತೆ ಆದೇಶಿಸಿದ್ದರೂ, ಬಿಳಿಗುಂಡ್ಲುವಿಗೆ ನೀರು ತಲುಪಬೇಕೆಂದರೆ 7000 ಕ್ಯುಸೆಕ್‌ ಬಿಡುಗಡೆ ಮಾಡಬೇಕಾಗುತ್ತದೆ. 2027ರ ಜೂನ್‌ವರೆಗೂ ಕುಡಿಯುವ ನೀರಿನ ಅವಶ್ಯಕತೆಗೇ 40 ಟಿಎಂಸಿ ಬೇಕಾಗಿದೆ ಎಂದು ಸರ್ಕಾರ ವಾದಿಸಿತು. ಆದರೆ, 3500 ಕ್ಯುಸೆಕ್‌ ಬದಲಿಗೆ ಇನ್ನೂ ಹೆಚ್ಚಿನ ನೀರು ಬಿಡುಗಡೆ ಮಾಡುವಂತೆ ತಮಿಳುನಾಡು ಸರ್ಕಾರ ವಾದ ಮಂಡಿಸಿತು.

ಕರ್ನಾಟಕದ ಪರವಾಗಿ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಗೌರವ್‌ ಗುಪ್ತಾ ಹಾಜರಿದ್ದರು. ಅವರು ಸಭೆಯ ಬಳಿಕ ದೆಹಲಿಯಲ್ಲಿಯೇ ಬೀಡು ಬಿಟ್ಟಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಪ್ರಾಧಿಕಾರದ ನಿರ್ದೇಶನವನ್ನು ತಿಳಿಸಿದರು.

ಸರ್ವ ಪಕ್ಷ ಸಭೆ:

ಕಾವೇರಿ ನೀರಿನ ವಿಚಾರವಾಗಿ ಬರುವ ಭಾನುವಾರ (ಆಗಸ್ಟ್ 2)ರಂದು ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಸರ್ವಪಕ್ಷ ಸಭೆ ಕರೆಯಲಾಗಿದೆ. ರಾಜ್ಯದ ಮಾಜಿ ಮುಖ್ಯಮಂತ್ರಿಗಳು, ಕಾವೇರಿ ಜಲಾನಯನ ಪ್ರದೇಶದ ಸಂಸದರು, ಶಾಸಕರಿಗೆ ಆಹ್ವಾನ ನೀಡಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ನಿನ್ನೆ ಏನಾಯ್ತು?

- 15 ದಿನಗಳ ಕಾಲ ನಿತ್ಯ 3500 ಕ್ಯುಸೆಕ್‌ ನೀರು ಬಿಡುಗಡೆ ಮಾಡಲು ಜು.28ರಂದು ಸೂಚಿಸಿದ್ದ ಸಿಡಬ್ಲ್ಯುಆರ್‌ಸಿ

- ಇದರ ವಿರುದ್ಧ ಕರ್ನಾಟಕ ಸರ್ಕಾರದ ಮೇಲ್ಮನವಿ ವಿಚಾರಣೆ ನಡೆಸಿದ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ

- ಎಲ್‌ನಿನೋದಿಂದ ಬರಗಾಲವಿದೆ. ಡ್ಯಾಂಗಳಲ್ಲಿ 30 ವರ್ಷಕ್ಕಿಂತ ಕಡಿಮೆ ನೀರಿದೆ ಎಂದು ಕರ್ನಾಟಕದ ವಾದ

- ತ.ನಾಡಿಗೆ ಹಿಂಗಾರು ಮಳೆಯ ಅವಕಾಶವಿದೆ. ಈ ಹಿಂದೆ ಅವರಿಗೆ ಸಾಕಷ್ಟು ನೀರು ಬಿಟ್ಟಿದ್ದೇವೆ ಎಂದ ರಾಜ್ಯ

- 3500 ಕ್ಯುಸೆಕ್‌ ಬಿಡುಗಡೆಗೆ ಆದೇಶಿಸಿದ್ದರೂ ನೀರು ಬಿಳಿಗುಂಡ್ಲು ತಲುಪಲು 7000 ಕ್ಯುಸೆಕ್‌ ಬಿಡಬೇಕು: ಕರ್ನಾಟಕ

- ಸಿಡಬ್ಲ್ಯುಆರ್‌ಸಿ ಆದೇಶಕ್ಕೆ 15 ದಿನ ತಡೆ ನೀಡಲು ಕರ್ನಾಟಕ ಸರ್ಕಾರ ವಾದ. ಹೆಚ್ಚು ನೀರಿಗೆ ಬೇಡಿಕೆ ಇಟ್ಟ ತ.ನಾಡು

- ಆದರೆ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ) ಆದೇಶವನ್ನು ಎತ್ತಿ ಹಿಡಿದ ನಿರ್ವಹಣಾ ಪ್ರಾಧಿಕಾರ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ವಿದ್ಯಾರ್ಥಿಗಳ ಮೇಲೆ ಗುಂಡಿಗೆ ಶಾ ಆದೇಶ: ರಾಗಾ ಆರೋಪ
ಎಂಪಿಗಳ ಜತೆ ಸಿಎಂ ಸರ್ವಪಕ್ಷ ಸಭೆಗೆ ವಿಪಕ್ಷಗಳಿಂದ ಮೆಚ್ಚುಗೆ