ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ, ಯುವ ನಿಧಿ ಕಾರ್ಯಕ್ರಮ ಸ್ಥಗಿತ ಹುನ್ನಾರ : ಎಚ್.ಡಿ.ಕುಮಾರಸ್ವಾಮಿ ಆರೋಪ

KannadaprabhaNewsNetwork |  
Published : Nov 01, 2024, 12:19 AM ISTUpdated : Nov 01, 2024, 04:26 AM IST
HD Kumaraswamy

ಸಾರಾಂಶ

ಇನ್ನು ಕೆಲವೇ ದಿನಗಳಲ್ಲಿ ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ, ಯುವ ನಿಧಿ ಕಾರ್ಯಕ್ರಮಗಳನ್ನು ನಿಲ್ಲಿಸಲಿದ್ದಾರೆ. ಅದಕ್ಕೆ ಇವರು ಮರು ಪರಿಶೀಲನೆ ಎಂಬ ಪೀಠಿಕೆ ಹಾಕಿಕೊಂಡಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.

 ಚನ್ನಪಟ್ಟಣ : ಮಹಿಳೆಯರಿಗೆ ಉಚಿತ ಬಸ್ ಸಾರಿಗೆ ಸೌಲಭ್ಯ ಒದಗಿಸಲಾಗಿರುವ ಶಕ್ತಿ ಯೋಜನೆಯ ಸ್ಥಗಿತ, ಇಲ್ಲವೇ ಮರು ಪರಿಶೀಲನೆ ಮಾಡುವಂತೆ ಡಿ.ಕೆ.ಶಿವಕುಮಾರ್ ಅವರಿಗೆ ಮಹಿಳೆಯರು ಕನಸಿನಲ್ಲಿ ಬಂದು ಕೇಳಿದ್ದಾರೆಯೇ? ಅಥವಾ ದೇವರು ಬಂದು ಹೇಳಿದ್ದಾರೆಯೇ? ಒಂದೊಂದಾಗಿ 5 ಗ್ಯಾರಂಟಿಗಳನ್ನು ನಿಲ್ಲಿಸಲು ಇದೊಂದು ಮೊದಲ ಹೆಜ್ಜೆ ಅಷ್ಟೇ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.

ತಿಟ್ಟಮಾರನಹಳ್ಳಿ ಗ್ರಾಮದಲ್ಲಿ ಗುರುವಾರ ಪ್ರಚಾರ ನಡೆಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು ಕೆಲವೇ ದಿನಗಳಲ್ಲಿ ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ, ಯುವ ನಿಧಿ ಕಾರ್ಯಕ್ರಮಗಳನ್ನು ನಿಲ್ಲಿಸಲಿದ್ದಾರೆ. ಅದಕ್ಕೆ ಇವರು ಮರು ಪರಿಶೀಲನೆ ಎಂಬ ಪೀಠಿಕೆ ಹಾಕಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಮಹಿಳೆಯರು ಆರ್ಥಿಕವಾಗಿ ಬಲಾಢ್ಯರಾಗಿದ್ದಾರೆಯೇ?:

ಟ್ವೀಟ್ ಮೂಲಕ ಮಹಿಳೆಯರು ಶಕ್ತಿ ಯೋಜನೆಯನ್ನು ನಿಲ್ಲಿಸಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಯಾರು ಟ್ವೀಟ್ ಮಾಡಿದ್ದಾರೆ? ಅಥವಾ ಮಹಿಳೆಯರು ಆರ್ಥಿಕವಾಗಿ ಬಲಾಢ್ಯರಾಗಿದ್ದಾರೆ ಎಂದು ಇವರಿಗೆ ಹೊಸ ಜ್ಞಾನೋದಯ ಆಗಿದೆಯಾ? ಕೇವಲ ಒಂದೂವರೆ ವರ್ಷದಲ್ಲಿ ಇವರು ಆರ್ಥಿಕವಾಗಿ ಬಲಾಢ್ಯರಾಗಿದ್ದಾರೆಯೇ? ಎಂದು ಪ್ರಶ್ನಿಸಿದರು.

ಗ್ಯಾರಂಟಿಗಳ ಹೆಸರಿನಲ್ಲಿ ಜನರ ಬ್ರೈನ್ ವಾಷ್:

ಶಕ್ತಿ ಯೋಜನೆಯ ಮರು ಪರಿಶೀಲನೆಯ ನಾಟಕ ಗ್ಯಾರಂಟಿಗಳನ್ನು ಒಂದೊಂದಾಗಿಯೇ ತೆಗೆಯಲು ಮೊದಲ ಹಂತದ ಪ್ರಕ್ರಿಯೆ ಎಂದೇ ಭಾವಿಸಬೇಕಾಗುತ್ತದೆ. ಇದು ಗ್ಯಾರಂಟಿ ನಿಲ್ಲಿಸಲು ಒಂದು ಪೀಠಿಕೆ ಮಾತ್ರ. ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಗ್ಯಾರಂಟಿಗಳನ್ನೇ ಪ್ರಮುಖವಾಗಿ ಇವರು ಹೇಳುತ್ತಿದ್ದರು. ನುಡಿದಂತೆ ನಡೆದಿದ್ದೇವೆ ಎಂದು ಜನರ ಬ್ರೈನ್ ವಾಷ್ ಮಾಡುತ್ತಿದ್ದರು. ಇದರಿಂದ ಅಭಿವೃದ್ಧಿ ಕೆಲಸಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದರು ಎಂದು ಆರೋಪಿಸಿದರು.

ತೆರಿಗೆ ಅಧಿಕಾರಿಗಳ ಸಭೆ ಮಾಡಿ ಇನ್ನೂ ಹೆಚ್ಚುವರಿಯಾಗಿ 10 ಸಾವಿರ ಕೋಟಿ ವಸೂಲಿ ಮಾಡುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಅಂದರೆ, ಇನ್ನಷ್ಟು ಸುಲಿಗೆ ಮಾಡಿ ಅಂತ ಅರ್ಥ ಅಲ್ಲವೇ? ಇದು ಯಾವ ಪುರುಷಾರ್ಥಕ್ಕೆ? ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಗ್ಯಾರಂಟಿ ಬಗ್ಗೆ ನಮಗೆ ಹೊಟ್ಟೆ ಉರಿ ಇಲ್ಲ :

ನಮಗೆ ಗ್ಯಾರಂಟಿ ಬಗ್ಗೆ ಯಾವುದೇ ಹೊಟ್ಟೆ ಉರಿ ಇಲ್ಲ. ಗ್ಯಾರಂಟಿ ಬೇಕಾದರೆ ಡಬಲ್ ಮಾಡಿಕೊಳ್ಳಿ. ಆದರೆ ರಾಜ್ಯವನ್ನು ದಿವಾಳಿ ಮಾಡಬೇಡಿ. ಸರ್ಕಾರದ ಅಭಿವೃದ್ಧಿ ಶೂನ್ಯ ಆಗಿದೆ. ಬೇರೆ ದೇಶಗಳಲ್ಲಿ ಉಂಟಾಗಿರುವ ಆರ್ಥಿಕ ಅರಾಜಕತೆ ನಮ್ಮ ರಾಜ್ಯಕ್ಕೆ ಬರಬಾರದು ನನ್ನ ನಮ್ಮ ಕಳಕಳಿ ಎಂದು ಕುಮಾರಸ್ವಾಮಿ ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ.ಸಿ.ಪಾಟೀಲ್ ಸೇರಿದಂತೆ ಜೆಡಿಎಸ್ ಬಿಜೆಪಿ ಪಕ್ಷಗಳ ಹಲವಾರು ನಾಯಕರು ಇದ್ದರು.

PREV

Recommended Stories

ಸವದತ್ತಿ ಕ್ಷೇತ್ರ ₹230 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ: ಎಚ್‌ಕೆಪಿ
2028ಕ್ಕೂ ಗೆಲ್ತೀವಿ, ನಾನು ಸಿಎಂ ಆಗಲ್ಲ: ಸಿದ್ದರಾಮಯ್ಯ!